
Article · September 18, 2026
ವಾಕ್-ವೃಕ್ಷ ತತ್ವ
By ಗಾಯತ್ರಿ ಕೆ ನಾಗರಾಜ
ಗಾಯತ್ರಿ ಕೆ ಅಡ್ಕತೊಟ್ಟಿ
ನಾವುಲಿಯುವ ಮಾತುಗಳು ಬೀಜವನ್ನು ಬಿತ್ತಿ ಸಸಿಯನ್ನು ಮಹದ್ವೃಕ್ಷವಾಗಿ ಬೆಳೆಸಿದಂತೆ. ತರು ಹೇಗೆ ಹೆಮ್ಮರವಾಗಿ ಬೆಳೆದು ಪ್ರತಿಯೊಬ್ಬರಿಗೂ ಸಂತಸವನ್ನೀಯುವುದೋ ಹಾಗೆಯೇ ನಾವು ಉಳಿಯುವಂತಹ ಪ್ರತಿಯೊಂದು ವರ್ಣಗಳು ಕೂಡ........
ಕ್ಷಣಮಾತ್ರದ ವಾಚಾಳಿತನ ಸಾಕು
ವರ್ಷಗಳ ವಟವೃಕ್ಷವೇ ಧರೆಗುರುಳಲು
ಅಮೃತದಂತಹ ಸಂಬಂಧದ ಸೌಧಕೂ
ಒಂದು ವಿಷದ ನುಡಿ ಕೇಳೆ ಪುಡಿಪುಡಿಯಾಗಲು
ಕಡಿಯುವುದು ಕ್ರೌರ್ಯ ಅದು ಕ್ಷಣಿಕ
ಬೆಳೆಸುವುದು ಕರುಣೆ, ಅದು ಯುಗದ ತಪಸ್ಸು
ಅಲ್ಲಿ ಆವೇಶದ ಕೊಡಲಿಯ ಅಬ್ಬರ
ಇಲ್ಲಿ ತಾಳ್ಮೆಯೆಂಬ ಜಲದ ನಿತ್ಯ ಅಭಿಷೇಕ
ಬಿಸಿಲಿನ ದಾಹಕೆ ಬೇಕು ಛಾಯಾವೃಕ್ಷ,
ಜಲದ ಅಭಾವಕೆ ಬೇಕು ಮೇಘವೃಕ್ಷ
ಹಸಿದ ಜಠರಕೆ ಬೇಕು ಫಲವೃಕ್ಷ
ಒಂಟಿ ಮನಕೆ ಬೇಕು ಹಕ್ಕಿಯ ಕಲರವದ ನಾದವೃಕ್ಷ
ಆದರೆ ವೃಕ್ಷವು ಬೆಳೆಯುವುದು ಬೀಜದಿಂದಲ್ಲ,
ಸಹನೆಯಿಂದ ಫಲಯುತ ಪೋಷಕಗಳಿಂದ
ಮನಸು ಅರಳುವುದು ಮಾತಿನಿಂದಲ್ಲ,
ಮೌನದ ಮಮತೆಯಿಂದ ತಾಳ್ಮೆಯ ಸಹನೆಯಿಂದ
ಆದುದರಿಂದ,
ಪರುಷ ವಚನದ ಪರಶುವನು ತ್ಯಜಿಸು,
ಮೃದು ನುಡಿಯ ಮಮತೆಯ ಹಲಗೆಯನು ಹಿಡಿ
ನಾಲಿಗೆಯ ತುದಿಯಲ್ಲಿ ವಿಷವಲ್ಲ,ಅಮೃತವನ್ನಿಡು,
ನೆಲದ ಮಡಿಲಲ್ಲಿ ಬೀಜವನ್ನಲ್ಲ, ಭವಿಷ್ಯವನ್ನಿಡು!
ನೀ ನೆಟ್ಟ ಒಂದು ತರು,
ಮುಂದೆ ನಿನಗೇ ತರುವಾಯ ತಂಗಾಳಿ
ನೀ ನುಡಿದ ಒಂದು ಸದ್ವಚನ
ಮುಂದೆ ನಿನಗೇ ತರುವಾಯ ಸನ್ಮಾನ!
