Karada Vishwa

Article · November 17, 2025

ಶೂನ್ಯ.....

ಲೇಖಕಿ : ಶ್ರೀಮತಿ ಜಯಶ್ರೀ ಕೆ. ಆರ್. ಭಟ್ ಪಳ್ಳತಡ್ಕ

🪻🪻
ರಸ್ತೆಯ ಪಕ್ಕದ ಬೇಲಿಯ ಆಚೆಗೆ ಸಾಲು ಸಾಲು ತೆಂಗಿನ ಮರಗಳು, ಅದರಾಚೆಗೆ ತುಂಬ ಹಳೆಯದಾದ ಪುಟ್ಟಮನೆ. ಮನೆಯ ಜಗಲಿಯ ಮೇಲೆ ಕಂಬವನ್ನೊರಗಿ ಕುಳಿತ ಒಂದು ಮುದಿ ಜೀವ. ಏಕಾಂಗಿ. ಇದು ಒಂದು ದಿನದ, ಒಂದು ಮನೆಯ ಕಥೆಯಲ್ಲ. ಎಷ್ಟೋ ಕಡೆ ಎಷ್ಟೋ ದಿನಗಳಿಂದ ಇರುವ ವಿಷಯ. ಮನೆ ಮಂದಿ ಎಲ್ಲ ಆ ಕೆಲ ಸ, ಈ ಕೆಲಸ ಎಂದು ಹೊರಗೆದ್ದು ಹೋದಾಗ ಅಸಹಾಯಕವಾಗಿ ಉಳಿಯುವ ಈ ಮುದಿ ಜೀವ ದೂರಕ್ಕೆ ಶೂನ್ಯ ದೃಷ್ಟಿ ಬೀರಿ ಒಂಟಿಯಾಗಿ ಕುಳಿತುಬಿಡುತ್ತದೆ. ಸುಕ್ಕುಗಟ್ಟಿದ ಚರ್ಮ, ಆಳಕ್ಕಿಳಿದ ಕಣ್ಣುಗಳು, ವಯಸ್ಸನ್ನು ಹೊರಗೆಡವುವಂತಿತ್ತು. ಏನೋ ಯೋಚನೆ, ನೋವು, ಯಾತನೆ. ಜೊತೆಗಿರುವೆನೆಂದು ಬಂದವಳು ಅರ್ಧದಲ್ಲೇ ಬಿಟ್ಟು ಹೋಗಿ ಎಷ್ಟೋ ಕಾಲವಾಯ್ತು. ಮನಸ್ಸು ಅರೆಕ್ಷಣ ಹಿಂದಕ್ಕೆ ಸರಿದುಹೋಯ್ತು ನೆನಪಿನಂಗಳದಲ್ಲಿ ಸುತ್ತಾಡಲು . ಸಾಲಾಗಿ ಹಿಂದಿನ ನೆನಪುಗಳು ಮನಃ ಪಟಲದಲ್ಲಿ ಮೂಡಿ ಬರುವಾಗ, ಕಣ್ಣಿನಿಂದಿಳಿದ ನೀರು ಹನಿ ಹನಿಯಾಗಿ ಕೆನ್ನೆ ಮೇಲಿಳಿದಾಗ ಒರಸಿಕೊಳ್ಳುವಷ್ಟು ಶಕ್ತಿಯೂ ಇಲ್ಲದ ನಿಶ್ಶಕ್ತಿ ತುಂಬಿದ ಕೈಗಳು, ನಿಸ್ತೇಜ ಮುಖ,... ಹೌದು. ಅಂದು ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ, ಮಕ್ಕಳು ಎಂದು ತುಂಬಿ ತುಳುಕುತ್ತಿದ್ದ ಮನೆ, ಗಲಗಲನೆಂದು ಸದ್ದುಗದ್ದಲವಿದ್ದ ಮನೆ ಈಗ ನಿ:ಶಬ್ದ.  ಎಲ್ಲರೂ ಅವರವರ ಬದುಕಿನ ದಾರಿ ಕಂಡುಕೊಂಡು ಸಂಸಾರ ಸಹಿತ ದೂರಸರಿದು ಬದುಕುತ್ತಿರುವಾಗ, ತಡೆಯುವ ಶಕ್ತಿ ಯಾರಿಗಿದೆ? ಪ್ರೀತಿ, ಮಮತೆ ಒಲವು ತುಂಬಿದ ಹೃದಯಗಳೆಲ್ಲ ಕ್ರಮೇಣ ಹಣ, ಹೆಸರು, ಆಸ್ತಿ, ಉದ್ಯೋಗ, ಅಧಿಕಾರ ಇವುಗಳ ಬೆನ್ನುಹತ್ತಿದಾಗ, ಸಂಬಂಧಗಳಲ್ಲಿ ಬಿರುಕು ಬರದಿಹುದೆ? ರೆಕ್ಕೆ ಬಲಿತ ಹಕ್ಕಿಗಳು ಹಾರಿ ದೂರ ಹೋಗುವುದು ಕಷ್ಟವೆ? ಅಂದು ಹೋದರೆ ಹೋಗಲಿ, ಎಂದು ಅಧಿಕಾರ ದಾಹದಿಂದ ಸುಮ್ಮನಿದ್ದ ವ್ಯಕ್ತಿಗೆ ಅಂದು ಯೌವ್ವನ, ತಾರುಣ್ಯದ ವಯಸ್ಸು, ಆಗ ಏನೂ ಅನ್ನಿಸಲಿಲ್ಲ. ಒಂಟಿಯಾಗಿಯೂ ಬದುಕ ಬಲ್ಲೆ, ನಾನು ಚಿರಂಜೀವಿ ಎಂಬ ಭಾವನೆ. ಆದರೆ ಈಗ? ಕಾಲ ಸರಿದು ಹೋಗಿ ಹಲವು ಪಾಠಗಳನ್ನು  ಕಲಿಸಿದೆ. ಸಂಬಂಧಗಳನ್ನು ದೂರ ಮಾಡಿಕೊಂಡಾಗ ತಿಳಿಯದ ಬೆಲೆ ಇಂದು ಅರಿವಾಗಿದೆ - ಕಳೆದುಕೊಂಡಿದ್ದು ಏನೆಂದು. ಮತ್ತೆ ಬಾರದಷ್ಟುದೂರ ಸರಿದಿದೆ ಎಲ್ಲವೂ... ಅಂದು ಮೆರೆದ ದಿನಗಳು ನೆನಪಾದವು. ಅದೇ ಮನೆ, ಅದೇ ಜಾಗ ..ಆದರೂ ಅಧಿಕಾರ, ಸ್ವಾತಂತ್ರ್ಯ ಯಾವುದೂ ಈಗ ಇಲ್ಲ. ಇದ್ದರೂ ಬೇಕಾಗಿಲ್ಲ. ಒಂದಷ್ಟು ಒಲವು, ಸಾಂತ್ವನ, ಸ್ನೇಹ, ಸಹಾಯ,ನೆಮ್ಮದಿ ಬಯಸಿದ ಮನಸಿಗೆ ಯಾವುದೂ ಸಿಗುತ್ತಿಲ್ಲ. ಇದ್ದಾಗ ಮಡದಿಯ ಬೆಲೆಯೂ ತಿಳಿಯದ ವ್ಯಕ್ತಿ. ಈಗ ಬೆಲೆಯರಿವಾದಾಗ ಅವಳೇಇಲ್ಲ.! ಮಕ್ಕಳಿಗಂತೂ ಒಂದರೆಕ್ಷಣ ಕುಳಿತು ಗೌರವದಿಂದ, ಪ್ರೀತಿಯಿಂದ ಮಾತನಾಡಿಸುವ ಮನಸ್ಸು, ಸಮಯ, ಎರಡೂ ಇಲ್ಲ. ಅನಿವಾರ್ಯತೆ, ಆವಶ್ಯಕತೆ  ಎನ್ನುವ ಯಾವುದೇ ಕಾರಣವೂ ಇಲ್ಲ. ಬದುಕು ನೀಡಿದ ಅನುಭವ, ಕಾಲದ ಹೊಡೆತ, ತಾನೀಗ ಎಲ್ಲರ ಪಾಲಿನ ಕಾಲಕಸ ಎಂಬರಿವಾದಾಗ 'ನೋವಿನ ನಿಟ್ಟುಸಿರೊಂದು ಹೊರಬಂದು ತನ್ನನ್ನೆ ಸುಟ್ಟ ಅನುಭವ. ನಾನೇಕೆ ಆಸೆ ಆಮಿಷಗಳಿಗೆ ಬಲಿಯಾದೆ? ಎಂದು ಮನಸ್ಸು ತನ್ನನ್ನು ತಾನೇ ಕೇಳಿದಾಗ 'ಉತ್ತರಿಸುವ ಶಕ್ತಿ ಯೂ ಉಳಿದಿಲ್ಲ. ಉಳಿದದ್ದು ಬರಿಯ ಶೂನ್ಯ. ಯಾರು ಅಣ್ಣ? ಯಾರು ತಮ್ಮ? ಯಾಕೆ?ಯಾರು? ಹೇಗೆ? ಏನು? ಎಲ್ಲಿದ್ದಾರೆ? ಯಾವ ಪ್ರಶ್ನೆಗೂ ಉತ್ತರವಿಲ್ಲ. ಬೇರೇನೂ ಉಳಿದಿಲ್ಲ. ಉಳಿದ ಆ ಶೂನ್ಯ ಇನ್ನೊಂದು ಆರಂಭದ ಆದಿಯೆ? ಇನ್ನೆಷ್ಟು ದಿನ ಹೀಗೆ? ಎನಿಸಿ ಮನಸ್ಸು ಭಾರವಾಗಿ, ಮೌನವಾಗಿ ರೋದಿಸಿತು. ಸಾಧಿಸಿದ್ದೇನು? ಸಿಕ್ಕಿದ್ದೇನು? ಎಂಬ ಪ್ರಶ್ನೆಗಳು. ಜೀವ ಎಲ್ಲರಿಂದ, ಎಲ್ಲದರಿಂದ ಬಿಡುಗಡೆ ಬಯಸಿತ್ತು. ದೃಷ್ಟಿ ಅನಂತ ಆಕಾಶದ ಕಡೆಗೆ ಸರಿದಿತ್ತು... O ?
🪻🪻        ಶೂನ್ಯದಿಂ ಪ್ರಾರಂಭ, ಶೂನ್ಯದೊಂದಿಗೆ ಅಂತ್ಯ,. ಹೋದದ್ದು ಬಂದದ್ದು ಎಲ್ಲವೂ ಶೂನ್ಯ, ಹಿರಿಶೂನ್ಯದೊಳಗೆ ಹಲ ಕಿರಿಯ ಶೂನ್ಯ!
__________

ಕಿರುಪರಿಚಯ :

ಜಯಶ್ರೀ ಐಲುಕುಂಜೆ, ಪಳ್ಳತಡ್ಕ . ಪರಿಸರಪ್ರಿಯೆ . ಗೃಹಿಣಿ . ಮನಸಿಗನಿಸಿದ್ದನ್ನು ಚೊಕ್ಕವಾಗಿ ಪುಟಕ್ಕಿಳಿಸುವ ಹವ್ಯಾಸ. ಕರಾಡ ಭಾಷೆಯಲ್ಲಿ ಮತ್ತು ಕನ್ನಡದಲ್ಲಿ ಬರೆಯಬಲ್ಲರು.

Creative Writings
ಶೂನ್ಯ.....