Karada Vishwa

Article · September 4, 2026

ಆರಾಧನೆ

By ಗಾಯತ್ರಿ ನಾಗರಾಜ

ಗಾಯತ್ರಿ ಕೆ ಅಡ್ಕತೊಟ್ಟಿ

ರಾಧೆಯಂತೆ ನಾ ಆರಾಧಿಸುವೆ ಕೃಷ್ಣಾ ನಿನ್ನನೇ
ಬಾಲ್ಯದಿಂದ ಇಂದಿಗೂ ನನ್ನೊಳಗೆ ನೀನೆ

ಕೊಳಲು ನುಡಿಸಬೇಡ ದೂರದಿಂದ
ಕರಳು ಕಿತ್ತು ಬರುವೆ ನಾ
ಕಣ್ಣ ರೆಪ್ಪೆಯಲ್ಲೇ ಕೂತಿರುವೆ
ಇನ್ನೆಲ್ಲಿ ಹೋಗುವೆ ನೀ?

ಬಾಲಲೀಲೆ ಕಂಡು ಬೆಳೆದೆ
ನಿನ್ನ ಕಥೆಯಲೇ ನಾ ನಲಿದೆ
ಯಶೋದೆ ಕಣ್ಣಲಿ ಕಂಡ ನಿನ್ನ
ನನ್ನ ಕಣ್ಣಲಿ ಕಂಡೆ ನಾನು

ನನ್ನ ಬಾಲ್ಯದ ಆಟದಲ್ಲೂ,
ನೀನೇ ಇದ್ದೆ ಗೆಳೆಯನಾಗಿ
ಇಂದಿಗೂ ಆ ಪುಟ್ಟ ಕೃಷ್ಣನೇ
ಇರುವೆ ನನ್ನ ದೈವವಾಗಿ

ಕಷ್ಟವೆಂದು ಯಾರಿಗೂ ಹೇಳಲಿಲ್ಲ
ಎಲ್ಲವನ್ನೂ ನಿನಗೇ ಹೇಳಿದೆ
ಕಣ್ಣೀರ ಹನಿ ಬೀಳುವ ಮುನ್ನವೇ
ನನ್ನ ಮನವ ನೀ ಅರಿತೆ

ಎಡವಿ ಬಿದ್ದಾಗ ಎತ್ತಿ ಹಿಡಿದು
ದಾರಿ ತೋರಿದವನೂ ನೀನೇ
ನನ್ನ ರಕ್ಷಣೆಯ ನೆರಳು ನೀನೆ
ನನ್ನ ಉಸಿರಿನ ಹಣತೆ ನೀನೆ


ಗೋಕುಲದ ರಾಧೆ ಪ್ರೀತಿಸಿದಂತೆ ಬರಿ ಪ್ರೇಮವಲ್ಲ
ಇದು ಆತ್ಮ ಆತ್ಮವ ಸೇರುವ ಆರಾಧನೆ
ನೀ ಇಲ್ಲದೇ ಒಂದು ಕ್ಷಣವೂ ಬಾಳು ಬಾಳಲ್ಲ ಕೃಷ್ಣ
ನಿನ್ನ ಹೆಸರೇ ನನ್ನ ಜಪ, ನಿನ್ನ ನೆನಪೇ ನನ್ನ ತಪ

Creative Writings