
Article · October 30, 2026
ಎಲ್ಲ ನಿನ್ನೊಳಗೆ ಇಹುದು ಮನುಜ...
By ಜಯಶ್ರೀ ಕೆ.ಆರ್ ಭಟ್ .ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ಸೌಗಂಧ ದುರ್ಗಂಧ ಇರಲಿ ಯಾವುದು ಹೇಗೋ
ಹೊತ್ತು ತರುವುದು ಗಾಳಿ ಬೇಧವಿರದೇ /
ಬಡವ ಬಲ್ಲಿದನೆಂಬ ಬೇಧ ಮಾಡದೆ ಮಳೆಯು,
ಸುರಿದು ಬರುವುದು ಮನುಜನಿರುವ ಕಡೆಗೆ /
ಪಾಪಾತ್ಮ, ಪುಣ್ಯಾತ್ಮ ಎಂಬ ಬೇಧವು ಇರದೆ
ಹೊತ್ತು ಸಾಕಿದೆ ಭೂಮಿ ಮಡಿಲಿನೊಳಗೆ/
ಸುಡುವ ಬೆಂಕಿಗು ಇಲ್ಲ ಬೇಧ ಭಾವಗಳೆಲ್ಲ,
ಗಗನವೇ ಸೂರಿಹುದು ಬೇಧವಿರದೇ /
ನಾನು ನನ್ನದು ಎಂದು, ಮೇಲು ಕೀಳು ಎಂದು
ಬಡಿದಾಡುವನು ಮನುಜ ಬದುಕಿನೊಳಗೆ /
ದೇವರೀ ವಿಧದಲ್ಲಿ ಸೃಷ್ಟಿ ಮಾಡಲೇ ಇಲ್ಲ,
ಇಹುದು ಎಲ್ಲವು ಸೇರಿ ಮನುಜನೊಳಗೆ /
Creative Writings
