Karada Vishwa

Article · September 4, 2026

ದಾಮೋದರ ಲೀಲೆ

By ದಿವ್ಯಾ ಶಿರಂತಡ್ಕ

ದಿವ್ಯಾ ಬಿ ಶಿರಂತಡ್ಕ

ಅಮ್ಮ ಯಶೋದಾ ಬಿಡು ನೀ ಕೈಯ
ನಾನೇನ್ ತಪ್ಪು ಮಾಡಿರುವೆ?
ಬೆಣ್ಣೆ ಗಡಿಗೆಯನು ಇಳಿಸಿ ಮೆಲುವ ಈ
ಚಿಣ್ಣರ ನಾನು ಗದರಿಸುವೆ!

ನೀ ಬಲು ತುಂಟ ಹೇಳುವ ಸುಳ್ಳ
ನಂಬಲು ಸಾಧ್ಯವೇ ಇಲ್ಲ
ಬಾಯಿಯ ತುಂಬಾ ಬೆಣ್ಣೆಯ ಮೆದ್ದ
ರೂಪವು ಕಾಣುವುದಲ್ಲ!!

ಗೆಳೆಯರ ಆಟ ಕೊಡುವರು ಕಾಟ
ಮುಗ್ಧನು ನಾನು ನಂಬು
ಬೆಣ್ಣೆಯ ಕೈಯೊಳು ಹಿಡಿದು ಸವರಿದರು
ನನ್ನಯ ಬಾಯಿಯ ತುಂಬು..

ಸುಳ್ಳು ಹೇಳುವುದ ಬಿಟ್ಟು ನೀನು

ಕಲಿಯಬೇಕಿದೆ ಶಿಸ್ತು..
ನಿನ್ನ ಹಿಂದೆ ಅಲೆದು ಎನಗೆ

ಆಗಿ ಹೋಯಿತು ಸುಸ್ತು!

ಬಿಟ್ಟುಬಿಡಮ್ಮ ಇದೊಂದು ಬಾರಿ
ಆಗುವೆ ಜಾಣ ಮುಂದೆ
ಕೈಗಳ ಏಕೆ ಹಿಡಿದಿರುವೆ ನೀ
ಹೀಗೆ ಬೆನ್ನ ಹಿಂದೆ..

ಒರಳಿಗೆ ನಿನ್ನ ಕೈಗಳ ಕಟ್ಟಲು
ಹಗ್ಗವ ನಾ ತಂದಿರುವೆ
ಎನ್ನಯ ಕೆಲಸ ಮುಗಿಯುವವರೆಗೂ
ನೀನಿಲ್ಲೇ ಇರುವೆ!

ಏನಿದು ಲೀಲೆ ತಂದ ಹಗ್ಗವಿದು
ಕಟ್ಟಲು ಸಾಲುವುದೇ ಇಲ್ಲ...
ಮತ್ತಷ್ಟು ಉದ್ದಕೆ ಸೇರಿಸಿದರೂ ಇದು

ಕಟ್ಟಲು ಬರುವುದೇ ಇಲ್ಲ!

ಎಷ್ಟು ಹಗ್ಗಗಳ ಸೇರಿಸಿದರೂ ಅದು
ಎರಡು ಅಂಗುಲ ಕಡಿಮೆ..
ಕಾರಣ ಇದಕೆ ಬೇರೇನಲ್ಲ

ಎಲ್ಲವೂ ಕೃಷ್ಣನ ಮಹಿಮೆ!!

ಕೊನೆಗೂ ಕಟ್ಟಿದೆ ಜಗದೊಡೆಯನ ನಾ

ಇನ್ನೊಂದು ಹಗ್ಗವ ತಂದು..
ಭಾಗವತದೊಳು ಕರೆದಿಹರಿದನು

'ದಾಮೋದರ ಲೀಲೆ' ಎಂದು!!

Creative Writings