Karada Vishwa

Article · October 25, 2026

ಬೆಳ್ಳಕ್ಕಿ ಸಾಲು..

By ಜಯಶ್ರೀ ಕೆ. ಆರ್ ಭಟ್ ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ಹಾರಿ ಬರುತಿದೆ ನೋಡು

ಬೆಳ್ಳಕ್ಕಿ ಸಾಲುಗಳು

ಒಂದಲ್ಲ ಎರಡಲ್ಲ ಸಾಲು ಸಾಲು /

ತೇಲಿ ಗಾಳಿಯೊಮ್ಮೆ

ಸ್ವಚ್ಛಂದ ಹಾರಾಟ

ಏರಿ ಬಾನೆತ್ತರಕೆ ಮುಗಿಲ ಮೇಲೂ /

ಎಲ್ಲಿಂದಲೋ ಪಯಣ,

ಎತ್ತ ಕಡೆಗೋ ಯಾನ

ಯಾರ ಹಂಗೂ ಇರದ ಸ್ನೇಹ ಪಯಣ /

ಜೊತೆಯಾಗಿ ಹಾರುತಿವೆ,

ಸುತ್ತಲೂ ನೋಡುತಿವೆ

ಸಾಗರವ ದಾಟುತಲಿ ಗಗನಯಾನ /

ರೋಗ ರುಜಿನಗಳಿಲ್ಲ

ವೇದನೆಯು ಮೊದಲಿಲ್ಲ

ನಾಳೆ ಎಂಬುವ ಚಿಂತೆ ಮನದೊಳಿಲ್ಲ /

ಮರದ ಮೇಲ್ಗಡೆ ಕುಳಿತು

ಉಯ್ಯಾಲೆಯಾಡುತಿವೆ,

ಕತ್ತಲಾದರು ಕೂಡ ಭಯವೇ ಇಲ್ಲ /

ತನ್ನದೇ ಭಾಷೆಯಲ್ಲಿ

ವಿಧವಿಧದ ಶೈಲಿಯಲಿ

ಖುಷಿಯ ಉದ್ಗಾರಗಳು ಕೂಗಿ ಕೂಗಿ /

ಸಂತಸದ ಹಾರಾಟ,

ನೆಮ್ಮದಿಯ ಹುಡುಕಾಟ

ಮನವ ಸೆಳೆಯುವ ದೃಶ್ಯ ಬಾನಿನಲ್ಲಿ /

Creative Writings