Karada Vishwa

Article · July 5, 2026

ಹೂವು

--ವೀಣಾ ಎಂ ಭಟ್

ಹೂವಿಗಾಗಿ ನಡೆದೆ ಹೂವ ತೋಟದೆಡೆಗೆ

ಆವ ಹೂವನು ತರಲಿ ಚೆಲುವ ಕೃಷ್ಣನಿಗೆ

ತುಳಸಿಯ ದಳವನ್ನ ಬೆಳಗಿನ ಜಾವದಲಿ

ಬಿಡಿಸಿದೆ ದಳವ ಬೃಂದಾವನದ ತೋಟದಲಿ

ದಳವ ದಾರಕೆ ಕಟ್ಟಿ ಮಾಲೆಯ ಹೆಣೆಯುತ್ತ

ಶೃಂಗಾರ ಲೋಲನಿಗೆ ಅರ್ಪಣೆಯ ಮಾಡಿದೆನು

ಮಲ್ಲಿಗೆಯ ಮಂಟಪದೆ ಸೌರಭವ ಸೂಸಿರಲು

ಚೆಲುವ ಹೂಗಳ ಮಾಲೆ ಕಟ್ಟಿ ಅರ್ಪಿಸಲು

ಮೆಲ್ಲ ಮೆಲ್ಲನೆ ನಡೆದು ಬಿರಿದ ಹೂಗಳ ಆಯ್ದು

ಮಾಧವನ ಕೊರಳೊಳು ಅರ್ಪಿಸಿದೆ ತಂದು

ಸಂಪಿಗೆಯ ತೋಪಿನಲಿ ಕಂಪು ಬೀರುವ ಚೆಲುವ

ಸಂಪಿಗೆ ಬಿರಿದಿಹುದು ಸೊಂಪಾದ ಮರದಲ್ಲಿ

ಕಂಪಿಗೆ ಮರುಳಾಗಿ ಕೋಗಿಲೆಯು ಇಂಪಾಗಿ

ಹಾಡುತಿದೆ ಕಿವಿಗಿಂಪು ಸಂಪಿಗೆ ಆರಿಸುವಲ್ಲಿ

ಮಂದಾರ ಕುಸುಮವದು ಮಂದರೋದ್ಧರನಿಗೆ

ಮುಂಜಾವ ಮಂಜಿನಲಿ ಮುಗುಳು ನಗೆ ಸೂಸಿ

ಶ್ವೇತ ಸುಂದರಿ ಆಕೆ ಮನ ಸೋಲುತಿದೆ ಎನಗೆ

ಸರಿದೆನು ಬಳಿಯಲ್ಲಿ ಬಿರಿದ ಹೂವಿನ ಕಡೆಗೆ

ಸುಗಂಧ ಬೀರುವ ಸೌಗಂಧಿ ತಾ ಅರಳಿಹುದು

ನಂದನ ಕಂದ ಮುಕುಂದ ಗೋವಿಂದನಿಗೆ

ಸುಂದರ ಮಾಲೆಯನು ಪೋಣಿಸುತ ತಂದಿಹೆನು

ಇಂದಿರಾಧವ ನಿನ್ನ ಮೋಹಕ ಕೊರಳಿಗೆ

Creative Writings
ಹೂವು