
Article · August 19, 2026
ಮಿಡಲ್ ಕ್ಲಾಸ್ ಲೈಫು ಮತ್ತು ಬೇಕುಗಳ ಪಟ್ಟಿ
By ದಿವ್ಯಾ ಶಿರಂತಡ್ಕ
ದಿವ್ಯಾ ಬಿ ಶಿರಂತಡ್ಕ
(ಪ್ರಬಂಧ)
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಗೌಜಿ ಮಾತ್ರವಲ್ಲ ಶಾಪಿಂಗ್ ಭರಾಟೆ ಎಲ್ಲೆ ಮೀರುತ್ತದೆ. ಜಾಹೀರಾತು ಮಾಧ್ಯಮವು ನವ ವಧುವಿನಂತೆ ಹೊಸತನದಿಂದ ಕಂಗೊಳಿಸುತ್ತದೆ.
ಗೃಹೋಪಯೋಗಿ ಸಾಮಗ್ರಿಗಳು, ಎಲೆಕ್ಟ್ರಾನಿಕ್ ವಸ್ತುಗಳು, ವಾಹನ, ಚಿನ್ನ, ವಸ್ತ್ರ ಹೀಗೆ ಒಂದಕ್ಕೊಂದು ಪೈಪೋಟಿ ನಡೆಸುವಂತೆ ಬೃಹತ್ ಪ್ರಚಾರವನ್ನು ಕೈಗೊಳ್ಳುತ್ತದೆ. ಡಿಸ್ಕೌಂಟ್, ಎಕ್ಸ್ಚೇಂಜ್ ಆಫರ್, ಬೈ ಒನ್ ಗೆಟ್ ಒನ್ ಫ್ರೀ ಹೀಗೆ ನಾನಾ ರೀತಿಯಲ್ಲಿ ಸಂಮೋಹನಾಸ್ತ್ರವನ್ನು ನಮ್ಮ ಮೇಲೆ ಪ್ರಯೋಗಿಸುತ್ತದೆ. 'ಉಳ್ಳವರು ಶಿವಾಲಯ ಮಾಡುವರು' ಎಂಬ ಬಸವಣ್ಣನ ವಚನದಂತೆ ಸಾಕಷ್ಟು ಉಳ್ಳವರು ತಮಗೆ ಬೇಕೆಂದಾಗ ಬೇಕಾದನ್ನು ಖರೀದಿಸುತ್ತಾರೆ. ಆದರೆ ನಮ್ಮಂಥಹ ಮಧ್ಯಮ ಆದಾಯ ಹೊಂದಿದ ಸಮೂಹಕ್ಕಂತೂ ಇದೆಲ್ಲ ಬಿಸಿ ತುಪ್ಪದಂತೆ.
ನಾನು ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಅರ್ಥಶಾಸ್ತ್ರವನ್ನು ಅದೆಷ್ಟು ಅರ್ಥ ಮಾಡಿಕೊಂಡಿದ್ದೆನೋ ಹೇಳಲಾರೆ. ಆದರೆ ಆಗ ನಮ್ಮ ಅಧ್ಯಾಪಕರು ಕಲಿಸಿದ 'wants are unlimited but the resources to fulfill them are always limited ' ಎಂಬ ವೇದವಾಕ್ಯವನ್ನು ಈಗಲೂ ನೆನಪಿಟ್ಟುಕೊಂಡಿದ್ದೇನೆ ಎಂದರೆ ಅದು ನನ್ನ ಜಾಣತನವಾಗಿರದೆ ನನ್ನ ಮಿಡಲ್ ಕ್ಲಾಸ್ ಜೀವನದ ನಿತ್ಯ ಅನುಭವವೇ ಆಗಿದೆ ಎನ್ನಬಹುದು. ಅಂತೆಯೇ Theory of diminishing marginal utility ಕಲಿಸುವಾಗ ಕೊಡುತ್ತಿದ್ದ ವಿವರಣೆ ಮಸಾಲೆ ದೋಸೆಯದು. ತೀರಾ ಹಸಿವಾದಾಗ ತಿನ್ನುವ ಮಸಾಲೆ ದೋಸೆಯ ರುಚಿ ವರ್ಣಿಸಲಸದಳ. ಆದರೆ ಎರಡನೇ ದೋಸೆ ತಿಂದರೆ ಆ ಮೊದಲ ಖುಷಿ ಕಡಿಮೆ ಆಗುತ್ತೆ ... ಆನಂತರವೂ ದೋಸೆ ತಿನ್ನುತ್ತಾ ಹೋದರೆ (ಕಿಸೆಯೂ ಖಾಲಿಯಾಗುವುದು) ರುಚಿಯೂ, ತೃಪ್ತಿಯೂ ಕಡಿಮೆಯಾಗುತ್ತಾ ಹೋಗುತ್ತದೆ ಎಂದಿದ್ದು ಇನ್ನೂ ನೆನಪಿದೆ. ಅದನ್ನೇ ಬದುಕಿಗೆ ಹೋಲಿಸುವುದಾದರೆ ಸಿರಿವಂತಿಕೆ ಹೆಚ್ಚಿದ್ದಷ್ಟೂ ಯಾವ ವಸ್ತು ಕೊಂಡರೂ ಅದರಿಂದ ಅತಿ ಎನ್ನಿಸುವಷ್ಟು ಸಂತೋಷ ಸಿಗುವುದು ದುರ್ಲಭ. ಹಸಿದವನಿಗಷ್ಟೇ ಗೊತ್ತು ತಾನೆ ಅನ್ನದ ಬೆಲೆ...
ಅತ್ತ ನಾಕವೂ ಮುಟ್ಟದ ಇತ್ತ ನರಕವೂ ತಟ್ಟದ ಸ್ಥಿತಿ ಈ ನಮ್ಮ ಮಧ್ಯಮ ವರ್ಗದ್ದು. ತಿಂಗಳ ನಿಶ್ಚಿತ ಆದಾಯವನ್ನು ಇಡೀ ತಿಂಗಳಿಗೆ ಅದು ಹೇಗೆ ಸರಿದೂಗಿಸಬಹುದು ಎಂದು ಲೆಕ್ಕ ಹಾಕುವುದೇ ನಮ್ಮ ಜೀವನದ ದೈನಂದಿನ ಲೆಕ್ಕಾಚಾರವಾಗಿ ಬಿಡುತ್ತದೆ! ಒಂದುವರೆ ಲೀಟರ್ ಹಾಲನ್ನು ಒಂದಕ್ಕೆ ಇಳಿಸಲು ಯೋಚಿಸುವುದು, ಕಾರಿನ ಬದಲು ಬಸ್ ಪಯಣ, ದೇವರಿಗೆ ದಕ್ಷಿಣ ಹಾಕುವಾಗಲೂ ಕೊಂಚ ಚೂಸಿಯಾಗಿರುವುದು, ದೇಣಿಗೆಗೆ ಬಂದವರಿಗೆ 1000 ಕೊಡುವ ಯೋಚನೆ ಬಂದರೂ 500 ಕ್ಕೆ ಇಳಿಸುವುದು ಹೀಗೆ cost saving ಆಲೋಚನೆಗಳು ಬರುವುದು ಮಧ್ಯಮ ವರ್ಗದ ಜನರ ತಲೆಯೊಳಗೆ ಮಾತ್ರ!
ಹಾಗೆಂದು ಆಸೆಗಳು ಸುಮ್ಮನಿರುತ್ತವೆಯೇ?! ಅವುಗಳು ಅದುಮಿ ಇಟ್ಟರೂ ಮತ್ತೆ ಹೊರಬರಲು ಪ್ರಯತ್ನಿಸುತ್ತದೆ. ಈಗ ಕಾಲ ಮೊದಲಿನಂತಿಲ್ಲ. ಮೊದಲು ದುಡ್ಡು ಇದ್ದವರೂ ಖರ್ಚು ಮಾಡುವುದರಲ್ಲಿ ದೊಡ್ಡತನ ತೋರಿಸುತ್ತಿರಲಿಲ್ಲ. ಆದರೀಗ 'ಸಾಲ ಮಾಡಿಯಾದರೂ ತುಪ್ಪ ತಿನ್ನು' ಎನ್ನುವ ಗಾದೆಯಂತೆ ಸಾಲವೋ ಸೋಲವೋ ಹೇಗಾದರೂ ಮಾಡಿ ಇರುವ ಒಂದೇ ಜೀವನವನ್ನು ಐಷಾರಾಮಗೊಳಿಸುವುದು ಎಲ್ಲರ ಪರಮ ಧ್ಯೇಯವೆಂಬಂತೆ ಭಾಸವಾಗುತ್ತದೆ.
'ಆಸೆಯೇ ದುಃಖಕ್ಕೆ ಮೂಲ' ಎಂದಿದ್ದಾನೆ ಬುದ್ಧ. ಅದು ಗೊತ್ತಿದ್ದೂ ಅದನ್ನು ಹತ್ತಿಕ್ಕಲಾರದವರೆಂದರೆ ನಮ್ಮಂತಹ ಮಧ್ಯಮ ವರ್ಗದವರು. ಹಬ್ಬಕ್ಕೆ ನಾಲ್ಕು ಹೊಸ ಸೀರೆ ಇಲ್ಲದಿದ್ದರೆ ಹೇಗೆ, ಹಳೆ ಮಿಕ್ಸಿಗೆ 10 ವರ್ಷ ಸಂದಿದೆ; ಒಂದು ಹೊಸ ಮಿಕ್ಸಿ ಈ ಬಾರಿಯಾದರೂ ಕೊಳ್ಳಲೇಬೇಕು, ಈ ಹಬ್ಬಕ್ಕೆ ಒಂದು ವಾಷಿಂಗ್ ಮಿಷನ್ ಕೊಂಡರೆ ಆದೀತು, ಬಂದವರು ಆಸೀನರಾಗಲು ಒಂದಷ್ಟು ಹೊಸ ಕುರ್ಚಿಗಳು, ತೀರ ಅಗತ್ಯವಲ್ಲದಿದ್ದರೂ ಐದಾರು ಜನ ಕೂತು ಊಟ ಮಾಡಬಹುದಾದ ಒಂದು ಡೈನಿಂಗ್ ಟೇಬಲ್... ಹೀಗೆ ಆಸೆಗಳನ್ನು ವಿಸ್ತರಿಸುತ್ತಾ ಹೋದರೆ ಅದು ಹನುಮಂತನ ಬಾಲದಂತೆ ಉದ್ದುದ್ದ ಬೆಳೆಯುತ್ತಲೇ ಹೋಗುತ್ತದೆ. ಆದರೆ ಅರ್ಥಶಾಸ್ತ್ರಜ್ಞರು ಹೇಳಿದಂತೆ resources to fulfill the wants....are always limited ಎಂದು ಮತ್ತೆ ಬೇಕುಗಳ ಪಟ್ಟಿಗೆ ಬ್ರೇಕ್ ಹಾಕಿ ಅದರಲ್ಲಿ ತೀರಾ ಬೇಕಾದನ್ನು ಮಾತ್ರ ಉಳಿಸಿ ಮತ್ತೆಲ್ಲವನ್ನು ಅಳಿಸಿ ಪೇಟೆಯತ್ತ ಪ್ರಯಾಣ ಬೆಳೆಸಬೇಕಾಗುತ್ತದೆ!
'ಹಾಸಿಗೆ ಇದ್ದಷ್ಟೇ ಕಾಲು ಚಾಚು' ಎನ್ನುವ ಪಾಠ ತಿಂಗಳ ನಿಶ್ಚಿತ ಸಂಬಳ ಇದ್ದವರಿಗೆ ಕರಗತವಾಗಿರುತ್ತದೆ. ಹಾಗಾಗಿ ಹಾಸಿಗೆ ಚಿಕ್ಕದಾದರೆ ಕೊಂಚ ಮುದುಡಿ ಮಲಗಬೇಕಾಗುತ್ತದೆ. ಕೆಲವೊಂದು ತಿಂಗಳು ಯೋಚಿಸದಂತಹ ಅಚಾನಕ್ ಖರ್ಚುಗಳು ಬಂದರಂತೂ ಎಲ್ಲಾ ಲೆಕ್ಕಾಚಾರಗಳೂ ತಲೆಕೆಳಗಾಗುತ್ತದೆ. 'ಮುಂಡಾಸಿನ ಗಂಡು ಸಿಗುವುದಿಲ್ಲ ಮುಟ್ಟಾಳೆಯವನಿಗೆ ಹೆಣ್ಣು ಕೊಡುವುದಿಲ್ಲ' ಎನ್ನುವ ಧೋರಣೆಯ ಕನ್ಯಾ ಪಿತೃವಿನಂತೆ ಮಧ್ಯಮದ ವರ್ಗದವರು ಮೇಲಕ್ಕೆ ಏರದೆ ಕೆಳಕ್ಕೆ ಜಾರದೆ ಬಹುತೇಕ ತ್ರಿಶಂಕು ಸ್ಥಿತಿಯಲ್ಲಿ ಇರುತ್ತಾರೆ.
ಮಧ್ಯಮ ವರ್ಗದವರ ಯಾವ ಘನ ಆಸೆಯಾದರೂ ಪೂರ್ಣಗೊಳ್ಳಬೇಕೆಂದರೆ ಕನಿಷ್ಠ ನಾಲ್ಕಾರು ವರ್ಷಗಳವರೆಗಾದರೂ ಕಾಯಬೇಕಾಗುತ್ತದೆ. ಹಿಂದೆ ಅಧ್ಯಾಪಕರಂತಹ ಉದ್ಯೋಗದಲ್ಲಿದ್ದವರು ಮನೆ ಕಟ್ಟುವುದು ಅವರ ನಿವೃತ್ತಿಯ ನಂತರವೇ ಎಂಬುದು ತೀರಾ ಸಾಮಾನ್ಯವಾದ ವಿಚಾರವಾಗಿತ್ತು. ಯಾವಾಗ ಐಟಿ ಕ್ಷೇತ್ರವು ಪ್ರವರ್ಧಮಾನಕ್ಕೆ ಬಂತೋ ಆಗಲೇ ವೇತನದಲ್ಲಿ ಅಜಗಜಾಂತರ ವ್ಯತ್ಯಾಸ ಕಂಡು ಬರಲು ಪ್ರಾರಂಭವಾದದ್ದು. ಮೂರು ದಶಕಗಳಿಗೂ ಹೆಚ್ಚು ಕಾಲ ಕರ್ತವ್ಯ ನಿರತನಾದ ಒಬ್ಬ ಅಧ್ಯಾಪಕನ ನಿವೃತ್ತಿ ಅಂಚಿನ ಸಂಬಳಕ್ಕಿಂತಲೂ ಹೆಚ್ಚಿನ ವೇತನ ಐಟಿ ಉದ್ಯೋಗಿಗಳು ಪ್ರಾರಂಭದ ವರ್ಷಗಳಲ್ಲೇ ಪಡೆದು ಬೀಗುವುದು ಕಾಲದ ಮಹಿಮೆಯೇ ಸರಿ.
ಆದರೆ ಒಂದಂತೂ ಸತ್ಯ. ಮಧ್ಯಮ ವರ್ಗದವರು ಹೆಚ್ಚಾಗಿ ತಕ್ಕಡಿಯಂತೆ ಸಮಸ್ಥಿತಿಯನ್ನು ಕಾಯ್ದುಕೊಂಡಿರುತ್ತಾರೆ. ನಾಳೆಯ ಬಗ್ಗೆ ಕನಸು ಮಾತ್ರವಲ್ಲ ಅವ್ಯಕ್ತ ಭಯ ಸದಾ ಕಾಡುತ್ತಿರುತ್ತದೆ. ಆದ ಕಾರಣ ಇವರ ಮನದಲ್ಲಿ 'ಅಹಂಕಾರ'ಕ್ಕೆ ಕಿಂಚಿತ್ತೂ ಜಾಗ ಇರುವುದಿಲ್ಲ. ಕಾರಣ 'ನಾಳೆ ದಿನ ಹೇಗೆ ಬೇಕಾದರೂ ಉಲ್ಟಾ ಹೊಡೆಯಬಹುದು' ಎನ್ನುವ ಜ್ಞಾನ ಸದಾ ಜಾಗೃತವಾಗಿರುತ್ತದೆ. ಆದ ಕಾರಣ ಯಾರ ಜೊತೆಗೂ ನಿಷ್ಠುರ ಮಾಡದೆ, 'ನಾಳೆ ಕಷ್ಟ ಬಂದಾಗ ಖಂಡಿತ ಇವರೆಲ್ಲ ಬೇಕಾಗಬಹುದು' ಎಂದು ತಗ್ಗಿ ಬಗ್ಗಿ ನಡೆಯುತ್ತಾರೆ. ಈಗ ಹೇಳಿ ಮಧ್ಯಮ ವರ್ಗದವರು ಯಾವತ್ತಿಗೂ ಬೆಸ್ಟ್ ಅಲ್ವಾ?!
