
Article · August 30, 2026
ನೇಸರ
By ಅಮೃತಾ ಒ. ಬೇಂದ್ರೋಡು
ಅಮೃತಾ ಒ. ಬೇಂದ್ರೋಡು
ನೋವು–ನಲಿವುಗಳು ಪ್ರತಿಯೊಬ್ಬರ ಬದುಕಿನ ಭಾಗವೇ. ಸುಖ ಬಂದಾಗ ಹಿಗ್ಗುವ ಮನಸ್ಸು, ದುಃಖ ಬಂದಾಗ ಅದಕ್ಕೂ ಒಗ್ಗಿಕೊಳ್ಳಬೇಕು. ಸೂರ್ಯನ ಪಯಣದ ಕಥೆಯ ಜೊತೆ ಬದುಕಿಗೂ ಒಂದಷ್ಟು ಬೆಳಕು ಚೆಲ್ಲುವ ಯತ್ನದಲ್ಲಿ ಈ ಕವಿತೆ...
ಕೆಸರ ಕೆಂದಾವರೆಯ ಮೈದಡವಿ ಮುತ್ತಿಕ್ಕಿ
ಉಸಿರಿನೊಸರನೆ ಹರಿವ ಕನಸುಗಾರ
ಕನಸ ಕನವರಿಕೆಗಳ ಮೆಲ್ಲುಸಿರ ಮಿಡಿತಗಳ
ನೇವರಿಸಿ, ನೋವಳಿಸಿ ನಗುವ ಪೋರ !
ಹಸಿರ ಹಾಸಿನ ಮೇಲೆ ಚುಕ್ಕಿಯರಳುವ ವೇಳೆ
ಹಕ್ಕಿಯಿಂಚರದೊಳಗೆ ಸವಿಯ ಸೊಲ್ಲು
ಬೆಳಕಿನುಯ್ಯಾಲೆಯಲಿ ತೂಗಿಯಾಡುವ ಬಾಲೆ
ಹೆಕ್ಕಿ ತಂದಿಹ ಕನಸು ಸಾಲು ಸಾಲು !!
ಬಾನೆಲ್ಲ ಈಜಾಡಿ ಬಣ್ಣಗಳ ಎರಚಾಡಿ
ಮೆಲ್ಲ ಜಾರುವ ರವಿಯ ರಂಗಿನಾಟ
ಬೆಳಕಿನಾಸರೆ ಮೇಲೆ ಕನಸುಗಳ ಸರಮಾಲೆ
ಇರುಳ ಬೆನ್ನುಡಿ ಬರೆಯೆ ಮಡಿದ ಚಿತ್ತ !
ಆಗೀಗ ಮರೆಯಾಗಿ ಇರುಳ ಸೆರಗಲಿ ತೂಗಿ
ಕಣ್ಣ ಬೆಳಕನೆ ಕಸಿದು ಕಾಡುವಾತ ..
ಇರುಳಿನಾಚೆಯ ಬೆಳಗು - ನೋವಿನಾಚೆಯ ನಲಿವು !
ಹಂಬಲಿಸಿ ಕಾಯುವುದ ಕಲಿಸಿದಾತ
ಹಳತೆಲ್ಲ ಹರಿದೆಸೆದು ಹೊಸತನಕೆ ಹಾತೊರೆದು
ಹೊಸದಿನಕೆ ಹೊಂಬಣ್ಣ ಬಳಿದ ಚಿತ್ರ
ಇರುಳು - ಬೆಳಕಿನ ಪಾಠ ಬಾಳ ಕೌತುಕದಾಟ
ಕಾಡಿದರೂ ಕಾಯುವುದೆ ಬಾಳಸೂತ್ರ …
