
Article · May 29, 2026
ಕಾಲದ ಗುರುತು
ಕತೆಗಾರ್ತಿ : ದಿವ್ಯಾ ಶಿರಂತಡ್ಕ.
ಚಂದ್ರಿ ಮದುವೆಯಾಗಿ ಗಂಡನ ಮನೆಗೆ ಬಂದಾಗ ಆಕೆಗಿನ್ನೂ ಹತ್ತೊಂಬತ್ತು. ಹುಡುಗಾಟಿಕೆ ಪೂರ್ತಿ ಬಿಟ್ಟಿರದ ಪ್ರಾಯ. ಪತಿ ಶ್ರೀಪತಿಯದು ತೂಕದ ಮಾತು, ನಡೆ. 'ಸಲಿಗೆ ಕೊಟ್ಟ ನಾಯಿ ನೊಸಲು ನೆಕ್ಕಿತು' ಎನ್ನುವಂತಾಗಬಾರದು ಎಂಬ ದೃಷ್ಟಿಯಿಂದ ಎಲ್ಲರಲ್ಲಿ, ಅದರಲ್ಲೂ ಹೊಸದಾಗಿ ಬಂದ ಮಡದಿ ಜೊತೆಯೂ ಮಾತಿನಲ್ಲಿ ಒಂದು ಅಂತರ ಕಾಯ್ದುಕೊಂಡಿದ್ದ. ಅತ್ತೆ, ಒಬ್ಬ ಮೈದುನ ಹಾಗೂ ಮದುವೆಯಾಗಿ ಹೋದ ಇಬ್ಬರು ಅತ್ತಿಗೆಯಂದಿರ ಸಂಸಾರ ಅವರದು. ದೀಪಾವಳಿಗೋ, ಮಾವನವರ ತಿಥಿಗೋ ಯಾವಾಗಲಾದರೂ ಬರುವ ಅತ್ತಿಗೆಯಂದಿರು ಒಂದೆರಡು ದಿನ ನಿಂತು ಹೋಗುವ ಅತಿಥಿಗಳು. ಮೈದುನನು ದೂರದ ಹಾಸ್ಟೆಲಲ್ಲಿ ನಿಂತು ಕಾಲೇಜು ಕಲಿಯುವ ವಿದ್ಯಾರ್ಥಿಯಾಗಿದ್ದರಿಂದ ರಜೆಯಲ್ಲಿ ಮಾತ್ರವೇ ಅವನ ಆಗಮನ.
ಅತ್ತೆಯದೂ ಅಷ್ಟೇ. ಯಾರಲ್ಲೂ ಸುಲಲಿತವಾಗಿ ಬೆರೆಯುವ ಗುಣವಲ್ಲ. ಎಲ್ಲವನ್ನೂ ಎಲ್ಲರನ್ನೂ ಒಂದು ರೀತಿಯ ಸಂಶಯ ದೃಷ್ಟಿಯಿಂದ ನೋಡುವಂತಹ ನೋಟ. ಅಂದ ಮೇಲೆ ಕೇಳಬೇಕೇ...ಹೊಸದಾಗಿ ಮದುವೆಯಾಗಿ ಬಂದ ಚಂದ್ರಿಯ ಮೇಲೆ ಅವರ ಗಮನ ಸದಾ ಸುತ್ತುತ್ತಿತ್ತು. ಆಕೆ ಪಾತ್ರೆ ತೊಳೆಯುವಾಗ , ಬಟ್ಟೆ ಒಗೆಯುವಾಗ, ನೆಲ ಒರೆಸುವಾಗ, ಹೂ ಕಟ್ಟುವಾಗ ಹೀಗೆ ಪ್ರತಿಯೊಂದು ಕೆಲಸವನ್ನೂ ಗಮನಿಸುತ್ತಿದ್ದರು. ಆಕೆ ಗಂಡನೊಂದಿಗೆ ಎಲ್ಲಿಗಾದರೂ ಮದುವಣಗಿತ್ತಿಯಂತೆ ಹೊರಟು ನಿಂತಾಗಲಂತೂ ಅವರ ಕಣ್ಣು ಅತ್ತಿಂದಿತ್ತ ಚಲಿಸುತ್ತಿರಲಿಲ್ಲ. ಇದೆಲ್ಲ ಚಂದ್ರಿಗೆ ಏನೋ ಒಂದು ರೀತಿಯ ಅವ್ಯಕ್ತ ಹಿಂಸೆ ಕೊಡುತ್ತಿತ್ತು. ಹಾಗಂತ ಅವರು ಆಕೆಯನ್ನು ನಿಂದಿಸುತ್ತಲೂ ಇರಲಿಲ್ಲ. ಅವರ ಪಾಡಿಗೆ ಅವರು ಸೊಸೆ ಬಂದ ಗಳಿಗೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡವರಂತೆ ಆರಾಮವಾಗಿದ್ದರು.
ಅಪರೂಪಕ್ಕೆ ಮನೆಗೆ ಬರುತ್ತಿದ್ದ ಮಗಳಂದಿರ ಜೊತೆ ಮನಸೋ ಇಚ್ಛೆ ಮಾತನಾಡಿ ಹಗುರಾದಂತೆ ಕಾಣುತ್ತಿತ್ತು ಚಂದ್ರಿಗೆ. ತಾನು ಎಷ್ಟಾದರೂ ಇತ್ತೀಚೆಗೆ ಬಂದವಳು ಎಂದು ಸಮಾಧಾನ ಪಡುತ್ತಾ ತನ್ನ ಕೆಲಸ ಕಾರ್ಯಗಳಲ್ಲಿ ಮಗ್ನಳಾಗಿರುತ್ತಿದ್ದಳು.
ಮದುವೆಯಾದ ಹೊಸದರಲ್ಲಿ 'ರೀ' ...ಎಂದು ಕರೆಯುತ್ತಿದ್ದ ಆಕೆ ಅದ್ಯಾಕೋ ' ಶ್ರೀ' ಎಂದು ಕರೆಯಲು ಪ್ರಾರಂಭಿಸಿದ್ದಳು. ಹಾಗೆ ಕರೆಯುವುದು ಆಕೆಗೆ ಹೆಚ್ಚು ಸಂತೋಷ ನೀಡುತ್ತಿತ್ತು. ಆದರೆ ಹಾಗೆ ಕರೆದಾಗ ಅತ್ತೆಯ ಹಣೆಯಲ್ಲಿ ಸಣ್ಣಗೆ ನೆರಿಗೆ ಹುಟ್ಟಿದ್ದು ಅವಳ ಗಮನಕ್ಕೆ ಬಾರದೆ ಇರಲಿಲ್ಲ. ಆದರೆ ತಾನಾಯಿತು ತನ್ನ ಕೆಲಸವಾಯಿತು ಎಂದು ತನ್ನ ಪತಿಯ ಬೇಕು ಬೇಡಗಳೊಂದಿಗೆ ತನ್ನ ಸಂತೋಷವನ್ನು ಕಂಡುಕೊಳ್ಳುತ್ತಾ ಕಾಲ ಸರಿದದ್ದೇ ಆಕೆಗೆ ಗೊತ್ತಾಗಿರಲಿಲ್ಲ. ಎರಡೂವರೆ ವರ್ಷದ ಅಂತರದಲ್ಲಿ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿನ ತಾಯಿಯಾಗಿದ್ದಳು ಚಂದ್ರಿ. ಸುಖಿ ಸಂಸಾರ ಎನ್ನಲಡ್ಡಿಯಿರದಂತಹ ಸಂಸಾರ. ಮಕ್ಕಳ ಲಾಲನೆ ಪಾಲನೆಯಲ್ಲಿ ಸಮಯ ಸರಿದದ್ದೇ ಗೊತ್ತಾಗುತ್ತಿರಲಿಲ್ಲ. ಅವರ ಬೇಕು ಬೇಡಗಳನ್ನು ನೋಡುತ್ತಾ ಮಕ್ಕಳನ್ನು ಶಾಲೆಗೂ, ಗಂಡನನ್ನು ಕಚೇರಿಗೂ ಕಳುಹಿಸಿಕೊಡುತ್ತಿದ್ದಳು. ಈ ನಡುವೆ ಮೈದುನನೂ ಸಂಸಾರಸ್ಥನಾಗಿ ಬೆಂಗಳೂರು ಸೇರಿದ್ದ. ಅತ್ತೆಗೆ ವಯೋ ಸಹಜ ಕಾಯಿಲೆಗಳು ಒಂದೊಂದೇ ಸರದಿಯಲ್ಲಿ ನಿಂತು ಸತಾಯಿಸುತ್ತಿತ್ತು. ಒಮ್ಮೆಯಾದರೂ ತನ್ನ ಬಗ್ಗೆ ಒಂದೆರಡು ಮೆಚ್ಚುಗೆಯ ಮಾತುಗಳನ್ನಾಡದ ಅತ್ತೆಗೆ
ಮೃದು ಹೃದಯವಿಲ್ಲ ಎಂದೇ ತೀರ್ಮಾನಿಸಿದ್ದಳು ಚಂದ್ರಿ. ಮೊಮ್ಮಕ್ಕಳನ್ನೂ 'ಎರಡೆಂದರೆ ಹೆಚ್ಚು ಒಂದೆಂದರೆ ಕಮ್ಮಿ' ಎನ್ನುವಷ್ಟೇ ಹಚ್ಚಿಕೊಂಡಿದ್ದರು.
ಒಮ್ಮೆ ಬೆಳಗ್ಗೆ ಶ್ರೀ ಹಾಗೂ ಮಕ್ಕಳು ಊಟಕ್ಕೆ ಕೂತಿದ್ದರು. ತಮ್ಮಿಷ್ಟದ ಮೊಸರನ್ನ ಬಾಯಿಗೆ ಇಟ್ಟಾಗ ಅದೆಲ್ಲಿತ್ತೋ ನೂಲಿನಂತಹ ಉದ್ದುದ್ದದ ಕೂದಲು. ಎಂದಿಗೂ ಅನ್ಯರಿಗೆ ನೋವುಂಟು ಮಾಡದ ಶ್ರೀ ಅಂದು ಮುಖ ಗಂಟಿಕ್ಕಿ 'ಛೇ' ಎನ್ನುತ್ತಾ ಎದ್ದು ಹಾಗೆಯೇ ತಿಂಡಿ ತಿನ್ನದೇ ಹೋಗಿದ್ದರು. ಆ ದಿನವೆಲ್ಲ ಚಂದ್ರಿಗೆ ವಿಚಿತ್ರ ಚಡಪಡಿಕೆ. ತಟ್ಟೆಯಲ್ಲಿ ಕಂಡ ಬಿಳಿ ಕೂದಲು... ಸಂಶಯವೇ ಇಲ್ಲ. ಅದು ಅತ್ತೆಯದೇ ...ಯಾಕೆಂದರೆ ತನ್ನದು ಇಪ್ಪತ್ತೆಂಟರ ಪ್ರಾಯದ ದಟ್ಟ, ಗಟ್ಟಿಮುಟ್ಟಾದ ನಯವಾದ ಕಡು ಕಪ್ಪು ಕೂದಲು. ಅರುವತ್ತೆಂಟರ ಅಂಚಿನಲ್ಲಿರುವ ಅತ್ತೆಯದು ಇದ್ದ ಬಿಳಿ ಕೂದಲುಗಳೂ ನೆಲ ಕಾಣುತ್ತಿದ್ದವು.
ಪ್ರಸಂಗ ತಾನು ಮತ್ತಷ್ಟು ಎಳೆಯದಿದ್ದರೆ ಖಂಡಿತ ಅಷ್ಟುದ್ದವಾಗುತ್ತಿರಲಿಲ್ಲ. ಅತ್ತೆ ಮೇಲಿನ ಬೂದಿ ಮುಚ್ಚಿದ ಕೆಂಡದಂತೆ ಸುಪ್ತವಾಗಿದ್ದ ಕೋಪ ಗರಿ ಬಿಚ್ಚಿ ಹೊರಬರಲು ಹವಣಿಸುತ್ತಿತ್ತು. ಆ ರಾತ್ರಿ ಶ್ರೀಯಲ್ಲಿ ' ಏನ್ರೀ ನಿಮ್ಮಮ್ಮನಿಗೆ ನೀವು ದೂರ ಹೋಗಿ ತಲೆ ಬಾಚಿಕೊಳ್ಳಲು ಹೇಳಿ. ನಾ ಹೇಳಿದರೆ ಅವರಿಗದು ರುಚಿಸದು. ನಿಮಗೆ ಇವತ್ತು... ನನಗೆ ಅದು ಎಷ್ಟು ಬಾರಿ ಊಟದಲ್ಲಿ ಸಿಕ್ಕಿದೆಯೋ ದೇವರೇ ಬಲ್ಲ'... ಎಂದು ಒಂದು ಸುಳ್ಳನ್ನು ಸೇರಿಸಿ ಹೇಳಿದಾಗ ಅವರೂ ತಲೆ ಆಡಿಸಿದ್ದರು.
ಎಂದೂ ಅಮ್ಮನ ಎದುರು ಖಡಕ್ ಮಾತನಾಡದ ಶ್ರೀ ಮರುದಿನ ಬೆಳಗ್ಗೆ ಕೊಂಚ ನಿಷ್ಠುರವಾಗಿಯೇ ಈ ವಿಷಯವನ್ನು ತೆಗೆದಿದ್ದರು. ಒಳಗೊಳಗೆ ಗೆಲುವಿನ ನಗೆ ಬೀರಿದ್ದಳು ಚಂದ್ರಿ. ಅದೆಷ್ಟೋ ವರ್ಷದಿಂದ ಕಾದು ಸಿಕ್ಕಿದಂತಹ ತೃಪ್ತಿ ಆಕೆಯದಾಗಿತ್ತು.
ಕಾಲ ತನ್ನ ಗುರುತುಗಳಲ್ಲಿ ಒಂದನ್ನೂ ಉಳಿಸದೆ ಸಾಗುತ್ತಲೇ ಇತ್ತು. ಅತ್ತೆ ಫ್ರೇಮಿನೊಳಗೆ ಸೇರಿ ಗೋಡೆ ಏರಿದ್ದರು. ಚಂದ್ರಿ ಮಗಳಿಗೂ ವಿವಾಹವಾಗಿ, ಪುಟಾಣಿ ಮಡಿಲು ಸೇರಿದ್ದ. ಮಗ ಅಮೆರಿಕ ಸೇರಿ ತನ್ನದೇ ಪ್ರಪಂಚವನ್ನು ಕಂಡುಕೊಂಡಿದ್ದ. ಐವತ್ತರ ಅಂಚು ದಾಟಿದಂತೆ ಚಂದ್ರಿಯ ಕೂದಲು ಮುಕ್ಕಾಲು ಭಾಗ ಹಣ್ಣಾಗಿತ್ತು. ಬಿಳಿ ಕೂದಲೆಂದರೆ ಮೊದಲೇ ಇಷ್ಟವಿರದ ಕಾರಣ ಅದು ಬಿಳಿಯಾಗಲು ತೊಡಗಿದಂತೆ ಅದಕ್ಕೆ ಕೆಂಪು ಬಣ್ಣ ಬರುವ ಗೋರಂಟಿ ಹಚ್ಚಿಕೊಳ್ಳುತ್ತಿದ್ದಳು. ಮುದ್ದಿನ ಮೊಮ್ಮಗ ಮುದ್ದು ಮುದ್ದಾಗಿ 'ಅಜ್ಜಿಯ ಕೂದಲು ಯಾಕೆ ಕೆಂಪಾಗಿದೆ' ಎಂದು ಕೇಳುತ್ತಾ ಕೂದಲೆಳೆಯುತ್ತಿದ್ದ.
ಅದೊಂದು ಭಾನುವಾರ ಶ್ರೀ, ಮಗಳು ಅಳಿಯ, ಮೊಮ್ಮಗನ ಜೊತೆ ಬಹಳ ಸೊಗಸಾಗಿ ಅಡುಗೆ ಮಾಡಿ ಊಟಕ್ಕೆ ಇಕ್ಕುತಿದ್ದಳು ಚಂದ್ರಿ. ಮೊಮ್ಮಗನ ತೊದಲು ಮಾತುಗಳನ್ನು ಕೇಳುತ್ತಾ ಅಸ್ವಾದಿಸುತ್ತಿದ್ದ ಅವಳಿಗೆ ಒಮ್ಮೆಲೆ ಅಳಿಯಂದಿರ 'ಛೀ'... ಎನ್ನುವ ಉದ್ಗಾರ ಕೇಳಿಸಿ ಗಾಬರಿಯಾಗಿ ನೋಡುತ್ತಾಳೆ ಉದ್ದದ ಕೂದಲ ಎಳೆಯೊಂದಿಗೆ ಊಟವನ್ನು ಪುನಃ ಬಟ್ಟಲಿಗೇ ಹಾಕಿ ಕೈ ತೊಳೆಯುತ್ತಿದ್ದ ಅಳಿಯ. ಬಟ್ಟಲಲ್ಲಿದ್ದ ಕೂದಲನ್ನು ಕಂಡ ಪುಟಾಣಿ ಬಹು ಹರ್ಷದಿಂದ ಘೋಷಿಸಿಯೇ ಬಿಟ್ಟ 'ಇದು ಕೆಂಪು ಕೂದಲು ಅಮ್ಮಮ್ಮನದು'..... ಅವನು ಕೈ ಚಪ್ಪಾಳೆ ತಟ್ಟುತ್ತಲೇ ಇದ್ದ... ಚಂದ್ರಿ ಕಾಲಚಕ್ರದಲ್ಲಿ ಕುಳಿತು ಅದೆಲ್ಲೋ ಕಳೆದು ಹೋದಳು.
Creative Writings
