
Article · November 19, 2026
ಬೆಳಗಿನ ನಡಿಗೆಯ ಸುತ್ತ ಒಂದು ಸುತ್ತು
ಪದ್ಮಶ್ರೀ ಮಾದೇರಿ
ನಾವಿರುವುದು ಬೆಂಗಳೂರಿನ ಎರಡು ಬೆಡ್ ರೂಮಿನ ಅಪಾರ್ಟ್ಮೆಂಟಿನಲ್ಲಿ. ಸ್ವಲ್ಪ ಮನೆ ಕೆಲಸ, ಅಡುಗೆ, ಇತ್ಯಾದಿ ದಿನನಿತ್ಯದ ಜವಾಬ್ದಾರಿಗಳಿದ್ದರೂ, ದೈಹಿಕ ಚಟುವಟಿಕೆ ಕಡಿಮೆಯೇ. ಇದಕ್ಕೊಂದು ಪರಿಹಾರವೆಂಬಂತೆ, ನಾನು ಹಾಗೂ ಮನೆಯವರು, ವಾರದಲ್ಲಿ ಕನಿಷ್ಠ ನಾಲ್ಕು ದಿನ ಬೆಳಗಿನ ನಡಿಗೆಗೆ ಹೋಗುತ್ತೇವೆ. ಈ ನಡಿಗೆ ಕೇವಲ ವ್ಯಾಯಾಮವಲ್ಲ, ದಿನದ ಆರಂಭದಲ್ಲಿ ಸಿಗುವ ಒಂದು ಪುಟ್ಟ ವಿರಾಮ. ಮನಸ್ಸಿಗೆ ಮುದ ನೀಡುವ ಸಮಯ.
ರಸ್ತೆಯ ಇಕ್ಕಲಗಳಲ್ಲಿ ಸಾಲಾಗಿ ನಿಂತಿರುವ ಮರಗಳ ನಡುವೆ, ಹಕ್ಕಿಗಳ ಚಿಲಿಪಿಲಿ ಕಲರವವನ್ನು ಆಲಿಸುತ್ತಾ, ಮುಖಕ್ಕೆ ತಂಪಾದ ತಂಗಾಳಿ ಸ್ಪರ್ಶಿಸುತ್ತಿರಲು, ಸುತ್ತಲಿನ ನಿಶ್ಶಬ್ದ ವಾತಾವರಣದಲ್ಲಿ ನಮ್ಮ ನಡಿಗೆ ಸಾಗುತ್ತದೆ ಎಂದೆಲ್ಲಾ ಬರೆಯುತ್ತೇನೆ ಅಂತ ಅಂದುಕೊಂಡರೆ ನಿಮ್ಮ ಊಹೆ ಖಂಡಿತವಾಗಿಯೂ ತಪ್ಪು. ರಸ್ತೆಯ ಎರಡೂ ಬದಿಗಳಲ್ಲಿ ಪಾರ್ಕ್ ಮಾಡಿರುವ ವಾಹನಗಳು, ಕಸ ಸಂಗ್ರಹಣೆ ಮಾಡುವ ವಾಹನಗಳಿಂದ ಬರುವ ವಾಸನೆ, ರಸ್ತೆಯಲ್ಲಿ ಸಂಚರಿಸುವ ವಾಹನಗಳ ಹಾರ್ನ್ ಗಳ ನಿರಂತರ ಸದ್ದು, ದಾರಿಯಲ್ಲಿ ಓಡಾಡುವ ಜನರ ಗದ್ದಲ - ಇವೆಲ್ಲದರ ನಡುವೆ ದಾರಿ ಮಾಡಿಕೊಂಡು, ತಲೆಬಗ್ಗಿಸಿ ನೆಲದ ಮೇಲೆ ಗಮನ ಇರಿಸುತ್ತಾ, ಸಾಕುಪ್ರಾಣಿಗಳು, ಬೀದಿ ನಾಯಿಗಳು, ರಸ್ತೆಯ ಬದಿಯಲ್ಲಿ ಬಿಟ್ಟು ಹೋಗಿರುವ " ನೆನಪಿನ ಕಾಣಿಕೆ"ಯನ್ನು ಮೆಟ್ಟದಂತೆ ಜಾಗರೂಕರಾಗಿ, ನಾವು ಉದ್ಯಾನದತ್ತ ಸಾಗಬೇಕು. ಬೆಳಗಿನ ನಡಿಗೆಯೂ ಕೆಲವೊಮ್ಮೆ ಎಷ್ಟೊಂದು ಸಾಹಸಮಯವಾಗಿರುತ್ತದೆ!!! ಆದರೂ, ನಮಗೆ ಈ ಬೆಳಗಿನ ನಡಿಗೆ ಒಂದು ಸಣ್ಣ ಪ್ರವಾಸಕ್ಕೆ ಹೋದ ಅನುಭವವನ್ನು ನೀಡುತ್ತದೆ. ಅದು ಹೇಗೆ ಎಂದು ನೀವೇ ನೋಡಿ.
ನಮ್ಮ ಮನೆಯಿಂದ ಉದ್ಯಾನ ಸುಮಾರು 700 ಮೀಟರ್ ದೂರದಲ್ಲಿದೆ. ಬೆಳಗ್ಗೆ 6:30 ಇಂದ 7:00 ಗಂಟೆಯ ಒಳಗೆ ನಾವು ನಡಿಗೆಗೆ ಹೊರಡುತ್ತೇವೆ. ಹೀಗೆ ಉದ್ಯಾನದ ಕಡೆಗೆ ಹೋಗುವ ದಾರಿಯಲ್ಲಿ, ನಾವು ಮೊದಲು ಭೇಟಿಯಾಗುವುದು ಸಾವಿತ್ರಮ್ಮನವರನ್ನು. ಹಲವು ಮನೆಗಳಲ್ಲಿ ಮನೆ ಕೆಲಸದವರಾಗಿ ಕೆಲಸ ಮಾಡುವ ಇವರು, ನಾವು ವಾಕಿಂಗ್ ಹೋಗುವುದನ್ನು ಗಮನಿಸಿ, ಕ್ರಮೇಣ ನಮ್ಮೊಂದಿಗೆ ಮಾತನಾಡಲು ಆರಂಭಿಸಿ ಈಗ ಪರಿಚಿತರಾಗಿದ್ದಾರೆ. ಆತ್ಮೀಯವಾಗಿ ಮಾತನಾಡುವ ಅವರು," ಜೋಪಾನವಾಗಿ ಹೋಗಿ" ಎಂದು ಕಾಳಜಿಯಿಂದ ಹೇಳುವಾಗ ನಮಗೆ ಖುಷಿಯಾಗುತ್ತದೆ. ಈ ನಮ್ಮ ಭೇಟಿ ಕೆಲವೇ ಸೆಕೆಂಡುಗಳದ್ದಾದರೂ, ಯಾವುದಾದರೂ ದಿನ ಅವರು ಕಾಣಿಸದಿದ್ದರೆ ನಮ್ಮ ಕಣ್ಣುಗಳು ಸುತ್ತಮುತ್ತಲಿನ ಮನೆಗಳಲೆಲ್ಲಾದರೂ ಕೆಲಸ ಮಾಡುತ್ತಿದ್ದಾರೋ ಎಂದು ಅವರನ್ನು ಹುಡುಕುತ್ತವೆ.
ಸಾವಿತ್ರಮ್ಮನವರನ್ನು ಮಾತನಾಡಿಸಿ ಸ್ವಲ್ಪ ಮುಂದೆ ಹೋದಾಗ,ರಸ್ತೆಯ ಬದಿಯಲ್ಲಿರುವ ಬೃಹತ್ ಮರದ ಕೊಂಬೆಯ ಮೇಲೆ ಕುಳಿತು ಕೆಳಗೆಲ್ಲಾ ಕಣ್ಣು ಹಾಯಿಸುತ್ತಿರುವ ಗೂಬಕ್ಕನ ದರ್ಶನವಾಗುತ್ತದೆ. ಅದು ಗೂಬಕ್ಕನೋ ಅಥವಾ ಗೂಬಣ್ಣನೋ ಎಂದು ನನಗೆ ಗೊತ್ತಿಲ್ಲ. ನಾನು ಪ್ರೀತಿಯಿಂದ ಗೂಬಕ್ಕ ಎಂದು ಕರೆಯುತ್ತೇನೆ ಅಷ್ಟೇ. ಎಷ್ಟು ಮುದ್ದಾಗಿದ್ದಾಳೆ ಗೊತ್ತಾ? ಒಂದೆರಡು ವರ್ಷಗಳ ಹಿಂದೆ, ಮೊದಲ ಬಾರಿ ಅವಳನ್ನು ನೋಡಿದಾಗ, ಮನೆಗೆ ಹೋಗಿ, ಕ್ಯಾಮರಾ ತಂದು, ಅವಳ ಚಿತ್ರವನ್ನು ಸೆರೆಹಿಡಿದಿದ್ದೆವು. ಪ್ರತಿದಿನ ಬೆಳಗ್ಗೆ ಅವಳನ್ನು ನೋಡಿ "ಗುಡ್ ಮಾರ್ನಿಂಗ್ ಗೂಬಕ್ಕ" ಎನ್ನುವುದೇ ನನಗೆ ಬಹಳ ಖುಷಿ. ನಾವು ಅವಳನ್ನು ನೋಡಿದಾಗ, ಅವಳು ಕೂಡ ನಮ್ಮನ್ನು ತದೇಕ ಚಿತ್ತದಿಂದ ದಿಟ್ಟಿಸಿ ನೋಡುತ್ತಾಳೆ. ಅವಳನ್ನು ನೋಡುವುದೇ ಒಂದು ವಿಶೇಷ ಅನುಭವ. ಈಗ ಕೆಲವು ದಿನಗಳಿಂದ ಗೂಬಕ್ಕ ಕಾಣಿಸುತ್ತಿಲ್ಲ. ಇದಕ್ಕೆ ನನ್ನ ಮನೆಯವರು - ಆ ಗೂಬಕ್ಕ ರಹಸ್ಯ ಕಾರ್ಯಾಚರಣೆಯಲ್ಲಿರುವ ಗೂಢಾಚಾರಿಣಿ ಎಂದೂ, ನಾವು ಪ್ರತಿದಿನ ಅವಳನ್ನು ನೋಡುವುದಲ್ಲದೆ, ಅವಳ ಚಿತ್ರವನ್ನೂ ಸೆರೆಹಿಡಿದ ಕಾರಣ, ಅವಳ ಗುರುತು ಬಯಲಾಗಿದೆ ಎಂದೂ, ಹಾಗಾಗಿ ಕೆಲ ದಿನಗಳ ಕಾಲ ಕಣ್ಮರೆಯಾಗಿ ಎಲ್ಲೋ ಅಡಗಿಕೊಂಡಿದ್ದಾಳೆ ಎಂದೂ ತಮಾಷೆಯಾಗಿ ಹೇಳುತ್ತಾರೆ. ಅವರ ಈ ಕಲ್ಪನೆ ನೆನಪಾದಾಗಲೆಲ್ಲ ನಗು ಬರುತ್ತದೆ.

ಗೂಬಕ್ಕನನ್ನು ನೋಡಿ ಮುಂದೆ ಸಾಗಿದರೆ, ಇನ್ನೊಂದು ಮನೆಯ ಕಾಂಪೌಂಡ್ ನ ಕಬ್ಬಿಣದ ಜಾಲರಿಯ ಹಿಂದೆ ಕುಳಿತಿರುವ ಬೆಕ್ಕೊಂದು "ಮಿಯಾಂವ್" ಎಂದು ನಮ್ಮನ್ನು ಕರೆಯುತ್ತದೆ. ನಾನು ಮೆಲ್ಲ ಹತ್ತಿರ ಹೋಗಿ, ಜಾಲರಿಯ ಸಣ್ಣ ಸಣ್ಣ ರಂಧ್ರಗಳ ಮೂಲಕ, ತೋರುಬೆರಳನ್ನು ಒಳಗೆ ತೂರಿಸಿ ಅದನ್ನು ಮುದ್ದಿಸಲು ಪ್ರಯತ್ನಿಸುತ್ತೇನೆ.

ಅದು ನನ್ನನ್ನೇ ದಿಟ್ಟಿಸಿ ನೋಡುವಾಗ - "ಇವಳು ಯಾಕೆ ಕೇವಲ ಒಂದು ಬೆರಳಿನಿಂದ ನನ್ನನ್ನು ಮುಟ್ಟುತ್ತಾಳೆ? ಇಡೀ ಕೈಯಿಂದ ನನ್ನ ತಲೆಯನ್ನು ನೆವರಿಸಬಾರದೇ" ಎಂದು ಮನಸ್ಸಿನಲ್ಲಿಯೇ ನನಗೆ ಬಯ್ಯುವಂತೆ ತೋರುತ್ತದೆ. ನನ್ನ ಕೈಯನ್ನು ಆ ರಂಧ್ರಗಳೊಳಗೆ ತೂರಿಸಲು ಸಾಧ್ಯವಿಲ್ಲ ಎಂದು ಅದಕ್ಕೆ ಗೊತ್ತಾಗುವುದಿಲ್ಲವೋ ಏನೋ. ಇಷ್ಟಾಗುವಾಗ, "ನೀನು ವಾಕಿಂಗ್ ಮಾಡಲು ಬರುವುದೋ ಅಥವಾ ಗೂಬಕ್ಕನನ್ನು, ಬೆಕ್ಕನ್ನು ನೋಡಲು ಬರುವುದೋ" ಎಂದು ನನ್ನ ಮನೆಯವರ ಕರೆ ಕೇಳಿ, ಬೇಗ ಬೇಗನೆ ಅವರೊಡನೆ ಉದ್ಯಾನದತ್ತ ಹೆಜ್ಜೆ ಹಾಕುತ್ತೇನೆ.
ಉದ್ಯಾನದ ಒಂದು ಬದಿಯಲ್ಲಿ, ಆರ್ ಎಸ್ ಎಸ್ ನವರು ತರಗತಿಯನ್ನು ನಡೆಸುವುದರಿಂದ,ನಾವು ಉದ್ಯಾನ ಪ್ರವೇಶಿಸುತ್ತಲೇ ಅವರ ಸಾಮೂಹಿಕ ಪ್ರಾರ್ಥನೆ "ನಮಸ್ತೇ ಸದಾ ವತ್ಸಲೇ ಮಾತೃಭೂಮೇ" ನಮ್ಮ ಕಿವಿಗೆ ಬೀಳುತ್ತದೆ. ಇದನ್ನು ಕೇಳುವಾಗಲೆಲ್ಲಾ ನಮ್ಮಲ್ಲಿ ಹುದುಗಿರುವ ದೇಶಭಕ್ತಿ ಪುಟಿದೇಳುತ್ತದೆ. ಒಂದು ರೀತಿಯ ಹೊಸ ಹುರುಪು ನಮ್ಮನ್ನು ಆವರಿಸುತ್ತದೆ. ನಾವು ಉದ್ಯಾನದಲ್ಲಿ ಸುಮಾರು 4 ಕಿ.ಮೀ ನಡೆಯುತ್ತೇವೆ. ಆದರೆ ನಡೆಯುವಾಗ ನಮ್ಮ ಗಮನ ಕೇವಲ ನಡಿಗೆಯ ಮೇಲಿರದೇ, ಅಲ್ಲಿ ಕಾಣಸಿಗುವ ಜನರು, ಅವರ ಚಟುವಟಿಕೆಗಳು, ಅವರ ನಡುವಿನ ಮಾತುಕತೆಗಳು ಎಲ್ಲವೂ ನಮ್ಮ ಗಮನ ಸೆಳೆಯುತ್ತವೆ.
ಉದ್ಯಾನದಲ್ಲಿ ಅಳವಡಿಸಿರುವ ವ್ಯಾಯಾಮದ ಉಪಕರಣಗಳನ್ನು ಬಳಸುವ ಕೆಲವರಿದ್ದರೆ, ನಡಿಗೆ ಮುಗಿಸಿ ಒಂದೆಡೆ ಕುಳಿತು ಹರಟುತ್ತಾ, ನಗುತ್ತಾ ಕಾಲ ಕಳೆಯುವ ಮಹಿಳೆಯರ ಗುಂಪೂ ಇದೆ. ಮತ್ತೊಂದೆಡೆ ದೇಶವಿದೇಶದ ರಾಜಕೀಯ ವಿದ್ಯಮಾನಗಳ ಬಗ್ಗೆ ಗಂಭೀರ ಚರ್ಚೆಯಲ್ಲಿ ತೊಡಗಿರುವ ಪುರುಷರ ಗುಂಪೂ ಕೆಲವಿದೆ. ಕೆಲವರು ಚಪ್ಪಾಳೆ ತಟ್ಟುತ್ತಾ ವ್ಯಾಯಾಮ ಮಾಡಿದರೆ, ಇನ್ನೂ ಕೆಲವರು ಪ್ರಣಾಮ ಮಾಡುತ್ತಿರುತ್ತಾರೆ. ಜಾಗಿಂಗ್ ಮಾಡುವವರೂ ಇದ್ದಾರೆ, ಆದರೆ ಕೆಲವೇ ಕೆಲವು ಮಂದಿ. ಹೆಚ್ಚಿನ ಯುವಕ,ಯುವತಿಯರು ಕಿವಿಗೆ ಹೆಡ್ ಫೋನ್ ಹಾಕಿಕೊಂಡು ತಮ್ಮದೇ ಲೋಕದಲ್ಲಿ ನಡೆಯುತ್ತಿರುತ್ತಾರೆ. ವಾಕರ್ ಗಳ ಸಹಾಯದಿಂದ ನಿಧಾನವಾಗಿ ನಡೆಯುವ ಹಿರಿಯರನ್ನು ನೋಡಿದಾಗ, ಅವರ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತದೆ. ವಯಸ್ಸು ಮತ್ತು ದೈಹಿಕ ಮಿತಿಗಳ ನಡುವೆಯೂ ಪ್ರತಿದಿನ ನಡಿಗೆಗೆ ಬರುವ ಅವರ ಆಸಕ್ತಿ ನಮಗೆ ಸ್ಪೂರ್ತಿ ನೀಡುತ್ತದೆ.
ಕೆಲವರ ವರ್ತನೆ ನಮ್ಮಲ್ಲಿ ಅಚ್ಚರಿಯನ್ನು ಮೂಡಿಸುತ್ತದೆ. ಒಬ್ಬರಂತೂ ಮೊಬೈಲಿನಲ್ಲಿ ಮಾತನಾಡುತ್ತಾ ನಡೆಯುವಾಗ, ದಾರಿ ಬದಿಯಲ್ಲಿರುವ ಗಿಡಗಳಿಂದ ಎಲೆಗಳನ್ನು ಕಿತ್ತು ಎಸೆಯುತ್ತಿರುತ್ತಾರೆ. ಅವರಿಗೆ ತಾವು ಹಾಗೆ ಮಾಡುವ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ. ಬಹುಶ: ಮೊಬೈಲ್ ಮಾತುಕತೆಯಲ್ಲಿ ಸಂಪೂರ್ಣ ಮಗ್ನರಾಗಿ ಹಾಗೆ ಮಾಡುತ್ತಾರೇನೋ. ಮತ್ತೊಬ್ಬ ದಂಪತಿ, ಫ್ಲಾಸ್ಕಿನಲ್ಲಿ ಕಾಫಿ ತಂದು, ಬೆಂಚಿನಲ್ಲಿ ಕುಳಿತು,ಕುಡಿಯುತ್ತಾ, ಏರು ದನಿಯಲ್ಲಿ ಮಾತನಾಡುತ್ತಿರುತ್ತಾರೆ. ಅವರು ಕೇವಲ ಕಾಫಿ ಕುಡಿಯಲು ಉದ್ಯಾನಕ್ಕೆ ಬರುವವರು. ಬಹಳ ಅಪರೂಪದಲ್ಲಿ ನಡೆಯುತ್ತಾರಷ್ಟೇ. ಬೆಂಚಿನಲ್ಲಿ ಕುಳಿತು ರೀಲ್ಸ್ ನೋಡುವವರು, ಪುಸ್ತಕ ಓದುವವರು ಕಾಣಸಿಗುತ್ತಾರೆ. ಕೇವಲ ವ್ಯಾಯಾಮ ಮಾಡಲೆಂದೇ ಉದ್ಯಾನಕ್ಕೆ ಬರಬೇಕೆಂದಿಲ್ಲವಲ್ಲ.
ನನ್ನ ಅಜ್ಜಿಯನ್ನೇ ಹೋಲುವ ಹಿರಿಯ ಅಜ್ಜಿಯೊಬ್ಬರು ಪ್ರತಿದಿನ ನಮಗೆ "ಗುಡ್ ಮಾರ್ನಿಂಗ್" ಹೇಳುತ್ತಾರೆ. ಇನ್ನು ಉಡುಪಿಯ ಕಡೆಯ ಹಿರಿಯರೊಬ್ಬರು, ಉದ್ಯಾನದಲ್ಲಿ ಭೇಟಿಯಾದವರು, "ದಾನೆ ಬೊಕ್ಕ? ಎಂಚ ಉಳ್ಳರ್?" ಎಂದು ತುಳುವಿನಲ್ಲಿ ಸಂಭಾಷಿಸಿದಾಗ, ಕೆಲಕ್ಷಣಗಳ ಕಾಲ ನಾವು ಬೆಂಗಳೂರಿನಲ್ಲಿದ್ದೇವೆ ಎಂಬುದನ್ನೇ ಮರೆತುಬಿಡುತ್ತೇವೆ. ತುಳುವಿನಲ್ಲಿ ಮಾತನಾಡುವವರು ಸಿಗುವಾಗ ಆಗುವ ಸಂತೋಷವೇ ಬೇರೆ.
ಉದ್ಯಾನವನದಲ್ಲಿ ದೊಡ್ಡ ಮರಗಳು ಒಂದೆರಡಷ್ಟೇ ಇದ್ದರೂ, ಸಾಕಷ್ಟು ಸಣ್ಣ ಸಣ್ಣ ಗಿಡಗಳನ್ನು ಬೆಳೆಸಿದ್ದಾರೆ. ಅವುಗಳ ನಡುವೆ ಆಗೊಮ್ಮೆ ಈಗೊಮ್ಮೆ ಕೇಳಿ ಬರುವ ಹಕ್ಕಿಗಳ ಚಿಲಿಪಿಲಿ ಸದ್ದು ಮನಸ್ಸಿಗೆ ಮುದ ನೀಡುತ್ತದೆ.

ಹೊರಗಿನ ರಸ್ತೆಯ ವಾಹನಗಳ ಗದ್ದಲಕ್ಕೆ ಹೋಲಿಸಿದರೆ, ಉದ್ಯಾನದ ಒಳಗಿನ ವಾತಾವರಣ ಎಷ್ಟೋ ನೆಮ್ಮದಿ ಎನಿಸುತ್ತದೆ. ಪ್ರತಿದಿನವೂ ಅದೇ ದಾರಿ, ಅದೇ ಉದ್ಯಾನ, ಬಹುತೇಕ ಅದೇ ಮುಖಗಳಾದರೂ ಏನಾದರೊಂದು ಹೊಸತು ಕಾಣ ಸಿಗುತ್ತದೆ, ಹೊಸ ಅನುಭವವಾಗುತ್ತದೆ. ಇನ್ನು ಪ್ರತಿದಿನ ಕಛೇರಿ, ಮೀಟಿಂಗ್ ಎಂದು ಮಾತನಾಡಲು ಪುರುಸೋತ್ತಿಲ್ಲದ ನನ್ನ ಮನೆಯವರೊಡನೆ ಈ ಒಂದು ಗಂಟೆ ಸಮಯ ಕಳೆಯಲು ಅವಕಾಶ ಸಿಗುತ್ತದೆ.
ಹೀಗೆ ನಮ್ಮ ನಡಿಗೆಯನ್ನು ಮುಗಿಸಿ ಮನೆಗೆ ಹಿಂದಿರುಗುವಾಗ, ದೇಹಕ್ಕೆ ವ್ಯಾಯಾಮವಾದ ತೃಪ್ತಿಯ ಜೊತೆಗೆ ಮನಸ್ಸು ಉಲ್ಲಾಸಭರಿತವಾಗಿರುತ್ತದೆ. ಬಹುಶ: ಅದಕ್ಕಾಗಿಯೇ ಮರುದಿನ ಬೆಳಗ್ಗೆ, ಮತ್ತೆ ಅದೇ ದಾರಿಯಲ್ಲಿ ನಡೆಯಲು ಮನಸ್ಸು ಹಾತೊರೆಯುತ್ತದೆ.


