Karada Vishwa

Article · June 20, 2026

ಸ್ನೇಹ ಸಂಜೀವಿನಿ

✍🏻ವೀಣಾ ಎಂ ಭಟ್

ಎಲ್ಲಿ ಅರಳಿತು ಈ ಸ್ನೇಹ ಸಂಜೀವಿನಿಯು 
ಹೃದಯದ ಹಂದರದಲ್ಲಿ ಬಳ್ಳಿ ಹುಲುಸಾಗಿ 
ಮುಂಜಾನೆ ತಂಪಿನಲಿ ದಳ ದಳದಿ  ಇಬ್ಬನಿಯು 
ಹಳೆ ನೆನಪು ತಡಕಾಡುತಿದೆ ಎಳೆ ಎಳೆಯಾಗಿ 

ಮಾರ್ದನಿಗೊಳ್ಳುವುದು ನಿನ್ನ ಈ ಇನಿದನಿಯು 
ಎದೆಯ ಬಡಿತದ ಮಿಡಿತ ಸವಿ ಗಾನದಲ್ಲಿ 
ರೆಪ್ಪೆಗಳ ಸವರುತ್ತ ಜಾರುತಿದೆ ಕಂಬನಿಯು
ಸುಪ್ತವಾಗಿಹ ನವಚೇತನ ಮರಳಿ ತನುವಲ್ಲಿ 

ನೆನಪಿನ ಪಂಜರದ ಗಿಣಿಯೊಂದು ಚೀರುತಿದೆ 
ರೆಕ್ಕೆ ಪುಕ್ಕವು ಇದ್ದು ಫಲವುಂಟೆ ನಿನಗೆ 
ಬಾನಲ್ಲಿ ಹಾರಾಡುವ ಬಯಕೆ ಮನಸಿಗಿದೆ 
ಬಂಧನದ ಮುಕ್ತಿಯು ಬರದೆಂದು ನಿನಗೆ 

ನೆನಪಿನ ಸುರಿಮಳೆಯ ಸುರಿಯುವ ಧಾರೆಯಲಿ 
ಕೊಚ್ಚಿ ಹೋಗುವುದೆಂಬ ಅಳುಕು ಮರೆಯಲ್ಲಿ
ಭಾವನೆಯ ಸ್ಪರ್ಶಕ್ಕೆ ಡೋಲಾಯಮಾನವು
ಭವ ಸಾಗರದೆ ಮಥನವಾಗುತಿದೆ ತನು ಮನವು

      
Creative Writings
ಸ್ನೇಹ ಸಂಜೀವಿನಿ