
Article · August 14, 2026
ಜಿ.ಟಿ.ಟಿ.ಸಿ ಯಲ್ಲಿ ನೀಡುವ ಶಿಕ್ಷಣ ನಮ್ಮದಾಗಿಸೋಣ...
By ಪ್ರವೀಣ,ಪೊಸವಳ್ಯ ಬೆಲ್ಲ
- ಪ್ರವೀಣ ಪೊಸವೊಳ್ಯ ಬೆಲ್ಲ.
Govt. Tool Room & Training Centre (GTTC)
ತಾಂತ್ರಿಕ ಶಿಕ್ಷಣವು ಪ್ರಾಯೋಗಿಕವಾಗಿ ಯಶಸ್ವಿಯಾದಾಗ ಅದರ ಫಲಿತಾಂಶ ಉತ್ತಮ ಕೌಶಲ್ಯ ಇರುವ ಯುವ ಸಮೂಹದ ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಕರ್ನಾಟಕ ಸರ್ಕಾರ ಮತ್ತು ಜರ್ಮನ್ ತಂತ್ರಜ್ಞಾನದ ಅಳವಡಿಕೆಯೊಂದಿಗೆ ರಾಜ್ಯದಲ್ಲಿರುವ ಜಿಟಿಟಿಸಿ ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ಡಿಪ್ಲೋಮಾ ಇಂಜಿನಿಯರಿಂಗ್ ಕೋರ್ಸಗಳಿವೆ. ಮಂಗಳೂರಿನಲ್ಲಿರುವ ಕೇಂದ್ರವು ಬೈಕಂಪಾಡಿಯಲ್ಲಿದ್ದು ಸುತ್ತಮುತ್ತ ಜಿಲ್ಲೆಯ ಯುವ ಜನತೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ.
ಜಿಟಿಟಿಸಿ ಕೇಂದ್ರಗಳ ಪರಿಚಯ:
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC) ಕರ್ನಾಟಕ ಸರ್ಕಾರ ಮತ್ತು ಡೆನ್ಮಾರ್ಕ್ ಸರ್ಕಾರದ ನಡುವಿನ ಜಂಟಿ ಸಹಯೋಗದ ಉದ್ಯಮವಾಗಿದ್ದು, 1972ರಲ್ಲಿ ಬೆಂಗಳೂರಿನ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಪ್ರಾರಂಭವಾಯಿತು. GTTC ವಿನ್ಯಾಸ, ಅನಾಲಿಸಿಸ್ ಮತ್ತು ಉಪಕರಣದ ಉತ್ಪಾದನಾ ಅಂಶಗಳು, ಡೈಸ್ ಅಂಡ್ ಮೌಲ್ಡ್, ಪ್ರಿಸಿಷನ್ ಉತ್ಪಾದನೆ, ಮೆಕಾಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್, ಆಟೋಮೇಶನ್ & ರೊಬೊಟಿಕ್ಸ್, ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿ ಮತಿ ) ಆಯಾಮಗಳಲ್ಲಿ ಅತ್ಯಂತ ಪ್ರಾಯೋಗಿಕ-ಕೇಂದ್ರಿತ ತರಬೇತಿ ಕೋರ್ಸ್‌ಗಳನ್ನು ಒದಗಿಸುವುದರಲ್ಲಿ ಮುಂಚೂಣಿಯಲ್ಲಿದೆ. ಈ ಕೋರ್ಸ್‌ಗಳು ಉತ್ಪಾದನಾ ವಲಯದಲ್ಲಿ ವೃದ್ಧಿಸುತ್ತಿರುವ ಬೇಡಿಕೆಯ ಅತ್ಯಂತ ಉನ್ನತ ಗುಣಮಟ್ಟದ ತಾಂತ್ರಿಕ ಮಾನವ ಸಂಪನ್ಮೂಲದ ಅಗತ್ಯವನ್ನು ಪೂರೈಸುತ್ತವೆ. ಬೋಧಕ-ಟ್ರೈನೀ ಸಕ್ರಿಯತೆಗೆ ಹೆಚ್ಚು ಒತ್ತು ನೀಡುವ ಮೂಲಕ, ಕಲಿಕೆಯ ಪ್ರಕ್ರಿಯೆಯಲ್ಲಿ ಅತ್ಯುತ್ತಮ ಸಂಪ್ರದಾಯಗಳನ್ನು ಅನುಸರಿಸುವ ಮೂಲಕ GTTC ರಾಜ್ಯದಲ್ಲಿನ ಅಪಾರ ಸಂಖ್ಯೆಯ ಜನರಿಗೆ ಅನುಕೂಲ ಕಲ್ಪಿಸಿದ್ದು ಕಳೆದ ಐದು ದಶಕಗಳಿಂದ ಅತ್ಯಂತ ಗಮನಾರ್ಹ ಬದ್ಧತೆ ಮತ್ತು ವೃತ್ತಿಪರತೆಯನ್ನು ಹೊಂದಿದೆ. ಕರ್ನಾಟಕ ಸರ್ಕಾರವು ಪ್ರಸ್ತುತ ಹಾಗೂ ಹೊಸ ಕೈಗಾರಿಕೆಗಳಿಗೆ ಕೌಶಲ್ಯಭರಿತ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಸೇವೆಗಳನ್ನು ಒದಗಿಸಲು ರಾಜ್ಯಾದ್ಯಂತ 32 GTTC ಕೇಂದ್ರಗಳನ್ನು ಪ್ರಾರಂಭಿಸಿದೆ. GTTC ಎರಡು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಿಗೆ ವಿವಿಧ ದೀರ್ಘಾವಧಿ ಮತ್ತು ಅಲ್ಪಾವಧಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ನೀಡುತ್ತಾ ಬಂದಿದೆ.
ಇಲ್ಲಿ ಕಲಿತ ಡಿಪ್ಲೋಮಾ ಶಿಕ್ಷಣದ ನಂತರ ಎಂಜಿನಿಯರಿಂಗ್ ಪದವಿ ಪಡೆದು ಎಂ.ಟೆಕ್ ಮುಂತಾದ ಉನ್ನತ ಶಿಕ್ಷಣಕ್ಕೆ ಅವಕಾಶಗಳಿವೆ.

