
Article · August 15, 2026
ಶ್ರಾವಣಮಾಸ
By ಸಂಧ್ಯಾ ಕೊರೆಕ್ಕಾನ
- ಸಂಧ್ಯಾ ಕೊರೆಕ್ಕಾನ
ಬಂದಾಯ್ತು ಶ್ರಾವಣವು ಹಬ್ಬ ಹರಿದಿನವಿಹುದು
ಮುಂದಿಹುದು ನಾಗನಿಗೆ ಹಾಲೆರೆಯೊ ಹಬ್ಬ
ಮುಂದೆ ಬರುತ್ತಿಹುದಮ್ಮ ವರಲಕ್ಷ್ಮಿ ವ್ರತವಿಲ್ಲಿ
ಬಂಧವನು ಗಟ್ಟಿಗೊಳಿಸಲಿರೊ ರಕ್ಷೆ
ಅರಶಿನದಿ ಅದ್ದಿರುವ ಯಜ್ಞೋಪವೀತವನು
ಧರಿಸುತಿಹ ಹಬ್ಬವದು ನೂಲ ಹುಣ್ಣಿಮೆಯು
ಕರದಲ್ಲಿ ಅರವಿಂದ ಪಿಡಿದಿರುವ ಶ್ಯಾಮಲನು
ಧರೆಯೊಳವತರಿಸಿಹುದೆ ಅಷ್ಟಮಿಯಲಿ
ಶಂಭುವಿಗೆ ಪ್ರಿಯವಾದ ತಿಂಗಳಿದು ಶ್ರಾವಣವು
ನಂಬಿಹರು ಶಿವನಂಜು ಕುಡಿದಿರುವ ಮಾಸ
ಅವನಿಯದು ಹಸಿರಾಗಿ ಕಂಗೊಳಿಸಿ ಸಂಭ್ರಮಿಸಿ
ಸವಿಯನ್ನು ಹಂಚುತಿದೆ ಆನಂದದಿ
Creative Writings
