Karada Vishwa

Article · October 10, 2026

ಜಿ.ಎಸ್.ಟಿ.ಯ ಗೋಳು!

ಸಂತೋಷ್ ಕುಮಾರ್ ನಡುಮನೆ

ಬದಲಾವಣೆ ಜಗದ ನಿಯಮ ಎಂಬ ಉಕ್ತಿ,

ಅದಕ್ಕೊಂದು ಉದಾಹರಣೆ ನಮ್ಮ ಜಿ.ಎಸ್.ಟಿ.!

ಎಷ್ಟು ಓದಿದರೂ ಬದಲಾವಣೆಯಿಂದ ತಲೆಗೇರುವುದಿಲ್ಲ ಗಟ್ಟಿ,

ಎಲ್ಲವ ಬಿಟ್ಟು ಸೇರೋಣ ದನದ ಹಟ್ಟಿ!

ಅಂದರೂ ಬಿಡಲಿಲ್ಲ ಈ ಸೆಟ್ಟಿ,

ಅವನೂ ಹೇಳುತ್ತಾನೆ, “ಸಾಕಾಯಿತು ನನಗೆ ಈ ಟ್ಯಾಕ್ಸ್ ಕಟ್ಟಿ!”

ಮೊದಲಿತ್ತು ಓದಿದಾಗ ಬಹುತೇಕ ನಿರ್ಮಲ,

ಈಗ ಓದಿದಾಗ ಮನಸ್ಸಾಗುತ್ತದೆ ಎಲ್ಲವನ್ನೂ ಬಿಟ್ಟು ಹೋಗೋಣ ನಿರಾಳ!

ದಿನಕ್ಕೊಂದು ಬದಲಾವಣೆಯ ಓಲೆ

ಕೊನೆಗೆ ಹೇಳೋಣ — ಜೈ ಜೈ ಸೀತಾರಾಮ ಲೀಲೆ!

ಬರುವಾಗಲೇ ಅಪಶಕುನ, ರಾತ್ರಿ ಹನ್ನೆರಡು, ಒಂದು ಗಂಟೆ,

ಓದದವನಿಗೂ ಕನ್ನಡಿಯೊಳಗಿನ ಗಂಟೆಯೇ ಕಾಣುವಂತೆ!

ಹುಣ್ಣಿಮೆಯೋ, ಅಮಾವಾಸ್ಯೆಯೋ,

ದಿನನಿತ್ಯ ಗಣಕನ ಸಮಸ್ಯೆಯೋ!

ಇಡೀ ಪ್ರಪಂಚ ಸುತ್ತಿದರೂ ಸುಸ್ತಾಗದು,

ಒಂದರಿಂದ ಇಪ್ಪತ್ತು ಬಿಟ್ಟು ಬೇರೆ ಯಾವ ಕೆಲಸವೂ ಸಾಗದು!

ಮೊದಲಿತ್ತು ಇನ್ನೂರೈವತ್ತು ಪುಟಗಳ ಪೇಜು,

ಈಗಂತೂ ಪುಸ್ತಕಕ್ಕೇ ಬಂದಿದೆ ಅಸಾಮಾನ್ಯ ಇಮೇಜು!

ಬದಲಾಗಿದ್ದೇ ಬದಲಾಗಿದ್ದು,

ಪುಸ್ತಕದ ತೂಕ ಮೂರು ಕೆಜಿಗೆ ಏರಿದ್ದು!

ಇನ್ನು ಈಜಿಕೊಂಡು ಬರಲಾಗುವುದಿಲ್ಲ ಈ ಕಡೆ,

ಜಿ.ಎಸ್.ಟಿ.ಯೇ ನಿಂತಿದೆ ನಮ್ಮ ಮುಂದೆ ಅಡ್ಡಗಡೆ!

ಗಿಡ ಬೆಳೆಸುವ ಚಟ, ಕವನ ಬರೆಯುವ ಹವ್ಯಾಸ,

ಇವೆಲ್ಲಕ್ಕೂ ಸಮಯವಿಲ್ಲ, ಜಿ.ಎಸ್.ಟಿ.ಯದೇ ಉಪವಾಸ!

ಪುರುಸೊತ್ತಿಲ್ಲ ಹೋಗಿ ಇರೋಕೆ ಫಾದರ್, ಮದರ್‌ನೊಂದಿಗೆ,

ಸಮಯ ಕಳೆಯುವುದೆಲ್ಲಾ ತೆರಿಗೆಯ ಲೆಕ್ಕಾಚಾರದೊಂದಿಗೆ!

ಸಾಕಪ್ಪಾ ಸಾಕು ಈ ಜಿ.ಎಸ್.ಟಿ.,

ಬದಲಾವಣೆಗಳೇ ನಿನಗೆ ಯಾಕಿಷ್ಟು ಪ್ರೀತಿ?

ಅಂದರೂ ಒಪ್ಪೊತ್ತಿನ ಊಟಕ್ಕೆ ಇದೇ ಗಟ್ಟಿ,

ನಾಳೆ ಮತ್ತೆ ಹೊಸ ನಿಯಮದ ಪಟ್ಟಿ!

ಓದಿದಷ್ಟೂ ಗೊಂದಲ, ಬರೆದಷ್ಟೂ ಲೆಕ್ಕ,

ಇದರ ನಡುವೆ ಬದುಕುವುದೇ ನಮಗೆ ದೊಡ್ಡ ಸಿಕ್ಕು!

ತೆರಿಗೆ ಕಟ್ಟುವವರಿಗೆ ನಿಯಮಗಳ ಕಟ್ಟಿ,

ತೆರಿಗೆ ಮಾಡುವವರಿಗೆ ಬದಲಾವಣೆಗಳ ಪೆಟ್ಟಿ!

ಸಾಕಪ್ಪಾ ಸಾಕು ಈ ಜಿ.ಎಸ್.ಟಿ.,

ಆದರೂ ಕುಟುಂಬದ ಹಸಿವಿಗೆ ನೀನೇ ರೊಟ್ಟಿ!

Creative Writings