Karada Vishwa

Article · June 9, 2026

ದಾಂಪತ್ಯ

- ವೀಣಾ ಎಂ ಭಟ್

ಸತಿ ಪತಿ ಜೊತೆಯ ಸಂತಸದಲ್ಲಿ ಅಡುಗೆ ಮನೆಯ ಭಯವಿಲ್ಲ 
ಸತಿಯ ಕೈಯ ನಳಪಾಕವ ಉಂಡು ತೇಗುವ ಪತಿಗೆ ಗೊಡವೆಯೆ ಇಲ್ಲ 

ತವರಿನ ಕಡೆಗೆ ಹೊರಟಳು ಎಂದರೆ ಪತಿಗೆ ಎಲ್ಲಿಲ್ಲದ ತಲೆ ನೋವು 
ಹಣೆಯನು ತಿಕ್ಕಿ ಬಾಮನು ಹಚ್ಚಿ ತೋರುವ ಅವನು ಮನದ ಕಾವು 

ಹೋಗಲೊ ಬೇಡವೆ ಎನ್ನಲು ಅವಳು ಸಿಡಿಮಿಡಿಯಿಂದ ಒಳ ನಡೆದು 
ಸುರುಬುರು ಕಣ್ಮೂಗಲ್ಲಿ ಮಳೆ ಹೊಳೆ ಹರಿಸುತ ಧಡಧಡ ನಡೆವಳು ಹಿಂದೆ ಮುಂದು 

ಪಿರಿಪಿರಿ ಮಳೆಗೆ ಕುರುಕುರು ತಿಂಡಿಯ ಮೆಲ್ಲುವ ಆಸೆ ಗಂಡನಿಗೆ 
ಕಿರಿಕಿರಿಯಲ್ಲಿ ಮಾಡ ಹೊರಟಳು ಬೇಕೆ ಈ ವಯಸಲಿ ಈ ಮೈಗೆ 

ಹಬ್ಬಕೆ ರೇಶಿಮೆ ಸೀರೆಯ ತಂದಾಗ  ಉಬ್ಬುವಳು ನಲ್ಲೆ ನನ್ನ ಮುದ್ದು 
ಸಗ್ಗವೆ ಎನಗೆ ಬಗ್ಗದ ಅವಳು ಎಗ್ಗಿಲ್ಲದೆ ಹಿಗ್ಗಮುಗ್ಗ ಮುದ್ದುಗರೆದು 

ಶೃಂಗಾರದ ನುಡಿ ಬಂಗಾರಿಯಲ್ಲಿ ರಂಗಾದ ಕೆನ್ನೆ ಕೆಂಪೇರಿ 
ಸಂಗಾತಿ ಮಾತಿನ ಮೋಡಿಗೆ ಸೋತೆನು ದಂಗಾಗಿ ನೋಡಿದೆ ನಗುವ ಸಿರಿ 


Creative Writings