
Article · September 14, 2026
ಶ್ರೀ ಗಣರಾಯ
By ಗಾಯತ್ರಿ ಕೆ ನಾಗರಾಜ
ಗಾಯತ್ರಿ ಕೆ ಅಡ್ಕತೊಟ್ಟಿ
ಗೌರೀ ಪುತ್ರ ಶ್ರೀ ಗಣರಾಯ,
ವಂದಿಪೆ ಮೊದಲು ವಿಘ್ನ ಹರ |
ಸಿಂಧೂರ ರಂಜಿತ ಫಾಲದಿ ಬೆಳಗುವ
ಬುದ್ಧಿ ದೀಪದ ನಿತ್ಯವರ ||
ವಕ್ರದೊಳಗೇ ಸರಳವ ತೋರುವ ತತ್ವ ನೀನೆ
ಲಂಬೋದರದಿ ಲೋಕವ ತುಂಬಿದ ಸತ್ಯನೀನೆ |
ಮೋದಕದಂತೆ ಸಿಹಿಯಾದ ಜ್ಞಾನವ ನೀಡುವವನೆ
ಮೂಷಕದಂತೆ ಸೂಕ್ಷ್ಮಕೆ ನಡೆವ ವಿವೇಕ ನೀನೆ ||
ಅರಿತೂ ಅರಿಯದಂತಿಹ ಮನಕೆ ನೀ ಅರಿವಾಗು
ಮರೆತೂ ಮರೆಯದ ಮಂತ್ರದಂತೆ ಒಲವಾಗು |
ಬೇಡೆನು ಮುಕ್ತಿಯ ಬೇಕು ನಿನ್ನ ನೆನಪಿನ ಸ್ಥಿತಿ
ಗಣನಾಥನೆ, ನಿನ್ನ ಸೇವೆಯೇ ನನ್ನ ಗತಿ ||
ನಾ ಕಂಡ ಕನಸುಗಳೆಲ್ಲ ನಿನ್ನಡಿಗೆ ಅರ್ಪಣೆ
ನಾ ಅಂದ ಮಾತುಗಳೆಲ್ಲ ನಿನ್ನ ನಾಮದ ತರ್ಪಣೆ |
ಬೇರೆನೂ ಬೇಡ ನಿನ್ನ ಹೆಜ್ಜೆ ಗುರುತು ಸಾಕು
ಎನ್ನ ಬಾಳಿನ ದಾರಿಯ ದೀಪ ನೀನಾಗು ||
Creative Writings
