Karada Vishwa

Article · September 1, 2026

ಅಹಂ

By ಗಾಯತ್ರಿ ನಾಗರಾಜ ಅಡ್ಕತ್ತೊಟ್ಟು

ಗಾಯತ್ರಿ ಕೆ ಅಡ್ಕತೊಟ್ಟಿ


ಸಕಲ ಸಂಕಟ ಸಿಂಧುವಿಗೆ ಮೂಲ ‘ನಾನು’
ಅಹಮಿಕೆಯ ಅಟ್ಟಹಾಸದ ಅಂಧತಮಸ್ಸು.
ಗ್ರಂಥ ಜಪಕೆ ತಪಕೆ ಮಂದಿರದ ಮೋಕ್ಷಪಥಕೆ
ಅಹಂನ ವಿರಹವೊಂದೇ ಸ್ವಯಂ ಪ್ರಕಾಶವು
ಎಂದಿಹರು ವಿವೇಕಾನಂದ ಯತಿವರೇಣ್ಯರು,
ದರ್ಪದಳಿದ್ದಡೆ ದೊರೆವುದು ನಿರ್ವಾಣ ಸೌಖ್ಯವು.

ಉದಾಸೀನತೆಯೆಂಬ ಉಪೇಕ್ಷಾಸ್ತ್ರವೊಂದೆ
ಅಹಂಕಾರದ ಮರ್ಮಕ್ಕೆ ತೀವ್ರತರ ನೋವು,
ಪರ-ವಿರೋಧಗಳೆಂಬ ಪಥ್ಯಾಹಾರದಿಂದ
ಪುಷ್ಟವಾಗಿ ಮೆರೆವುದು ಸುಲಭದಿ ಗರ್ವವು
ಅರಿತು ನಿರ್ಲಿಪ್ತದ ಜೊತೆ, ಉದಾಸೀನರಾದರೆ,
ಅಹಂಗೆ ಉಳಿಗಾಲ ಲಯವಾಗುವುದು ಧ್ರುವವಾಗಿ.

ಎಷ್ಟೇ ಸತ್ಕರ್ಮವ ಮಾಡು, ಸಜ್ಜನಿಕೆಯ ತೋರು,
ಸರ್ವಸ್ವ ತ್ಯಾಗದ ವೈರಾಗ್ಯ ದೀಕ್ಷೆ ಧರಿಸು,
ಅಹಂಕಾರ ತ್ಯಜಿಸದಿದ್ದರೆ ಎಲ್ಲವೂ ವ್ಯರ್ಥ,
ಭಸ್ಮದಲ್ಲಿ ಹೋಮ ಮಾಡಿದಂತೆ ನಿಷ್ಫಲ
ನಿನ್ನದೇನಿದೆ ತ್ಯಜಿಸಲು?ಎಲ್ಲಾ ಸಮಾಜದೆರವಲು
‘ನಾನು-ನನ್ನದೆಂಬುದೇ ಕೇವಲ ಅಹಂಕೃತಿಯು.

ಅಹಂಕಾರವೆಂಬುದು ಕುರೂಪ, ಅದರೊಳೂ ಅತಿಕುರೂಪ
ಸೌಂದರ್ಯಕ್ಕೆ ಅದು ಪರಮ ವೈರಿ, ನಿರಾಶೆ ಅತೃಪ್ತಿ
ಯಾರ ಬಳಿ ನಿರಹಂಕಾರದ ನಿರ್ಮಲತೆ ನೆಲೆಸಿಹುದು
ಅವರೊಳು ಸೌಂದರ್ಯದ ದಿವ್ಯ ಜ್ಯೋತಿ ಬೆಳಗುವುದು.
ಆಶಾಭಂಗದ ಕೂಪ, ನಿರಾಶೆಯ ಕತ್ತಲೆಯಲಿ ಅಹಂ ಅಳಿದಾಗಲೇ,
ಒಡ ಮೂಡುವುದು ಚಿತ್ತದಲ್ಲಿ ನಿಜವಾದ ಆನಂದಾಮೃತವು.

Creative Writings