Karada Vishwa

Article · September 12, 2026

ಪುಷ್ಪ

By ಗಾಯತ್ರಿ ಕೆ ನಾಗರಾಜ

ಗಾಯತ್ರಿ ಕೆ ನಾಗರಾಜ್ ಅಡ್ಕತೊಟ್ಟಿ

ಅಂತಃಕರಣದ ಆಳ್ವಿಕೆಯಲ್ಲಿ ಅಂಕುರಿಸಿದೆ
ಅವ್ಯಕ್ತ ಪ್ರಣಯದ ಬೀಜ
ದ್ವಿಹೃದಯಗಳ ಸಂಗಮದಿ ಮೂಡಿದೆ
ಮಧುರ ಮಿಲನದ ನವಸೃಜನದ ತೇಜ.
ಪ್ರಭಾವಳಿಯಡಿ ಅರಳಿದೆ
ತಮಸ್ಸಿನ ವರ್ಣದಿ ಬೆಳಗುವ ವಿರಾಗಿಪುಷ್ಪ
ಮೋಹದಾಚೆಯ ಮಾಧುರ್ಯವಿದು

ನಿರ್ಲಿಪ್ತತೆಯೊಳಗಣ ಸಾರಸ್ವತ ಸತ್ವ.

ನಾಳವೆಂಬ ದಂಟು ನಶ್ವರವಲ್ಲ
ನವಚೇತನದ ನಿತ್ಯಸಂಕೇತ
ಬೇರು ಬಿಟ್ಟಿದೆ ಅಂತರಂಗದಲಿ
ಸ್ನೇಹಾರ್ದ್ರತೆಯ ಅನುಬಂಧದ ಪಾಠ
ಪತ್ರಪುಂಜದ ಪ್ರತಿಯೊಂದು ದಳದಿ
ಲಿಖಿತವಾಗಿದೆ ತ್ಯಾಗದ ಮಹಾಕಾವ್ಯ
ಅಹಮಿಕೆಯ ಅಂಧಕಾರವ ಕಳೆದು
ಪ್ರೇಮವೇ ಆಗಿದೆ ಪರಮಾರ್ಥ ದಿವ್ಯ.

ಆ ಕುಸುಮವ ಕಪ್ಪೆಂದು ಜಗವು ಪರಿಹಸಿಸಬಹುದು

ವರ್ಣಾಂಧತೆಯ ಭ್ರಮೆಯಲಿ
ಆದರೆ ಅದರೊಳಗಣ ಮಕರಂದವು

ಬ್ರಹ್ಮಾನಂದದ ಅನುಭೂತಿಯ ಅಮಲಿನಲಿ
ಕಾಮುಕರ ಕಣ್ಣಿಗೆ ಕಾಣದ್ದು
ವಿರಹಿಗಳ ಮೌನಕೆ ಮಾತ್ರ ಗೋಚರ
ಇದು ರೂಪವಲ್ಲ ಅರೂಪದೊಳಗಣ

ಪ್ರೇಮಸಿದ್ಧಿಯ ದಿವ್ಯಾಕ್ಷರ.

ಇನ್ನುಳಿದುದೊಂದೇ - ಈ ಪುಷ್ಪವನೊಮ್ಮೆ

ಹೃದಯದಿ ಧರಿಸಿದ ಮಾನವನಿಗೆ
ಇಹದ ವ್ಯಥೆಯಿಲ್ಲ, ಪರದ ಭಯವಿಲ್ಲ
ಅವನೇ ಆಗುವನು ದೇವನೇ
ದ್ವೈತವೆಂಬುದು ಅಳಿದು, ಅದ್ವೈತ ಉಳಿದು
ಬೆಳಗುವುದು ಒಂದೇ ಪ್ರೀತಿ
ನಾನು ನೀನೆಂಬ ಭೇದವಳಿದು
ಉಳಿವುದೆಲ್ಲವೂ ಪ್ರೇಮವೆಂಬ ನಿತ್ಯಜ್ಯೋತಿ

Creative Writings