Karada Vishwa

Article · October 22, 2026

ಕದಿರು ಕಟ್ಟುವ ಹಬ್ಬ

By ಅಜಿತ್ ಗಣೇಶ್ ಕಾನಕೋಡು

ಅಜಿತ್ ಗಣೇಶ್ ಕಾನಕ್ಕೋಡು

ಕದಿರು ಹಬ್ಬವು ಪ್ರಕೃತಿ ಮತ್ತು ರೈತರ ಬಾಂಧವ್ಯ ವೃದ್ಧಿಸುವ ಆಚರಣೆ. ನಮ್ಮೆಲ್ಲರ ಹಸಿವು ನೀಗಿಸುವ ಭತ್ತ (ಅಕ್ಕಿ) ಕ್ಕೆ ಗೌರವ ಸಲ್ಲಿಸುವುದು ಈ ಆಚರಣೆಯ ಉದ್ದೇಶ.

ನಮ್ಮ ಯಾವುದೇ ಆಚರಣೆ ಆದರೂ ಅದರ ಹಿಂದೆ ವಿಶೇಷವಾದ ಮಹತ್ವ ಇದೆ. ಉಣ್ಣುವ ಆಹಾರದಲ್ಲಿ ಕುಡಿಯುವ ನೀರಲ್ಲಿ ದೇವರನ್ನು ಕಾಣುವ ಸಂಪ್ರದಾಯ ನಮ್ಮದು.  ಹಾಗೆಯೆ ಪ್ರಕೃತಿಯಲ್ಲಿ ಕಾಣುವ ಗಿಡ, ಮರ,  ಬಳ್ಳಿ ಏನೇ ಇದ್ದರೂ ಎಷ್ಟೋ ಶತ ಶತಮಾನಗಳಿಂದ ವಿಶೇಷ ಮಹತ್ವವನ್ನು ಗುರುತಿಸಿಕೊಂಡು ಬಂದ ನಮ್ಮ ಹಿರಿಯರು ಅದನ್ನು ಯಾವಾಗಲೂ ದೇವರಂತೆ ಪೂಜಿಸಿಕೊಂಡು ಇರುವಂತೆ ಜೀವನ ಪಾಠಗಳನ್ನು ತೋರಿಸಿ ಕೊಟ್ಟು ಹೋಗಿದ್ದಾರೆ, ಪಾಲಿಸುವುದು ನಮ್ಮ ಕರ್ತವ್ಯ.

ಹೊಸ ಅಕ್ಕಿ ಊಟ,  ಕದಿರು ಕಟ್ಟುವ ಹಬ್ಬ,  ನವಾನ್ನ , ಹೊಸರೋಗಣೆ, ಪುದ್ವಾರ್  ಮೆಚ್ಚಿ /ಪುದ್ದರ್, ಹೊಸ್ತು ಹಬ್ಬ, ತೆನೆ ಹಬ್ಬ,  ಮನೆ ತುಂಬಿಸುವುದು, ಹುತ್ತರಿ - ಈ ಎಲ್ಲವೂ ಹೊಸದಾಗಿ ಬೆಳೆದು ಬಂದ ಭತ್ತದ (ಹೊಸ ಅಕ್ಕಿ) ಮೊದಲ ಫಸಲನ್ನು ದೇವರಿಗೆ ಅರ್ಪಿಸಿ, ಆ ಅಕ್ಕಿಯಿಂದ ತಯಾರಿಸಿದ ಆಹಾರವನ್ನು ಸ್ವೀಕರಿಸುವ ಒಂದು ಸಂಪ್ರದಾಯ ಅಥವಾ ಆ ಹಬ್ಬದ  ಹಲವು ಹೆಸರುಗಳು.   ಹೆಸರೇ ಹೇಳುವಂತೆ 'ನವ' ಅಂದರೆ ಹೊಸ, 'ಅನ್ನ' ಅಂದರೆ ಊಟ ಅಥವಾ ಅಕ್ಕಿ. ಹೊಸ ಅಕ್ಕಿಯಿಂದ ಮಾಡಿದ ಭೋಜನ. ಕರ್ನಾಟಕದ ಕರಾವಳಿ, ಕೊಡಗು ಮತ್ತು ಮಲೆನಾಡು ಭಾಗಗಳಲ್ಲಿ ಈ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಧಾನ್ಯಲಕ್ಷ್ಮಿಯನ್ನು ಮನೆಯೊಳಗೆ ಆಹ್ವಾನಿಸುವ ನಂಬಿಕೆ ಇದರ ಹಿಂದಿದೆ. ತಂದ ಹೊಸ ಕದಿರನ್ನು ತುಳಸಿ ಕಟ್ಟೆ, ದೇವರ ಕೋಣೆ, ಮನೆಯ ಹೆಬ್ಬಾಗಿಲು, ದನದ ಕೊಟ್ಟಿಗೆ ಹಾಗೂ ಕೃಷಿ ಉಪಕರಣಗಳಿಗೆ ಕಟ್ಟಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಕೃಷಿಯೇ ಜೀವನಾಧಾರ ಆಗಿದ್ದ ಕಾಲದಲ್ಲಿ ಅದರಲ್ಲೂ ಗದ್ದೆ ಬೇಸಾಯ ಇದ್ದ ಮನೆಗಳಲ್ಲಂತೂ ಇದು ಸಡಗರದ ಹಬ್ಬ. ನವರಾತ್ರಿಯ ಎಲ್ಲಾ ದಿನಗಳಲ್ಲೂ ಹೊಸ್ತು ಆಚರಣೆ ಮಾಡಲಾಗುತ್ತದೆ. ಅಂದರೂ ಲಲಿತಾ ಪಂಚಮಿ, ಮಹಾನವಮಿ, ವಿಜಯದಶಮಿ ಹೆಚ್ಚು ವಿಶೇಷ.
ಇನ್ನು ಹೊಸ್ತು ಆಚರಣೆ ಹೇಗೆ ಮಾಡುತ್ತಾರೆ ನೋಡುವ. ಹೊಸ್ತು ಆಚರಣೆ ಎಲ್ಲಾ ಮನೆಗಳಲ್ಲೂ ಒಂದೇ ರೀತಿಯೇ ಆದರೂ ಒಂದೊಂದು ಊರಿನ, ಮನೆಗಳ ಸಂಪ್ರದಾಯ ಹೊಂದಿಕೊಂಡು ಆಚರಣೆಗಳಲ್ಲಿ ಕೆಲವು ಸಣ್ಣ ಸಣ್ಣ ಬದಲಾವಣೆ ಇರಬಹುದು. ಮುಂಚಿನ ದಿನ ಮನೆಯೆಲ್ಲ ಶುದ್ಧ ಮಾಡಿ,  ತುಳಸಿ ಕಟ್ಟೆಯ ಸುತ್ತ ಸಗಣಿ ಸಾರಿಸಿ ಒಣಗಿದ ಮೇಲೆ ಚಿಕ್ಕ ಚಿಕ್ಕ ರಂಗೋಲಿ ಗಳನ್ನು ಬಿಡಿಸುತ್ತಾರೆ. ಮರುದಿನ ಬೆಳಗ್ಗೆ ಮನೆಗೆ ಧಾನ್ಯಲಕ್ಷ್ಮಿಯನ್ನು ಗದ್ದೆಯಿಂದ ಕರೆದುಕೊಂಡು ಬರುವ ಸಂಭ್ರಮ. ಸೂರ್ಯೋದಯದ ಮೊದಲೇ ಗದ್ದೆಗೆ ಹೋಗಿ ಕದಿರಿಗೆ ಪೂಜೆ ಮಾಡಿ, ಭತ್ತದ ಕೈಯ ಬುಡಕ್ಕೆ ಹಾಲೆರೆದು, ಕೆಲವು ಕದಿರಿನ ಕೈಗಳನ್ನು  ಕೊಯ್ದು ಬರುತ್ತಿದ್ದುದು ಮೊದಲಿನಿಂದ ಇದ್ದ ಕ್ರಮ . ಮನೆ ಯಜಮಾನ ಗದ್ದೆಯಿಂದ ಭತ್ತದ  ತೆನೆಯನ್ನು  ತೆಗೆದುಕೊಂಡು ಬರುವಾಗ ಆರತಿಯೆತ್ತಿ ಬರ ಮಾಡಿಕೊಳ್ಳುವ ಆಚರಣೆ ಹಲವು ಕಡೆ ಇದೆ. ತಂದ ಭತ್ತದ  ಕದಿರನ್ನು ತುಳಸಿ ಕಟ್ಟೆ ಎದುರು ರಂಗೋಲಿ ಹಾಕಿದ ಮಣೆಯ ಮೇಲೆ ತಂದು ಇಡುತ್ತಾರೆ. ಕೆಲವು ಕಡೆ ಮಂಗಳವಾದ್ಯಗಳೊಂದಿಗೆ ಮನೆಗೆ ತರುವ ಸಂಪ್ರದಾಯ ಇದೆಯಂತೆ. ತಂದಿಟ್ಟ ಕದಿರಿಗೆ ಆರತಿಯೆತ್ತಿ ಪೂಜೆ ಮಾಡಿ, ನಂತರ ಅತ್ತಿ, ಇತ್ತಿ, ಗೋಳಿ, ಅಶ್ವತ್ಥ, ಹಲಸು, ಮಾವಿನ ಎಳೆಗಳ ತುದಿ, ನೆಲ್ಲಿ ಸೊಪ್ಪು, ಬಿದಿರಿನ ಸೊಪ್ಪು, ಪೊಲಿ ಬಳ್ಳಿ ಕೆಲವು ಮನೆಗಳಲ್ಲಿ ಗೌರಿ ಹೂ, ತುಳಸಿ ಎಲೆಯನ್ನೂ ಸೇರಿಸಿ ಹಾಗೆಯೆ ಎಲ್ಲವನ್ನೂ ತಗ್ಗಿಸೊಪ್ಪಿನ ಎಳೆಯಲ್ಲಿ ಇಟ್ಟು , ದಡ್ಡಾಲ ಮರದ ನಾರಿನ ಬಳ್ಳಿಯಲ್ಲಿ ಎಲ್ಲವನ್ನೂ ಸೇರಿಸಿ ಸಣ್ಣ ಸಣ್ಣ ಕಟ್ಟಗಳನ್ನು ಕಟ್ಟುತ್ತಾರೆ. ಆಮೇಲೆ ಮನೆ ಯಜಮಾನ ಅದನ್ನು ದೇವರ ಕೋಣೆಯೊಳಗೆ ತಂದು ಇಡುತ್ತಾನೆ. ಅಲ್ಲಿ ದೇವರ ಪೂಜೆ ಮಂಗಳಾರತಿ ಮಾಡುತ್ತಾರೆ ಹಾಗೂ ಈ ಕಟ್ಟಗಳಿಗೂ ಪೂಜೆ ಮಾಡುತ್ತಾರೆ. ದೇವರ ಪ್ರಸಾದ ತೆಗೆದುಕೊಂಡ ಮೇಲೆ ಆ ಕಟ್ಟುಗಳನ್ನು ದೇವರ ಕೋಣೆ , ಚಾವಡಿಯ ಕಂಬ, ತುಳಸಿಗೆ , ತೊಟ್ಟಿಲಿನ ಬಳ್ಳಿಗೆ , ನೊಗ ನೇಗಿಲುಗಳಿಗೆ, ವಾಹನಗಳಿಗೆ , ಕೃಷಿ ಯಂತ್ರಗಳಿಗೆ , ಹಟ್ಟಿಗೆ , ಮೊಸರು ಕಡೆಯುವ ಗುಂಟಕ್ಕೆ ಕಟ್ಟುತ್ತಾರೆ. ಈ ರೀತಿ ಪೂಜೆ ಮಾಡಿ ಕಟ್ಟಿದ ಆ ಕದಿರಿನ ಕಟ್ಟ ಸೌಭಾಗ್ಯದ ಪ್ರತೀಕ ಅಂತ ಹೇಳುವುದು ನಮ್ಮ ನಂಬಿಕೆ. ಭತ್ತದ ಕದಿರಲ್ಲಿ ಉಳಿದ ಕದಿರಿನ ಭತ್ತದ ಕಾಳುಗಳನ್ನು ಬಿಡಿಸಿ ಹಳೆಯ ಅಕ್ಕಿ ಜೊತೆ ಸೇರಿಸಿ, ದೇವರಿಗೆ  ನೈವೇದ್ಯ, ಪಾಯಸ ಮಾಡುತ್ತಾರೆ.  ಐದರಿಂದ ಏಳು ಅಥವಾ ಒಂಭತ್ತು ಬಗೆಯ ತರಕಾರಿ ಪಲ್ಯ, ಸಾರು ಸಾಂಬಾರು ಪಾಯಸ ವಿಶೇಷ ಭೋಜನ ಸವಿಯುತ್ತಾರೆ.

ಆಧುನಿಕ ಯುಗದಲ್ಲಿ ಗದ್ದೆ ಬೇಸಾಯ ಕಮ್ಮಿ ಆಗಿದೆ. ನೇಗಿಲು ನೊಗ ಕಾಣಲು ಸಿಗುವುದು ಕಷ್ಟ. ಅದಲ್ಲದೆ ಕೃಷಿಕರಿಗೆ, ಹಳ್ಳಿಯಲ್ಲಿ ಇರುವವರಿಗೆ ಬೆಲೆಯೂ ಇಲ್ಲ. ಈಗಿನ ಎಷ್ಟೋ ಮಕ್ಕಳಿಗೆ ಇದರ ವಿಷಯ ಗೊತ್ತೇ ಇರುವುದಿಲ್ಲ. ಇದರಿಂದಾಗಿ ಇಂತಹಾ ಆಚರಣೆಗಳು ನಿಧಾನವಾಗಿ ಮಾಯವಾಗುತ್ತಾ ಇವೆ. ಹಾಗಿದ್ದರೂ ಕೆಲವು ಮನೆಗಳಲ್ಲಿ ಹಳ್ಳಿ ಜೀವನದ ಮಹತ್ವವನ್ನು  ಅರ್ಥ ಮಾಡಿಕೊಂಡು, ಹಿರಿಯರಿಂದ ಬಂದ ಕೆಲವು ಆಚರಣೆ, ಸಂಪ್ರದಾಯಗಳನ್ನು  ಉಳಿಸಿ ಬೆಳೆಸುತ್ತಾರೆ ಅನ್ನುವುದು ಸ್ವಲ್ಪ ಸಮಾಧಾನ ಅಷ್ಟೇ. ಹಾಗೂ ಊರಿನ ಕೆಲವು ನಿರ್ದಿಷ್ಟ ದೇವಸ್ಥಾನಗಳಲ್ಲಿ ಕದಿರು ಪೂಜೆ ಮಾಡಿ , ಪ್ರತಿ ಮನೆಯ ಯಜಮಾನನಿಗೆ ಪ್ರಸಾದ ರೂಪದಲ್ಲಿ ಕೊಡುವುದು ಕೂಡ ಕಾಣುತ್ತದೆ.  ಇಂತಹಾ  ಆಚರಣೆಗಳನ್ನು ಆಚರಿಸುವುದರಲ್ಲಿ ಸೇರಿಕೊಂಡು ಅದರ ಬಗ್ಗೆ, ಅದರ ಹಿಂದೆ ಇರುವ ಒಳ್ಳೆಯ ಉದ್ದೇಶಗಳ ಬಗ್ಗೆ ನಮ್ಮ ಮುಂದಿನ ತಲೆಮಾರಿನ ಮಕ್ಕಳೂ ತಿಳಿದುಕೊಳ್ಳಲಿ . ಆ ಮೂಲಕ ಇಂತಹ ಆಚರಣೆಗಳು ಉಳಿಯಲಿ ಅನ್ನುವ ಸದಾಶಯ ನಮ್ಮದು.

Creative Writings