
Article · September 6, 2026
"ನಮ್ಮ ಪ್ರೀತಿಯ ಗುರುಗಳು"
ಶಾಂತಾ ನಾಗರಾಜ್ ಭಟ್ , ಕೆದುಕೋಡಿ
ಈ ಬಾಲ್ಯವೇ ಹೀಗೆ.. ನೆನಪಿಸಿಕೊಂಡರೆ ಕಲ್ಲುಸಕ್ಕರೆ ಸವಿದ ಅನುಭವ.
1970 ರ ದಶಕ, ಎಲ್ಲರಂತೆ ನನ್ನ ಬಾಲ್ಯವು ಸುಂದರ ಚಿತ್ತಾರವಾಗಿತ್ತು. ಮನೆ ತುಂಬಾ ಹಿರಿಯರ ಕಿರಿಯರ ಜೊತೆಗೆ ಸಮಾನ ಮನಸ್ಕರು ಸಮಾನ ವಯಸ್ಕರನ್ನು ಹೊಂದಿದ್ದ ಆವಳ ಮಠ ಕುಟುಂಬ ನಮ್ಮದು.
"ನಮ್ಮ ಪ್ರೀತಿಯ ಗುರುಗಳು".. ಈ ಒಂದು ವಿಷಯದ ಕುರಿತು ಬರೆಯಲು ಹೇಳಿದರೆ ಪ್ರತಿಯೊಬ್ಬ ಮನುಷ್ಯನಿಗೂ ಬರೆಯಲು ಒಂದು ಪುಸ್ತಕದಷ್ಟು ಭಂಡಾರ ಖಂಡಿತವಾಗಿ ಇರಬಹುದು. ನಮ್ಮ ಮನೆಯಿಂದ ಎರಡು ಮೂರು ನಿಮಿಷ ನಡೆದಾಗ ಸಿಗುವುದೇ ಮಾತೆ ದುರ್ಗಾಪರಮೇಶ್ವರಿ ಸನ್ನಿಧಿ ಆವಳ ಮಠ.. ಅಲ್ಲಿಂದ ಮುಂದಕ್ಕೆ ಐದಾರು ನಿಮಿಷ ನಡೆದಾಗ ಸಿಗುವ ಒಂದು ಸುಂದರ ಪರಿಸರದ ನಮ್ಮ ಊರಿನ ಜ್ಞಾನ ದೇಗುಲ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಪ್ರೈಮರಿ ಶಾಲೆ , ಸಜoಕಿಲ. ಬಾಯಾರು ಗ್ರಾಮ. ಇದು ನಮ್ಮ ಶಾಲೆ. ಒಂದರಿಂದ ಏಳನೇ ತರಗತಿಯವರೆಗೆ ಕಲಿಯಲು ಬೇಕಾದಷ್ಟು ತರಗತಿ ಕೊಠಡಿಗಳ ಸಂಖ್ಯೆ.. ಇದನ್ನೇ ತೆರೆದಾಗ ಸಭಾ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬೇಕಾದಷ್ಟು ದೊಡ್ಡ ಹಾಲ್, ಒಂದು ತರಗತಿಯನ್ನೇ ಎರಡು ಅಡಿ ಎತ್ತರಕ್ಕೆ ಕಟ್ಟಿದ ಸ್ಟೇಜ್, ವಿಶಾಲವಾದ ಕಿಟಕಿ ಬಾಗಿಲು ಗಳಿಂದ ಬರುತ್ತಿದ್ದ ಗಾಳಿ ಬೆಳಕು.. ಪುಟ್ಟದಾದ ಪುಸ್ತಕ ಭಂಡಾರ, ಸಣ್ಣ ಪ್ರಯೋಗಾಲಯ ಹಾಗೂ ಶಿಕ್ಷಕರ ಕೊಠಡಿ, ಇಲ್ಲೇ ಇದ್ದ ಶಾಲಾ ಸ್ಟೇಷನರಿ.. ಹೊರಗೆ ವಿಶಾಲವಾದ ವರಾಂಡ ಅನತಿ ದೂರದಲ್ಲಿದ್ದ ಬಾವಿ ಜೊತೆಯಲ್ಲಿ ಸಣ್ಣ ಹೂದೋಟ ಮತ್ತು ಇದಕ್ಕೆ ಹೊಂದಿಕೊಂಡಿದ್ದ ಅಡುಗೆ ಶಾಲೆ, ಈ ಮಧ್ಯದಲ್ಲಿ ವಿಶಾಲವಾದ ಆಟದ ಮೈದಾನ ಎದುರುಗಡೆಯಲ್ಲಿ ತಲೆ ಎತ್ತಿ ನಿಂತ ಧ್ವಜಸ್ತಂಭ ಎಲ್ಲವನ್ನು ಒಳಗೊಂಡಿದ್ದ ಅವಳಿ ಕಟ್ಟಡದ ಶಾಲೆಯೇ ನಮ್ಮ ಸಜoಕಿಲ ಶಾಲೆ. ಇಷ್ಟಲ್ಲದೇ ಹತ್ತಿರದಲ್ಲೇ ಒಂದು ಬಸ್ ಸ್ಟ್ಯಾಂಡ್ ಹಾಗೂ ಅಂಗಡಿ ಕಟ್ಟಡ, ಅದರಲ್ಲಿ ಒಂದು ದಿನಸಿ ಅಂಗಡಿ, ಒಂದು ಪೋಸ್ಟ್ ಆಫೀಸು, ನೋರ್ತ್ ಮಲಬಾರ್ ಗ್ರಾಮೀಣ ಬ್ಯಾಂಕು, ಒಂದು ಹೋಟೆಲ್, ಒಂದು ಟೈಲರ್ ಶಾಪ್... ಇದರಲ್ಲಿ ಹೆಚ್ಚಿನವರು ಕರಾಡದವರೆ ಆಗಿದ್ದರು. ಕಾಸರಗೋಡಿನಿಂದ ಬರುವುದು ಒಂದೇ ಬಸ್ಸಾಗಿದ್ದರೂ ತಪ್ಪದೇ ದಿನಕ್ಕೆ ಮೂರು ಸಲ ಬರುತ್ತಿತ್ತು.
1975 ರಿಂದ 7 ವರ್ಷ ನನ್ನ ವಿದ್ಯಾಭ್ಯಾಸವು ಇದೇ ಶಾಲೆಯಲ್ಲಿ ನಡೆಯಿತು. ಒಟ್ಟು ಒಂಬತ್ತು ಜನ ಗುರುವೃoದದವರು.. ಅದರಲ್ಲಿ ಒಬ್ಬರೇ ಒಬ್ಬ ಶಿಕ್ಷಕಿ ಆವಳ ಮಠದ ಶ್ರೀಮತಿ ಸುಶೀಲಾ ಟೀಚರ್.
ಸಜಂಕಿಲ ಆಸು ಪಾಸಿನ ಹೆಚ್ಚಿನ ಎಲ್ಲಾ ಮಕ್ಕಳಿಗೂ ಅಕ್ಷರದ ಓಂಕಾರವನ್ನು ಬರೆಸಿದವರು.. ಎಲ್ಲರ ಪ್ರೀತಿಯ ಅವಳ ಮಠದ ಗುರುಗಳಾದ ರಾಮಕೃಷ್ಣ ಭಟ್, ಒಂದನೇ ಮಾಸ್ಟರ್ ಎಂದೇ ಪ್ರಸಿದ್ಧರಾದವರು.
ಶಾಲೆಯ 9 ಜನ ಶಿಕ್ಷಕರು ಕೂಡ ನಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ಶಿಲ್ಪಿಗಳನ್ನಾಗಿ ರೂಪಿಸಿದವರು. ಇವರೆಲ್ಲರಿಗೂ ನಾನು ಶಿರಬಾಗಿ ನಮಸ್ಕರಿಸುತ್ತೇನೆ. ಅಕ್ಷರಾಭ್ಯಾಸ ಆಗಿ ಅಂಕಿ ಮಗ್ಗಿಗಳನ್ನು ಕಲಿತು ಮುಂದಕ್ಕೆ ಬಂದಾಗ ನಾಲ್ಕನೇ ತರಗತಿಯಲ್ಲಿ ವಿದ್ಯೆಯ ಸುಂದರ ಚಿತ್ತಾರವನ್ನು ಬಿಡಿಸಿದವರು ಗುರುಗಳಾದ ಆವಳ ಕೆದುಕೋಡಿ ಶ್ರೀ ವಾಸುದೇವ ಭಟ್ ಇವರು. ಅಕ್ಷರ ಜ್ಞಾನ, ಪುಸ್ತಕ ಜ್ಞಾನದ ಪಾಠಗಳ ಜೊತೆಗೆ ಹಲವಾರು ಪಠ್ಯೇತರ ಚಟುವಟಿಕೆಗಳನ್ನು ಬೊಗಸೆ ತುಂಬಿ ವಿದ್ಯಾರ್ಥಿಗಳಿಗೆ ಧಾರೆಯುತ್ತಿದ್ದರು. ಪುಸ್ತಕಗಳನ್ನು ಓದುವ ಹವ್ಯಾಸವನ್ನು ನನ್ನಲ್ಲಿ ಬಿತ್ತಿದವರು ವಾಸುದೇವ ಮಾಸ್ಟ್ರು. ಆಗ ನಮ್ಮ ಶಾಲಾ ಪುಸ್ತಕ ಭಂಡಾರದಲ್ಲಿ ಮಹಾತ್ಮರ ಕುರಿತಾದ ಚಿಕ್ಕ ಚಿಕ್ಕ ಭಾರತ-ಭಾರತಿ ಹೆಸರನ್ನು ಹೊಂದಿದ ಪುಸ್ತಕಗಳ ಅಘಾಧ ಸಂಗ್ರಹವಿತ್ತು. ನಮ್ಮ ಮಾಸ್ತರು ನಮಗೆ ಪ್ರತಿವಾರವೂ ಪುಸ್ತಕಗಳನ್ನು ಹಂಚಿ ಓದಿ ಬರಲು ಹೇಳಿ ನಮ್ಮಲ್ಲಿ ಸದ್ದಿಲ್ಲದೇ ಓದುವ ಹುಚ್ಚನ್ನು ಬೆಳೆಸಿದ್ದರು.
ಮಧ್ಯಾಹ್ನ ಊಟ ಮುಗಿಸಿದ ನಂತರದ ಪಿರಿಯಡ್ ನಲ್ಲಿ ಮಕ್ಕಳ ಮನಸ್ಸು ಜಡವಾಗದಂತೆ ಚುರುಕಾಗಿಸಲು ಸುಂದರವಾದ ಕಥೆಗಳನ್ನು ಹೇಳಿ ಎಲ್ಲರನ್ನೂ ರಂಜಿಸುತ್ತಿದ್ದರು. ಇವರು ಹೇಳುತ್ತಿದ್ದ ಕಥೆಗಳಲ್ಲಿ ಅಡಗೂಲಜ್ಜಿಯ ಕಥೆ ಯಿಂದ ಹಿಡಿದು ದೇಶಭಕ್ತರ ಕಥೆಗಳು ಸೇರಿಕೊಳ್ಳುತ್ತಿದ್ದವು. ಪ್ರತಿ ಗುರುವಾರವೂ ನಡೆಯುತ್ತಿದ್ದ ವಾರದ..ಮಕ್ಕಳ ಸಾಹಿತ್ಯ ಸಭೆಗಳು ... ಇದರಲ್ಲಿ ಎಲ್ಲಾ ಶಿಕ್ಷಕರ ಜೊತೆಗೆ ವಾಸುದೇವ ಮಾಸ್ಟ್ರು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಸಭೆಯಲ್ಲಿ ವಿಶೇಷವಾದ ಯಾವುದಾದರೂ ವಿಷಯವಿದ್ದಲ್ಲಿ ಮಕ್ಕಳನ್ನು ಮರುದಿನ ಪ್ರತ್ಯೇಕವಾಗಿ ಕರೆದು ಕೇಳಿ ತಿಳಿದುಕೊಳ್ಳುತ್ತಿದ್ದರು. ನಮ್ಮ ವಾಸುದೇವ ಮೇಷ್ಟ್ರು ಸ್ಪರ್ಧೆಗಳಿಗಾಗಿ ರಾಷ್ಟ್ರಗೀತೆ ಜನ ಗಣ ಮನ ವನ್ನು ಅದೆಷ್ಟು ಸಲ ಪ್ರಾಕ್ಟೀಸ್ ಮಾಡಿಸುತ್ತಿದ್ದರು ನಾನರಿಯೆ.. ಏಕೆಂದರೆ ರಾಷ್ಟ್ರಗೀತೆಯನ್ನು 52 ರಿಂದ 56 ಸೆಕೆಂಡು ಒಳಗೆ ಹಾಡಿ ಪೂರ್ಣಗೊಳಿಸಲು ನಮಗೆಲ್ಲಾ ನೀಡಿದ ತರಬೇತಿಯನ್ನು ನಾನು ಈ ಜನುಮದಲ್ಲಿ ಮರೆಯಲಾರೆ. ಪ್ರತಿ ಸಲ ರಾಷ್ಟ್ರಗೀತೆ ಹಾಡುವಾಗ ಭಾರತ ಮಾತೆಯ ಜೊತೆಗೆ ವಾಸುದೇವ ಮಾಷ್ಟ್ರು ಒಂದು ಕ್ಷಣ ಮನದಲ್ಲಿ ಬಂದು ಹೋಗುತ್ತಾರೆ.
ಗುರಿಗಂಡ ವಾಸುದೇವ ಮೇಷ್ಟ್ರು 50 ವರ್ಷ ಮೊದಲು ಸಜಂಕಿಲ ದಲ್ಲಿ ಒಂದು ಭಜನಾ ಮಂಡಳಿಯನ್ನು ಸ್ಥಾಪಿಸಿ ಸುಶ್ರಾವ್ಯವಾಗಿ ಎಲ್ಲರ ಜೊತೆ ಭಜನೆಗಳನ್ನು ಹಾಡುತ್ತಿದ್ದರು. ಈ ಮಂಡಳಿಯು ಸುಂದರವಾದ ಮಂದಿರವನ್ನು ಹೊಂದಿ ತನ್ನ 50 ವರ್ಷಗಳನ್ನು ಈ ವರ್ಷ ಪೂರೈಸಿತು. ಇದರ ಮೂಲ ಸ್ಥಾಪಕರು ನಮ್ಮ ಗುರುಗಳಾದ ವಾಸುದೇವ ಮೇಷ್ಟ್ರು.ಆ ಕಾಲದಲ್ಲಿ ಶ್ರೀ ವಿದ್ಯಾಭೂಷಣರನ್ನು ಬಾಯಾರಿಗೆ ಕರೆಸಿದ್ದರಂತೆ ಅಲ್ಲದೆ ಗ್ರಾಮದ ವಿದ್ಯುದೀಕರಣಕ್ಕೆ ಸ್ವಯಂ ಶ್ರಮಪಟ್ಟು ಊರನ್ನು ಬೆಳಗಿದವರು ಇವರೇ.. ಇಂಥಹ ನಮ್ಮ ಗುರುಗಳದ್ದು ಸರಳ ವ್ಯಕ್ತಿತ್ವ.
ಇಲ್ಲಿ ಒಂದು ವಿಶೇಷವೆಂದರೆ ನನಗೂ ನನ್ನ ಗಂಡನಿಗೂ ಸಜಂಕಿಲ ಶಾಲೆ ವಾಸುದೇವ ಮೇಷ್ಟರಿಂದ ಪಾಠವನ್ನು ಕಲಿಯುವ ಅವಕಾಶವನ್ನು ಕೊಟ್ಟಿತ್ತು. ಇಬ್ಬರಿಗೂ ಗುರುಗಳ ಪಾಠದ ಆ ಸಮಯವನ್ನು ಮೆಲುಕು ಹಾಕುವ ಸುಯೋಗ. ಆ ಕಾಲದಲ್ಲಿ ಅವರು ಆಡಿಸಿದ ನಾಟಕ.. ಮಂಗಳೂರಿಗೆ ಕರೆದುಕೊಂಡು ಹೋಗಿ ತೋರಿಸಿದ ಸಿನಿಮಾ.. ಒಂದನೇ ತರಗತಿಯಿಂದ ನೇರವಾಗಿ ಮೂರನೇ ತರಗತಿಗೆ ಭಡ್ತಿ ಹೀಗೆ ಹಲವಾರು ಸುಂದರ ಕ್ಷಣಗಳಿಗೆ ಸಾಕ್ಷಿಯಾದ ದಿನಗಳು ಅವು.. ಹೀಗೆ ಮೊಗೆದಷ್ಟು ಸಾಲು ಸಾಲಾಗಿ ನೆನಪಾಗುವ ಪ್ರಾಥಮಿಕ ಶಾಲಾ ಶಿಕ್ಷಣದ ಆ ದಿನಗಳು.
ಅಕ್ಷರ ಸಂತ ವಾಸುದೇವ ಭಟ್ ಇವರು ಈಗ 90ರ ಹೊಸ್ತಿಲಲ್ಲಿದ್ದಾರೆ. ಈ ವರ್ಷ ಅವರೇ ಸ್ಥಾಪಿಸಿದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ 50ನೇ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಅವರ ಹಳೆ ವಿದ್ಯಾರ್ಥಿಗಳು ಮತ್ತು ಊರ ಗಣ್ಯರಿಂದ ಒಂದು ಗೌರವ ಸನ್ಮಾನ ಕಾರ್ಯಕ್ರಮವು ನಡೆದಿತ್ತು.
ವಾಹನ ಇಳಿದು ವೇದಿಕೆಗೆ ನಡೆದು ಬಂದು ಆಸೀನರಾದ ನಮ್ಮ ಗುರುಗಳು ತಮ್ಮ ಅಧ್ಯಾಪನ ವೃತ್ತಿಯ ಸಮಯದ ಹಲವಾರು ವಿಷಯಗಳ ಮಸ್ತಕದ ಪುಸ್ತಕವನ್ನು ಸಭಿಕರ ಎದುರು ತೆರೆದಿಟ್ಟರು. ಈ ಹರೆಯದಲ್ಲೂ ದಿನದ ಹೆಚ್ಚಿನ ಸಮಯವನ್ನು ಓದುವುದರಲ್ಲಿ ಕಳೆಯುತ್ತಾರಂತೆ...ಆ ಸುಂದರ ಕಾರ್ಯಕ್ರಮ ವನ್ನು ನಮ್ಮ ಕಣ್ಣುಗಳಲ್ಲಿ ತುಂಬಿಸಿಕೊಳ್ಳುವ ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಪುಸ್ತಕದ ಉಡುಗೊರೆ ಕೊಟ್ಟು ಆಶೀರ್ವಾದ ಪಡೆಯುವ ಯೋಗವನ್ನು ಭಗವಂತನು ಕರುಣಿಸಿದನು.ಧನ್ಯತೆಯ ಕ್ಷಣ ಮರೆಯಲುಂಟೇ..
ಇಂಥಹ ನಮ್ಮ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭದಿನದಲ್ಲಿ ಮತ್ತೊಮ್ಮೆ ಮಗದೊಮ್ಮೆ ಪ್ರಣಾಮವನ್ನು ಸಲ್ಲಿಸುತ್ತೇನೆ.
ಶಾಂತಾ ನಾಗರಾಜ್ ಭಟ್
ಕೆದುಕೋಡಿ
05.09.2026
