Karada Vishwa

Article · November 20, 2026

ವೃದ್ದೆ ಮತ್ತು ಕೋಲು

By ರಾಜಕುಮಾರ್ ಎಂ‌ ಪೈವಳಿಕೆ ಬೆಂಗಳೂರು

ರಾಜಕುಮಾರ್ ಆವಳಮಠ

ಅಲ್ಲೊಂದು ದೊಡ್ಡ ಮನೆ ಇತ್ತು. ಅಲ್ಲಿಗೆ ಒಬ್ಬಳು ವಯೋವೃದ್ದೆ ಮನೆಗೆಲಸಕ್ಕೆ ಇರಬೇಕು, ದಿನಾ ಬರುತ್ತಿದ್ದಳು. ಅದೂ ಮುಂಜಾನೆಯ ಆ ಅ ನಸುಕಿನ ಚಳಿ ಮಳೆ ಎನ್ನದೇ ದಿನಾ ಬರುತ್ತಿದ್ದಳು. ಅವಳನ್ನು ನೋಡಿದಾಗಲೆಲ್ಲ, ಎಂದೋ ತೀರಿ ಹೋದ ನನ್ನ ದೊಡ್ಡಮ್ಮ(ಅಮ್ಮನ ಅಮ್ಮ) ನೆನಪಾಗುತ್ತಿತ್ತು. ನಾವೆಲ್ಲರೂ ಆಕೆ ತೀರಿ ಹೋಗುವ ತನಕವೂ ದೊಡ್ಡಮ್ಮ ಎಂದೇ ಕರೆಯುತ್ತಿದ್ದೆವು. ಅಜ್ಜಿ ಎಂದು ಕರೆಸಿಕೊಳ್ಳುವುದು ಆಕೆಗೆ ಇಷ್ಟವಿರಲಿಲ್ಲ. ಎಲ್ಲಾ ಹತ್ತರಿಂದಲೂ ಹೆಚ್ಚು ಮೊಮ್ಮಕ್ಕಳನ್ನು ಹಾಳೆಯ ಮಗುವಿನಿಂದ ತೊಡಗಿ ಎತ್ತಿ ಆಡಿಸಿದ ನಮ್ಮ ಅಕ್ಕರೆಯ ದೊಡ್ಡಮ್ಮ. ನನ್ನನ್ನಂತೂ ಹೆತ್ತ ಅಮ್ಮನಿಗಿಂತಲೂ ಅಕ್ಕರೆಯಿಂದ ಬೆಳೆಸಿದ ಮಾಹಾತಾಯಿಯಾಕೆ. ಅಕೆಯ ನೆನಪು ಬಂದಾಗಲೆಲ್ಲ ಕಣ್ಣು ಈಗಲೂ ತೇವವಾಗುತ್ತದೆ. ನನ್ನ ಎಲ್ಲ ಬೇಕು ಬೇಡ ತಪ್ಪು ಒಪ್ಪುಗಳಿಗೆ ಬೆನ್ನನ್ನು ಹಿಡಿದಿಟ್ಟವಳು. ಮರೆಯುವುದಕ್ಕೆ ಹೇಗೆ ಸಾಧ್ಯ. ಈ ವೃದ್ದೆಯದು ಅದೇ ಮೈಕಟ್ಟು ಅದೇ ವೇಗದ ನಡಿಗೆ. ಅದೇ ದುಡಿಮೆ. ಇಲ್ಲವಾದರೆ ಈ ವಯಸ್ಸಿನಲ್ಲೂ ಯಾರದೋ ಮನೆಯ ಚಾಕರಿಗೆ ಆಕೆ ಬರುವುದೆಂದರೆ....ಆಕೆ ಶ್ರಮಜೀವಿಯೇ ಇರಬೇಕು.

ಎಂದಿನಂತೆ ಮುಂಜಾನೆ ಮನೆಯ ಮುಂದಿನ ರಸ್ತೆಗೆ ಇಳಿದೆ. ಮುಂಜಾನೆಯ ಸ್ನಾನ ಧ್ಯಾನ ನಿತ್ಯ ಕರ್ಮ ಮುಗಿಸಿದಾಗ ಮನಸ್ಸು ಉಲ್ಲಾಸದಿಂದ ಇರುತ್ತದೆ. ನೀರವ ಮೌನದಲ್ಲಿ ಒಂದೆರಡು ಬರಿಗಾಲಲ್ಲಿ ಹೆಜ್ಜೆ ಹಾಕಿ ನಡೆಯುವುದು ಒಂದಷ್ಟು ಮನಸ್ಸಿಗೆ ದೇಹಕ್ಕೆ ಉಲ್ಲಾಸವನ್ನು ಒದಗಿಸುತ್ತದೆ. ಹಾಗೇ ಹೆಜ್ಜೆ ಹಾಕುತ್ತಾ ಹೋದಂತೆ ಬೀದಿ ಕೊನೆಯಲ್ಲಿದ್ದ ತಿರುವಿಗೆ ಬಂದೆ. ಅಲ್ಲೊಂದು ದೊಡ್ಡ ಮನೆ ಇತ್ತು. ಅಲ್ಲಿಗೆ ಒಬ್ಬಳು ವಯೋವೃದ್ದೆ ಮನೆಗೆಲಸಕ್ಕೆ ಇರಬೇಕು, ದಿನಾ ಬರುತ್ತಿದ್ದಳು. ಅದೂ ಮುಂಜಾನೆಯ ಆ ಅ ನಸುಕಿನ ಚಳಿ ಮಳೆ ಎನ್ನದೇ ದಿನಾ ಬರುತ್ತಿದ್ದಳು. ಅವಳನ್ನು ನೋಡಿದಾಗಲೆಲ್ಲ, ಎಂದೋ ತೀರಿ ಹೋದ ನನ್ನ ದೊಡ್ಡಮ್ಮ(ಅಮ್ಮನ ಅಮ್ಮ) ನೆನಪಾಗುತ್ತಿತ್ತು. ನಾವೆಲ್ಲರೂ ಆಕೆ ತೀರಿ ಹೋಗುವ ತನಕವೂ ದೊಡ್ಡಮ್ಮ ಎಂದೇ ಕರೆಯುತ್ತಿದ್ದೆವು. ಅಜ್ಜಿ ಎಂದು ಕರೆಸಿಕೊಳ್ಳುವುದು ಆಕೆಗೆ ಇಷ್ಟವಿರಲಿಲ್ಲ. ಎಲ್ಲಾ ಹತ್ತರಿಂದಲೂ ಹೆಚ್ಚು ಮೊಮ್ಮಕ್ಕಳನ್ನು ಹಾಳೆಯ ಮಗುವಿನಿಂದ ತೊಡಗಿ ಎತ್ತಿ ಆಡಿಸಿದ ನಮ್ಮ ಅಕ್ಕರೆಯ ದೊಡ್ಡಮ್ಮ. ನನ್ನನ್ನಂತೂ ಹೆತ್ತ ಅಮ್ಮನಿಗಿಂತಲೂ ಅಕ್ಕರೆಯಿಂದ ಬೆಳೆಸಿದ ಮಾಹಾತಾಯಿಯಾಕೆ. ಅಕೆಯ ನೆನಪು ಬಂದಾಗಲೆಲ್ಲ ಕಣ್ಣು ಈಗಲೂ ತೇವವಾಗುತ್ತದೆ. ನನ್ನ ಎಲ್ಲ ಬೇಕು ಬೇಡ ತಪ್ಪು ಒಪ್ಪುಗಳಿಗೆ ಬೆನ್ನನ್ನು ಹಿಡಿದಿಟ್ಟವಳು. ಮರೆಯುವುದಕ್ಕೆ ಹೇಗೆ ಸಾಧ್ಯ. ಈ ವೃದ್ದೆಯದು ಅದೇ ಮೈಕಟ್ಟು ಅದೇ ವೇಗದ ನಡಿಗೆ. ಅದೇ ದುಡಿಮೆ. ಇಲ್ಲವಾದರೆ ಈ ವಯಸ್ಸಿನಲ್ಲೂ ಯಾರದೋ ಮನೆಯ ಚಾಕರಿಗೆ ಆಕೆ ಬರುವುದೆಂದರೆ....ಆಕೆ ಶ್ರಮಜೀವಿಯೇ ಇರಬೇಕು.

ಬಹಳ ವರ್ಷದಿಂದ ನೋಡುತ್ತೇನೆ. ಕೋವಿಡ್ ಕಾಲದಲ್ಲಿಯೂ ಯಾರೂ ರಸ್ತೆಗಿಳಿಯದ ಸಮಯದಲ್ಲೂ ಈಕೆಯನ್ನು ಮುಂಜಾನೆ ಯಾರೂ ಇಲ್ಲದಾಗ ರಸ್ತೆಯಲ್ಲಿ ಕಂಡ ನೆನಪಿದೆ. ಹಲವು ಸಲ ನಾನು ನಡಿಗೆ ಆರಂಭಿಸುವ ಮೊದಲು ರಸ್ತೆಯ ಅಂಚಿನಲ್ಲಿ ಈಕೆಯನ್ನು ಕಾಣುತ್ತೇನೆ. ಮುಂಜಾನೆ ಬರುತ್ತಾಳೆ. ಒಂದು ಅರ್ಧ ತಾಸು ಕಳೆದು ಮತ್ತೆ ಹಿಂದಿರುಗುತ್ತಾಳೆ. ಬಹುಶಃ ಮನೆಯಲ್ಲಾ ಗುಡಿಸಿ ಪಾತ್ರತೊಳೆದು ಸ್ವಚ್ಛ ಮಾಡಿ ಹಿಂದಿರುಗುತ್ತಾಳೆ ಕಾಣಬೇಕು. ಈ ರೀತಿ ಹಲವು ಮಹಿಳೆಯರು ಕೆಲಸಕ್ಕೆ ಹೋಗುವುದನ್ನು ನೋಡಿದ್ದೇನೆ. ಆಕೆಯ ವಯಸ್ಸು ಆಕೆಯ ವೃತ್ತಿ ಪ್ರವೃತ್ತಿ ನೋಡಿ ಅಚ್ಚರಿಯಾಗುತ್ತದೆ. ಮುಂಜಾನೆ ವಾಕಿಂಗ್ ಹೋದಾಗ ಕೆಲವು ಸಲ ನನ್ನ ಎದುರು ಅಥವಾ ಹಿಂದೆ ನಡೆದುಕೊಂಡು ಹೋಗುತ್ತಾಳೆ. ನಾನು ಎರಡು ಕಿಲೋ ಮೀಟರ್ ದೂರದ ವರೆಗೆ ನಡೆಯುತ್ತಾ ಸಾಗಿದರೆ ಅಲ್ಲಿಯ ತನಕವೂ ಆಕೆ ಬರುತ್ತಾಳೆ. ಬಹುಶಃ ಅಲ್ಲೇ ಎಲ್ಲೋ ಆಕೆಯ ಮನೆ ಇರಬೇಕು. ನಾನು ಕೇವಲ ವ್ಯಾಯಾಮಕ್ಕೆ ನಡೆದರೆ ಆಕೆ ಹೊಟ್ಟೆಪಾಡಿಗೆ ನಡೆಯುತ್ತಾಳೆ. ರಸ್ತೆ ಒಂದೇ ಉದ್ದೇಶ ಬೇರೆ ಬೇರೆ.

ಒಂದು ದಿನ ಹೀಗೆ ನಾನು ಹೆಜ್ಜೆ ಹಾಕುತ್ತಿರುವಾಗ ಎದುರು ಆಕೆ ಸಿಕ್ಕಿದಳು. ತಲೆಗೆ ಮಪ್ಲರ್ ಬಿಗಿದು ಹಳೆಯ ಸೀರೆ ಮೊಣಕಾಲಿನ ತನಕವೂ ಎಂದಿನಂತೆ ಎತ್ತಿ ಕಟ್ಟಿದ್ದಳು. ಕೈಯಲ್ಲಿ ಒಂದು ಚೀಲ , ಮತ್ತೊಂದು ಕೋಲು ಇನ್ನೊಂದು ಕೈಯ ಮುಷ್ಠಿಯಲ್ಲಿ ಒಂದು ಕಲ್ಲು! ಹಿಡಿದು ಹೆಜ್ಜೆ ಇಡುತ್ತಿದ್ದಳು. ಆಕೆ ಕೆಲಸಕ್ಕೆ ಹೋಗುವ ಮನೆಯ ಪಕ್ಕದಲ್ಲಿಒಂದು ಶೀಟ್ ಮನೆ ಇತ್ತು. ಆ ಮನೆಯಲ್ಲಿ ಮೂರು ನಾಲ್ಕು ನಾಯಿಗಳಿದ್ದವು. ಆ ನಾಯಿಗಳು ಬೀದಿಯಲ್ಲೇ ಇದ್ದು ಮುಂಜಾನೆ ಅಲ್ಲಿ ಸಂಚರಿವವರಿಗೆ ಬೊಗಳುತ್ತಾ ಕಚ್ಚಲು ಬರುತ್ತಿದ್ದುದು ಸಾಮಾನ್ಯ. ಕೆಲವರು ಭಯದಿಂದ ಓಡುತ್ತಿರುವುದು ಸರ್ವೇ ಸಾಮಾನ್ಯ ಈ ವೃದ್ದೆ ಆ ನಾಯಿಗೆ ಕೈಯಲ್ಲಿ ಕೋಲು ಕಲ್ಲು ಹಿಡಿದೆ ಬರುತ್ತಿದ್ದಳು. ರಸ್ತೆ ತಿರುವಿರುವ ಜಾಗದಲ್ಲಿ ಒಂದು ದ್ವಜದ ಸ್ಥಂಭದ ಬುಡದಲ್ಲಿ ಒಂದು ಕಲ್ಲು ಸದಾ ಇರುತ್ತಿತ್ತು. ಬರುವಾಗ ಕಲ್ಲು ಹೆಕ್ಕಿ...ಪುನಃ ಹಿಂದಿರುಗುವಾಗ ಅದೇ ಕಲ್ಲನ್ನು ಅಲ್ಲಿ ಎಸೆದು ಹೋಗುತ್ತಿದ್ದಳು. ಆ ಕಲ್ಲು ಅಲ್ಲೇ ಇರುತ್ತಿದ್ದುದ್ದು ವಿಚಿತ್ರ. ಕೆಲವೆಲ್ಲ ಸಂಗತಿಗಳು ಸೂಕ್ಷಮವಾಗಿ ದೃಷ್ಟಿಸಿದರೆ ಗಮನಕ್ಕೆ ಬರುತ್ತವೆ. ಈ ನಾಯಿಗಳು ಅಲ್ಲಿ ದಾರಿ ಹೋಕರಿಗೆ ಭಯ ಹುಟ್ಟಿಸಿದರೂ ಯಾರೊಬ್ಬರೂ ಏನೂ ಧ್ವನಿ ಎತ್ತುವುದಿಲ್ಲ. ಈ ನಗರವೇ ಹೀಗೆ ಕೆಲವೊಮ್ಮೆ ವಿಚಿತ್ರ ವರ್ತನೆಗಳು. ಕೆಲವೊಮ್ಮೆ ಪ್ರತಿಭಟಿಸುವುದಕ್ಕೂ ಜನರಿಗೆ ಸಮಯ ಇಲ್ಲ. ತಮಗೇಕೆ ಉಸಾಬರಿ ಎಂತ ದೂರ ಉಳಿಯುತ್ತಾರೆ.

ಈಗ ಬಹಳ ದಿನಗಳ ನಂತರ ರಸ್ತೆಯ ತಿರುವಿನಲ್ಲಿ ದೊಡ್ಡ ವಾಣಿಜ್ಯ ಸಂಕೀರ್ಣ ಎದ್ದಿದೆ. ಜತೆಗೆ ಹೊಂದಿಕೊಂಡಿದ್ದ ಪಾದಾಚಾರಿ ರಸ್ತೆ ಅಗಲವಾಗಿದೆ. ರಸ್ತೆಯೂ ವಿಶಾಲವಾಗಿದೆ. ರಸ್ತೆಯನ್ನು ಸ್ವಚ್ಛ ಮಾಡಲಾಗಿದೆ. ರಸ್ತೆ ಪರಿಸರ ಅಭಿವೃದ್ದಿ ಹೊಂದಿದೆ. ಒಟ್ಟಿನಲ್ಲಿ ಮೊದಲಿನಂತೆ ಇಲ್ಲ. ಪರಿಸರವೇ ಬದಲಾಗಿದೆ. ಆದರೆ ನಾಯಿಗಳು ಮಾತ್ರ ಹಾಗೇ ಇದೆ. ವೃದ್ದೆ ಎಂದಿನಂತೆ ಬರುತ್ತಾಳೆ ಕೈಯಲ್ಲಿ ಕೋಲು ಮಾತ್ರ ಇರುತ್ತದೆ, ಮೊದಲು ಕೈಯಲ್ಲಿದ್ದ ಕಲ್ಲು ಮಾಯವಾಗಿದೆ. ಅದನ್ನು ಯಾರೋ ಎಸೆದು ಕಳೆದಿದ್ದಾರೆ. ವೃದ್ದೆಯ ಕೈಯಲ್ಲಿ ಕೋಲು ಮಾತ್ರ ಇದೆ. ನಾಯಿಗಳು ಹಾಗೇ ಇದೆ. ಕಚ್ಚುವುದಕ್ಕೆ ಬಂದರೆ ಕೋಲು ಬೀಸುತ್ತಾಳೆ. ಕೆಲವೊಮ್ಮೆ ನಾಯಿ ಹೆದರಿ ಓಡುತ್ತದೆ. ಮತ್ತೂ ಬೊಗಳುತ್ತದೆ. ವೃದ್ದೆ ಎಂದಿನಂತೆ ಆ ಮುಂಜಾನೆ ಮೌನದಲ್ಲಿ ಎಲರೂ ನಿದ್ದೆಯ ಮಂಪರಿನಲ್ಲಿರುವಾಗ ಬರುತ್ತಾಳೆ ಕೆಲಸ ಮುಗಿಸುತ್ತಾಳೆ. ಕೋಲು ಬೀಸುತ್ತಾ ಹೋಗುತ್ತಾಳೆ.

Creative Writings