
Article · June 30, 2026
ಶ್ರಾವಣಿಯ ಲಂಗ ದಾವಣಿ...
✍️ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
ಶ್ರಾವಣಿ ಪುಟ್ಟ ಹುಡುಗಿ. ಈಗಿನ್ನೂ ಏಳನೇ ತರಗತಿ ಓದುವ ಹುಡುಗಿ.ಅದೊಂದು ದಿನ ಅಮ್ಮನ ಜೊತೆ ಅಮ್ಮನ ಸಂಬಂಧಿಗಳ ಮದುವೆಗೆ ಹೋದವಳು ಅಲ್ಲಿ ಅವಳ ದೇ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಮದುವೆ ಮನೆಯಲ್ಲಿ ಸಂಭ್ರಮದಿಂದ ಓಡಾಡುವುದನ್ನು ಕಂಡು ತಾನೂ ಅವರ ಸ್ನೇಹಿತಳಾಗಿ ಅವರನ್ನು ಸೇರಿಕೊಂಡಳು ಶ್ರಾವಣಿ .ಆ ಇಬ್ಬರು ಲಂಗದಾವಣಿ ಧರಿಸಿದ್ದರು. ಶ್ರಾವಣಿ ಅವರ ಉಡುಪನ್ನು ಆಗಾಗ ಸವರಿ ಸಂತಸ ಪಟ್ಟಳು. ಅದು ಅವಳ ಮನದಲ್ಲಿ ತನಗೂ ಬೇಕೆನ್ನುವ ಆಸೆ ಬರುವಂತೆ ಮಾಡಿತ್ತು. ಮನೆಗೆ ಬರುವ ಮೊದಲು ಅಮ್ಮನಲ್ಲಿ ಈ ವಿಷಯ ತಿಳಿಸಿದ್ದಳು. ಆದರೆ ಅಮ್ಮನಿಗೆ ಅದನ್ನು ಕೊಡಿಸಲು ಕಷ್ಟ. ಬಡತನ, ತುಂಬುಕುಟುಂಬ ಹೇಗೆ ತರಿಸಿಯಾಳು ಅಮ್ಮ ಇದನ್ನು? ಶ್ರಾವಣಿಯ ಆಸೆ ಮನದಲ್ಲಿ ಹಾಗೆಯೇ ಉಳಿದಿತ್ತು. ಬೇಸಿಗೆಯ ರಜೆಯಲ್ಲಿ ಶ್ರಾವಣಿಯ ಅತ್ತೆ-ಮಾವ,ಮಕ್ಕಳು ಮನೆಗೆ ಬಂದಿದ್ರು ಒಂದುವಾರ ಇದ್ದು ಹೋಗಲು . ಶ್ರಾವಣಿಯ ಅಮ್ಮ ಅವರಲ್ಲಿ ಮಾತನಾಡುತ್ತಾ ಅವಳಾಸೆಯನ್ನು ಹೇಳಿದಾಗ ಮಾವ ನಕ್ಕರು. ಅವರು ಶ್ರಾವಣಿಗಾಗಿ ಮೊದಲೇ ಲಂಗದಾವಣಿ ತಂದಿದ್ದರು. ಅವನ್ನು ಶ್ರಾವಣಿಗಿತ್ತಾಗ ಅವಳ ಸಂತೋಷ ಹೇಳಲು ಸಾಧ್ಯವೇ ಇಲ್ಲ. ಅಷ್ಟೊಂದು ಖುಷಿ ಅವಳಿಗೆ. ಸಂಭ್ರಮದಿಂದ ಆ ಉಡುಪನ್ನು ಧರಿಸಿ ಕುಣಿದಾಡಿದಳು. ಅವಳೆಂದೂ ಮರೆಯದ ವಿಷಯವಿದು. ಈಗ ಶ್ರಾವಣಿಗೆ ಮದುವೆಯಾಗಿ ಎರಡು ಮಕ್ಕಳಿವೆ. ಅವಳ ಗಂಡನ ಬಳಿ ಬಟ್ಟೆಯ ಅಂಗಡಿಯೇ ಇದೆ. ಆದ್ರೆ ಶ್ರಾವಣಿಗೆ ಹೊಸ ಬಟ್ಟೆಗಳ ಆಸೆಇಲ್ಲ. ಆಕೆ ಬಯಸಿದರೆ ದಿನಕ್ಕೊಂದು ಹೊಸ ಉಡುಪು ಧರಿಸುತ್ತ ಮೆರೆಯುವ ಸಾಮರ್ಥ್ಯ ಅವಳಿಗಿದೆ. ಆದ್ರೆ ಅವಳಿಗದು ಬೇಕಿಲ್ಲ. ಅಂದು ಮಾವ ಕೊಟ್ಟ ಲಂಗ ದಾವಣಿ ಈಗಲೂ ಇದೆ. ಆಗಾಗ ಅದನ್ನು ನೋಡಿ ಹಳೆನೆನಪುಗಳಲ್ಲಿ ತೇಲಿ ಹೋಗುತ್ತಾಳೆ. ತುಟಿಗಳಲ್ಲಿ ಕಿರುನಗುತ್ತ ಕನಸು ಕಾಣುತ್ತಿರುತ್ತಾಳೆ. ಒಮ್ಮೊಮ್ಮೆ ಸಣ್ಣ ಸಣ್ಣ ವಿಷಯಗಳೂ ಸಣ್ಣ ಸಂಭ್ರಮಗಳು ಹೆಚ್ಚಿನ ಸಂತಸ ತರುತ್ತವೆ. ಸಂಭ್ರಮಿಸುವ ಮನಸ್ಸಿರಬೇಕಷ್ಟೆ. ನಮ್ಮಲ್ಲೂ ಇಂತಹ ಸಣ್ಣ ಸಣ್ಣ ಸಂಭ್ರಮಗಳಿರಬಹುದಲ್ಲವೇ ನೆನಪಿಸಲು? ಸಂಭ್ರಮಿಸೋಣವೆ?
