Karada Vishwa

Article · August 25, 2026

ನನ್ನ ಕಥೆ

ಡಾ. ಪ್ರಫಲ್ಲಾ. ಜಿ .ಭಟ್ಟ. ಉಡುಪಿ

ಬಹಳ ವರುಷಗಳಿಂದ ನಿಮ್ಮಲ್ಲಿ ನನ್ನ ಕಥೆಯನ್ನು ಹೇಳಬೇಕೆಂದುಕೊಂಡು ಹೇಳಲಾಗದೆ ನುಂಗಿಕೊಂಡು ಬದುಕಿದ್ದೇನೆ. ಒಂದು ರೀತಿಯಲ್ಲಿ ಹೇಳುವುದಾದರೆ ನನ್ನ ಕಥೆಯು ಮಹಾಭಾರತದ ಅಂಬೆಯ ಕಥೆಗಿಂತ ತೀರಾ ಭಿನ್ನ ಅಲ್ಲ. ಸುಮಾರು 70 ವರ್ಷಗಳ ಮೊದಲು ಅಂದರೆ ನಾನು ಹುಟ್ಟುವ ಮೊದಲು ನನ್ನ ಪೂರ್ವಜರು ಕನ್ನಡಿಗರಾಗಿದ್ದರು. ಹಾಗಾಗಿ ಅದೇ ಸಂಸ್ಕಾರ, ಅದೇ ಭಾಷೆ, ಕನ್ನಡದ ಪ್ರೀತಿ , ನೀತಿಗಳು ನನ್ನ ರಕ್ತದಲ್ಲೂ ಹರಿಯುತ್ತಿವೆ. ಅದರಿಂದಾಗಿ ನಾನು ಹೆಚ್ಚಾಗಿ ಕನ್ನಡಿಗನನ್ನು ಇಷ್ಟ ಪಡುತ್ತಿದ್ದೆ. ಯಾವ ಕಾರಣದಿಂದಲೋ ನಾನು ಬೇರೆ ಭಾಷಿಗನನ್ನು ವರಿಸಬೇಕಾದದ್ದು ನನ್ನ ದುರ್ದೈವವೆಂದೆ ತಿಳಿಯುತ್ತೇನೆ. ಯಾವಾಗ ನನ್ನನ್ನು ಕನ್ನಡದಿಂದ ಹೊರತು ಪಡಿಸಿ ಮಲೆಯಾಳಿಯೊಂದಿಗೆ ಕಟ್ಟಿದರೋ ಅಂದಿನಿಂದ ನನಗೆ ಅಂಬೆಯಂತೆಯೇ ಸಮಾಧಾನವೇ ಇಲ್ಲ. ನಾನು ಅವಳಂತೆ ನನ್ನ ಇಷ್ಟದವರನ್ನು ಸೇರಲು ಹೋರಾಟ ನಡೆಸುತ್ತಲೇ ಬಂದಿದ್ದೇನೆ. ಆದರೆ ಇಷ್ಟು ವರ್ಷಗಳ ನಂತರ ನನ್ನನ್ನು ಪುನಃ ಕನ್ನಡಿಗ ವರಿಸಿಯಾನೆ? ವರಿಸಬೇಕೆಂದು ನಾನು ಅದೆಷ್ಟು ಬಾರಿ ಕೇಳಿಕೊಂಡರೂ ನನ್ನದು ಕೇವಲ ಅರಣ್ಯರೋದನವಾಯಿತಲ್ಲ...ನಿಜವಾಗಿ ಹೇಳಬೇಕೆಂದರೆ ನನ್ನ ಜೀವನದ ನಾಟಕ, ಸಿನಿಮಾ, ಯಕ್ಷಗಾನ ಎಲ್ಲವನ್ನೂ ಮಾಡಬಹುದು. ಅಷ್ಟು ವಿಷಯಗಳಿವೆ ನನ್ನಲ್ಲಿ.

ಹುಟ್ಟಿನಿಂದಲೇ ನಾನು ಬಹಳ ಸುಂದರವಾಗಿದ್ದೆ. ನಮ್ಮ ಕುಟುಂಬ ಕನ್ನಡಿಗರ ಸಂಬಂಧದಲ್ಲಿ ಇದ್ದ ಕಾರಣ ನಾವು ಸಂತೋಷದಲ್ಲಿ ಕಾಲ ಕಳೆಯುತ್ತಿದ್ದೆವು ಎನ್ನಬಹುದು. ನನ್ನದು ಬಹಳ ಸುಂದರ ಪ್ರಕೃತಿ. ತುಳು ಹಾಗೂ ಕನ್ನಡ ಭಾಷಿಗರೊಂದಿಗೆ ಬೆರೆತು ಆಟವಾಡಿ ಬೆಳೆದ ನನಗೆ ನಮ್ಮ ಪರಿಸರವೇ ಒಳ್ಳೆಯ ಮೈಮಾಟವನ್ನು ನೀಡಿದೆ. ಪ್ರಕೃತಿ ಸೌಂದರ್ಯದ ಗಣಿಯಾಗಿರುವ ನಮ್ಮ ತೆಂಗು, ಅಡಿಕೆ, ತೋಟದಲ್ಲಿ ಬೆಳೆದಿದ್ದ ಎಳನೀರು ಮತ್ತು ಬಾಳೆಹಣ್ಣು ಬೇರೆಲ್ಲೂ ಸಿಗಲಾರದು.ಇಂತಹ ಕೃಷಿ ಸಮೃದ್ಧಿಯಿಂದ ದೊರೆತ ಆಹಾರವನ್ನು ಉಂಡು ಬೆಳೆದ ನಾನು, ಸ್ವಾಭಾವಿಕವಾಗಿಯೇ ಚೆನ್ನಾಗಿದ್ದೆ. ನಮ್ಮ ಪರಿಸರ,ಕೌಟುಂಬಿಕ ಹಿನ್ನೆಲೆ,ನನ್ನ ಹಾವಭಾವಗಳನ್ನು ಗಮನಿಸಿಯೆ ಆ ಕನ್ನಡಿಗ ಅಂದು ನಮ್ಮಲ್ಲಿಗೆ ಬಂದಿದ್ದಾಗ, ನಮ್ಮ ತೋಟದ ಬೊಂಡ, ಬಾಳೆಹಣ್ಣು ಸೇವಿಸಿ 'ನೀನು ನನಗೆ ಆಗಬಹುದು' ಎಂದಿದ್ದ .ಇದನ್ನು ಸತ್ಯವಂದೆ ತಿಳಿದು ನಾನು ಅವನಿಗೆ ಮನಸ್ಸು ಕೊಟ್ಟಿದ್ದೆ.ನಂತರ ನಡೆದ ರಾಜಕೀಯದಲ್ಲಿ ಅವನ ಹಾಗೂ ನನ್ನ ಮನೆಯವರು ಇಲ್ಲದ ವಿಚಾರಗಳನ್ನು ಸೃಷ್ಟಿಸಿ ನಾವಿಬ್ಬರು ಒಂದಾಗದಂತೆ ಸಾಧ್ಯವಾದಷ್ಟು ಪ್ರಯತ್ನ ಪಟ್ಟರು. ಇದರಿಂದಾಗಿ ನಾನು ಮನಸ್ಸಿಗೆ ಒಲ್ಲದ ಮಲಯಾಳಿಯ ಪಾಲಾದೆ.ಇದೊಂದು ಸಾಮಾನ್ಯ ಪ್ರೇಮ ಕಥೆ ಎಂದು ನಿಮಗೆಲ್ಲ ಅನಿಸಿದರೂ ಅನುಭವಿಸುವ ನನಗೆ ಮಾತ್ರ ಬಹಳ ತೊಂದರೆಯಾಗುತ್ತಿದೆ.ಮನಸು,ದೇಹ ಒಬ್ಬನಿಗೇ ಸೇರಬೇಕು.ಆಗ ಮಾತ್ರ ಹೆಣ್ಣಿನ ಜೀವನ ಸೊಗಸು.ನನ್ನ ಕಥೆ ಹಾಗಲ್ಲ. ಅಂದು ನನ್ನನ್ನು ಒಪ್ಪಿ ಹೋದ ಕನ್ನಡಿಗ ಮತ್ತೆ ತಿರುಗಿ ಬರಲೇ ಇಲ್ಲ.ಬರುತ್ತಾನೆ ಎಂದು ಕಾಯುತ್ತಿರುವಾಗಲೇ ಹಿರಿಯರಿಂದ ಗೊತ್ತಾಯಿತು ಅವನು ಅಚ್ಚ ಕನ್ನಡದವಳನ್ನು ವರಿಸಿದನೆಂದು. ಈ ಅನ್ಯಾಯದ ವಿರುದ್ಧ ನಾನು ಬಹಳಷ್ಟು ಹೋರಾಡಲು ತಯಾರಿದ್ದೆ. ಆದರೆ ಹಿರಿಯರಿಂದ ಗೊತ್ತಾಯಿತು ಅದು ನಿಷ್ಪ್ರಯೋಜಕ ಮತ್ತು ಜೀವನದಲ್ಲಿ ಸಾಮಾನ್ಯ ನಡೆಯುವ ವಿಚಾರ ಎಂದು ಮತ್ತು ಆತನಿಗಾಗಿ ಕೊರಗಿ ಮರುಗಿದರೆ ನನ್ನ ಜೀವನ ವ್ಯರ್ಥ ಅಂದರು ಹಾಗೆಯೇ ನನ್ನನ್ನು ಮಲಯಾಳಿಗೆ ಮದುವೆ ಮಾಡಿ ಕೊಟ್ಟರು.ಆಮೇಲೆ ನನ್ನ ಬದುಕಿನ ರೀತಿಯೇ ಬೇರೆ ಆಯಿತು ಮನಸ್ಸು ಒಂದೆಡೆಯಾದರೆ ದೇಹ ಇನ್ನೊಂದೆಡೆ. ನನ್ನ ವೇಷ ಭಾಷೆ ರೀತಿ ನೀತಿ ಎಲ್ಲವೂ ಬೇರೆಯಾಯಿತು ಚಿಕ್ಕಂದಿನಿಂದಲೇ ಹೊಸ ಬಟ್ಟೆ ಧರಿಸಿ ಪಟಾಕಿ ಉರಿಸಿ ದೀಪಾವಳಿ ಆಚರಿಸಿದ ನನಗೆ ಓಣಂ ವಿಷುಗಳೇ ಹಬ್ಬಗಳಾದವು. ಪುಂಡಿಗಟ್ಟಿ , ನೀರು ದೋಸೆಗಳ ಜಾಗಕ್ಕೆ ವೆಳ್ಳಪ್ಪಂ, ಪುಟ್ಟು ಬಂದಿತು ತಿನ್ನಲು ಅನುಭವಿಸಲು ಮನಸು ಕೇಳದಿದ್ದರೂ ಬದುಕಿ ಹೋರಾಡುವೆನೆಂಬ ಛಲದಿಂದ ಅದನ್ನೇ ತಿಂದೆ. ಎಲ್ಲ ಬೇಸರಗಳನ್ನು ನುಂಗಿಕೊಂಡೆ. ಆದರೂ ಕೆಲವು ಸಂದರ್ಭಗಳಲ್ಲಿ ನನ್ನ ಕನ್ನಡಿಗನ ನೆನಪು ನನ್ನನ್ನು ಬಹಳವಾಗಿ ಕಾಡುತ್ತದೆ ಮನಸ್ಸನ್ನು ಕನ್ನಡಿಗನಿಗೆ ಒಪ್ಪಿಸಿ ಮಲಯಾಳಿಯ ತೋಳಿನಲ್ಲಿ ಮಲಗುವುದು ಎಷ್ಟು ಹೀನ ಅನಿಸುತ್ತದೆ.ಇಂತಹ ದುರ್ಗತಿ ಬೇಡವೆಂದೆ ಅಂಬೆ ಪರಿಸ್ಥಿತಿಯ ವಿರುದ್ಧ ಹೋರಾಡಿ ಮರುಜನ್ಮದಲ್ಲಿ ಸೇಡನ್ನು ತೀರಿಸುವ ಪಣ ತೊಟ್ಟಿರಬಹುದು. ಮಾತ್ರವಲ್ಲದೆ ಶಬರಿಯೂ ರಾಮನ ಬರವಿಗಾಗಿ ಪ್ರೀತಿಯಿಂದ ಕಾದಿರಬಹುದು. ನನಗೂ ಕಾಯುವ ಮನಸ್ಸಿದೆ. ಆದರೆ ಕನ್ನಡಿಗನ ಪತ್ನಿ ನನ್ನನ್ನು ಒಪ್ಪಿಕೊಳ್ಳುವುದಿಲ್ಲ. ಮಾತ್ರವಲ್ಲ ಮಲಯಾಳಿ ಪತಿಯು ನನ್ನನ್ನು ಬಿಡಲೂ ತಯಾರಿಲ್ಲ.ಅಯ್ಯೋ ದಿನ ಹೋದಂತೆ ಇದು ಸರಿಯಾಗುವ ದಾರಿಯೇ ಇಲ್ಲದಾಗಿದೆ. ಹಾಗಂತ ನನಗೆ ಬೇಕಾದಂತೆ ಇರಲೂ ಆಗುವುದಿಲ್ಲ. ಮನಸ್ಸು ಯಾಕೋ ಗೊಂದಲದ ಗೂಡಾಗಿದೆ. ಹಿರಿಯರು ಹೇಳಿದಂತೆ ಜೀವನಪೂರ್ತಿ ಇದನ್ನೇ ಎಣಿಸಿ ಕೊರಗುವುದಕ್ಕಿಂತ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳುವುದು ಒಳಿತು ಎಂದು ಎನಿಸಿದರು ಪುನಃ ಅದೇ ಕನ್ನಡಿಗನ ಕಡೆಗೆ ಜೀವ ಎಳೆಯುತ್ತದೆ. ಇದು ನನ್ನ ಕಥೆ.ಇದಕ್ಕೆ ನ್ಯಾಯ ಒದಗಿಸಿ ಕೊಡುವವರು ಯಾರು ? ಹಿಂದಿನ ನನ್ನ ಹಿರಿಯರು ನನ್ನ ಈ ಪರಿಸ್ಥಿತಿಗಾಗಿ ಹೋರಾಟ ನಡೆಸಿದ್ದಾರೆ ಇಲ್ಲವೆಂದಲ್ಲ ಆದರೆ ಇಂದಿಗೂ ಅದು ಪ್ರಶ್ನೆಯಾಗಿಯೇ ಉಳಿದಿದೆ. ಹ...ನನ್ನ ಕಥೆಯನ್ನು ಮಾತ್ರ ಹೇಳುತ್ತಾ ಸಾಗಿದೆ ಹೆಸರನ್ನು ಹೇಳಲು ಮರೆತಿದ್ದೇನೆ ನನ್ನ ಹೆಸರು ಕಾಸರಗೋಡು.

Creative Writings