
Article · November 15, 2026
ಪರಂಪರೆ ಮತ್ತು ಆತಿಥ್ಯದ ನೆಲ - ಬಾಗಲಕೋಟೆ ಇತಿಹಾಸ
ಈ ವಾರದ ವಿಶ್ವವಾಣಿ ಪತ್ರಿಕೆಯ ಪ್ರವಾಸಿ ಪ್ರಪಂಚ ಪುರವಣಿಯಲ್ಲಿ ಪ್ರಕಟವಾದ ಮೇಘನಾ ಕಾನೇಟ್ಕರ್ ಅವರ ಲೇಖನ
ಉತ್ತರ ಕರ್ನಾಟಕದ ವಿಶಾಲ ನೆಲ, ಗಾಳಿಯಲ್ಲೇ ಬೆರೆತಿರುವ ಮಣ್ಣಿನ ವಾಸನೆ, ಜನರ ಮಾತಿನಲ್ಲಿರುವ ಸರಳತೆ—ಇವೆಲ್ಲವೂ ಬಾಗಲಕೋಟೆಯನ್ನು ನೋಡಿದ ಕ್ಷಣದಿಂದಲೇ ಮನಸ್ಸಿಗೆ ಹತ್ತಿರವಾಗುತ್ತವೆ. ನಿಮಗೆ ಗೊತ್ತಿರಬಹುದು ಒಂದು ಕಾಲದಲ್ಲಿ ಇಂದಿನ ಬಾಗಲಕೋಟೆ ಮತ್ತು ವಿಜಯಪುರ ಪ್ರದೇಶಗಳು ಅವಿಭಜಿತ ಬಿಜಾಪುರ ಜಿಲ್ಲೆಯ ಭಾಗವಾಗಿದ್ದವು. 1997ರಲ್ಲಿ ಬಾಗಲಕೋಟೆ ಪ್ರತ್ಯೇಕ ಜಿಲ್ಲೆಯಾಯಿತು. ಚಾಲುಕ್ಯರ ಇತಿಹಾಸದಿಂದ ಹಿಡಿದು ಇಂದಿನ ಕೃಷಿ, ಕೈಮಗ್ಗ ಮತ್ತು ಆಹಾರ ಸಂಸ್ಕೃತಿಯವರೆಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಜಿಲ್ಲೆ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತದೆ ಎನ್ನುವುದು ಅಕ್ಷರಶಃ ಸತ್ಯ.
ಬಾದಾಮಿಯ ಕಡೆಗೆ ಪ್ರಯಾಣಿಸುವಾಗ ಇತಿಹಾಸ ಪಠ್ಯದಲ್ಲಿ ಓದಿದ್ದ ಚಾಲುಕ್ಯರ ವೈಭವದ ನೆನಪು ಸಹಜವಾಗಿಯೇ ಮೂಡಿತು. ಅಂದಿನ ವಾತಾಪಿಯಾಗಿದ್ದ ಇಂದಿನ ಬಾದಾಮಿ, ಚಾಲುಕ್ಯರ ರಾಜಧಾನಿಯಾಗಿತ್ತು. ಇಮ್ಮಡಿ ಪುಲಕೇಶಿಯ ಕಾಲದಲ್ಲಿ ಚಾಲುಕ್ಯ ಸಾಮ್ರಾಜ್ಯ ಪ್ರಬಲವಾಗಿತ್ತು. ಆದ್ದರಿಂದಲೇ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲಿನ ದೇವಾಲಯಗಳು ಆ ಕಾಲದ ವಾಸ್ತುಶಿಲ್ಪದ ಬೆಳವಣಿಗೆಗೆ ಸಾಕ್ಷಿಯಾಗಿವೆ. ಬಾದಾಮಿಯ ಕೆಂಪು ಮರಳುಗಲ್ಲಿನ ಬೆಟ್ಟಗಳು, ಗುಹಾಂತರ ದೇವಾಲಯಗಳು ಮತ್ತು ಶಿಲ್ಪಗಳನ್ನು ನೋಡುತ್ತಾ, ಶತಮಾನಗಳ ಹಿಂದೆ ಶಿಲಾಸ್ತಂಭಗಳ ಮೇಲೆ ಇಂತಹ ಸೂಕ್ಷ್ಮ ಕಲಾಕೃತಿಗಳನ್ನು ಮೂಡಿಸಿದ ಕಲಾವಿದರ ಕೌಶಲದ ಬಗ್ಗೆ ಅಚ್ಚರಿಯಾಯಿತು. ಹ್ಞ ಇಲ್ಲಿ ಚಾಲುಕ್ಯರಷ್ಟೇ ಅಲ್ಲ, ವಿಜಯನಗರ ಸಾಮ್ರಾಜ್ಯ ಹಾಗು ಬಹಮನಿ ಸುಲ್ತಾನರ ಆಳ್ವಿಕೆ ಕಂಡ ಕುರುಹು ಕೂಡಾ ಇದೆ.
ಅಗಸ್ತ್ಯ ಸರೋವರದ ದಡದಲ್ಲಿರುವ ಭೂತನಾಥ ದೇವಾಲಯದ ಸೌಂದರ್ಯವೂ ಇತಿಹಾಸ ಪ್ರಿಯರ ಗಮನ ಸೆಳೆಯುತ್ತದೆ. ಕೆಂಪು ಕಲ್ಲಿನ ದೇವಾಲಯ, ಎದುರಿನ ಪ್ರಶಾಂತವಾದ ಅಗಸ್ತ್ಯ ತೀರ್ಥ ಮತ್ತು ಸುತ್ತಲಿನ ಬಂಡೆಗಳು ಸೇರಿ ಕಣ್ಮನ ಸೆಳೆಯುವಂತಹ ಸುಂದರ ದೃಶ್ಯವನ್ನು ಸೃಷ್ಟಿಸುತ್ತವೆ. ಊರ ಕಾಯುವ ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದದ್ದು ಪ್ರವಾಸದ ಅದ್ಭುತ ರೋಮಾಂಚಕ ಕ್ಷಣವಾಗಿತ್ತು. ಚೋಳಚಗುಡ್ಡದಲ್ಲಿರುವ ಈ ಪುರಾತನ ಕ್ಷೇತ್ರವು ಚಾಲುಕ್ಯರ ಧಾರ್ಮಿಕ ಪರಂಪರೆಯೊಂದಿಗೆ ಬೆಸೆದುಕೊಂಡಿದೆ. ದೇವಾಲಯದ ಸಮೀಪದ ಕಲ್ಯಾಣಿ ಹರಿದ್ರಾ ತೀರ್ಥವೂ ಈ ಕ್ಷೇತ್ರದ ವಿಶೇಷತೆಗಳಲ್ಲಿ ಒಂದು.
ಬನಶಂಕರಿ ದೇವಿಯ ದರ್ಶನ ಮುಗಿಸಿ ದೇವಸ್ಥಾನದ ಪ್ರಾಂಗಣಕ್ಕೆ ಬಂದಾಗ ಕಂಡ ದೃಶ್ಯ ನನ್ನ ಪ್ರವಾಸದ ಮರೆಯಲಾಗದ ಅನುಭವಗಳಲ್ಲಿ ಒಂದಾಯಿತು. ಏಕೆ ಗೊತ್ತೇ? ಅಲ್ಲಿನ ಸ್ಥಳೀಯ ಮಹಿಳೆಯರು ಬಿದಿರಿನ ಬುಟ್ಟಿಗಳಲ್ಲಿ ರೊಟ್ಟಿ ಊಟವನ್ನು ಹೊತ್ತುತಂದು ಯಾತ್ರಿಕರಿಗಾಗಿ ಕಾಯುತ್ತಿದ್ದರು. ನನಗೂ ಆ ಊಟವನ್ನು ಅಲ್ಲಿಯೇ ಸವಿಯುವ ಅವಕಾಶ ಸಿಕ್ಕಿತು. ದೇವಸ್ಥಾನಕ್ಕೆ ಬಂದ ಭಕ್ತರಿಗೆ ಪ್ರೀತಿಯಿಂದ ಊಟ ನೀಡುವ ಅವರ ಆತಿಥ್ಯ ಮನಸ್ಸಿಗೆ ತಟ್ಟದಿರದು. ನನ್ನಂತಹ ಪ್ರವಾಸ ಮತ್ತು ಭೋಜನ ಪ್ರಿಯರಿಗೆ ಪ್ರವಾಸದಲ್ಲಿ ಪ್ರಸಿದ್ಧ ಸ್ಥಳಗಳನ್ನು ನೋಡುವುದಷ್ಟೇ ಅಲ್ಲ, ಅಲ್ಲಿನ ಜನರ ಬದುಕಿನ ಭಾಗವಾಗಿರುವ ಇಂತಹ ಅನುಭವಗಳೂ ಮುಖ್ಯವೆನಿಸುತ್ತದೆ. ಮನೆಯ ಊಟವನ್ನು ಪ್ರೀತಿಯಿಂದ ಬಡಿಸಿ, ಇನ್ನೊಂದು ರೊಟ್ಟಿ ತಿನ್ನುವಂತೆ ಒತ್ತಾಯಿಸುವ ಆತಿಥ್ಯ ಉತ್ತರ ಕರ್ನಾಟಕದ ಜನರ ಸಹಜ ಗುಣ. ಅವರ ಆತ್ಮೀಯತೆ, ಅಕ್ಕರೆಗೆ ಮನಸೋತು ಡಯಟ್ ಗಳನ್ನ ಗಾಳಿಗೆ ತೂರಿ ಎರಡು ತುತ್ತು ಹೆಚ್ಚೇ ತಿನ್ನುತ್ತೇವೆ. ನಿಜ ಹೇಳಬೇಕೆಂದರೆ ಅಂತಹ ಆಹಾರಗಳೇ ಹೆಚ್ಚು ಆರೋಗ್ಯಕರ ಮತ್ತು ರುಚಿಕರ ಕೂಡ.
ಬಾದಾಮಿಯ ಸಮೀಪದಲ್ಲಿರುವ ಮಹಾಕೂಟದ ದೇವಾಲಯ ಸಮೂಹವನ್ನು ‘ದಕ್ಷಿಣ ಕಾಶಿ’ ಎಂದೂ ಕರೆಯುತ್ತಾರೆ. ಪುರಾತನ ಶಿವ ದೇವಾಲಯಗಳು, ವಿಷ್ಣು ಪುಷ್ಕರಿಣಿ ಮತ್ತು ಸುತ್ತಲಿನ ಹಳೆಯ ಮರಗಳು ಈ ಸ್ಥಳಕ್ಕೆ ವಿಶಿಷ್ಟವಾದ ವಾತಾವರಣ ನಿರ್ಮಿಸುತ್ತವೆ. ಇಲ್ಲಿನ ದೇವಾಲಯಗಳಲ್ಲಿ ಚಾಲುಕ್ಯ ಕಾಲದ ವಾಸ್ತುಶಿಲ್ಪದ ವೈವಿಧ್ಯವನ್ನು ಕಾಣಬಹುದು. ಅಲ್ಲಿಂದ ಪಟ್ಟದಕಲ್ಲಿಗೆ ಹೋದಾಗ ಅಲ್ಲಿನ ದೇವಾಲಯಗಳ ಶಿಲ್ಪಕಲೆ ವಿಶೇಷವಾಗಿ ಗಮನ ಸೆಳೆಯಿತು. ಕಂಬಗಳ ಕೆತ್ತನೆ, ದೇವಾಲಯಗಳ ವಿನ್ಯಾಸ ಮತ್ತು ವಿಭಿನ್ನ ವಾಸ್ತುಶೈಲಿಗಳ ಸಂಯೋಜನೆ ಅಂದಿನ ಕಲಾವಿದರ ಪ್ರತಿಭೆಯನ್ನು ಪರಿಚಯಿಸುತ್ತವೆ. ಅಂದಹಾಗೆ ಗೊತ್ತಿರಲಿ 1987ರಲ್ಲಿ UNESCO ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟ ಪಟ್ಟದಕಲ್ಲು, ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಮಹತ್ವದ ಸ್ಥಾನ ಹೊಂದಿದೆ.
ಜಮಖಂಡಿಯ ಪಟವರ್ಧನ್ ಅರಮನೆ ಪ್ರವಾಸದ ಮತ್ತೊಂದು ಕುತೂಹಲಕಾರಿ ತಾಣ. ಪಟವರ್ಧನ್ ಪರಿವಾರ ಚಿತ್ಪಾವನ ಬ್ರಾಹ್ಮಣ ಮೂಲದ ಮನೆತನವಾಗಿದ್ದು, ಜಮಖಂಡಿ ಅವರ ಸಂಸ್ಥಾನವಾಗಿತ್ತು. 1811ರಲ್ಲಿ ಈ ಸಂಸ್ಥಾನದ ಸ್ಥಾಪನೆಯಾಯಿತು ಎನ್ನುತ್ತವೆ ದಾಖಲೆಗಳು. ಅರಮನೆಯ ಹಳೆಯ ಕಟ್ಟಡಗಳು ಮತ್ತು ಪುಷ್ಕರಿಣಿ ಹಿಂದಿನ ರಾಜಮನೆತನದ ಬದುಕಿನ ಚಿತ್ರಣವನ್ನು ನೀಡುತ್ತವೆ. ರಾಣಿಯ ಸ್ನಾನಗೃಹದ ಗೋಡೆಯಿಂದ ಇಂದಿಗೂ ಸುಗಂಧ ದ್ರವ್ಯದ ಪರಿಮಳದ ಅನುಭವ ಸಿಗುತ್ತದೆ ಎಂಬ ಸ್ಥಳೀಯರು ಹೇಳುವ ಕಥೆ ಇಲ್ಲಿನ ವಿಶೇಷತೆಗಳಲ್ಲಿ ಒಂದು. ಈ ಮಾತಿನ ಸತ್ಯಾಸತ್ಯತೆಗಿಂತಲೂ, ಅದಕ್ಕೆ ಸಂಬಂಧಿಸಿದ ಸ್ಥಳೀಯ ನೆನಪು ಮತ್ತು ಅರಮನೆಯ ಬಗ್ಗೆ ಜನರಿಗಿರುವ ಆಸಕ್ತಿ ಗಮನಾರ್ಹವಾಗಿದೆ. ಅರಮನೆಯ ಹಿಂಭಾಗದಲ್ಲಿರುವ ಜಂಬುಕೇಶ್ವರ ದೇವಸ್ಥಾನದ ಬಗ್ಗೆಯೂ ಸ್ಥಳೀಯ ಪರಂಪರೆಯಲ್ಲಿ ಹಲವು ಕಥೆಗಳಿವೆ. ಋಷಿ ಜಂಬು ಮತ್ತು ತಪಸ್ಸಿಗೆ ಸಂಬಂಧಿಸಿದ ನಂಬಿಕೆಗಳು ಈ ಪ್ರದೇಶದ ಸಾಂಸ್ಕೃತಿಕ ಹಿನ್ನೆಲೆಯ ಭಾಗವಾಗಿವೆ. ರಾಜಮನೆತನದ ಇತಿಹಾಸದ ಜೊತೆಗೆ ಇಂತಹ ಸ್ಥಳೀಯ ಕಥೆಗಳೂ ಜಮಖಂಡಿಯ ಗುರುತಿನ ಭಾಗವಾಗಿವೆ.
ಬಾಗಲಕೋಟೆಯ ಪ್ರವಾಸದಲ್ಲಿ ಗದ್ದನಕೇರಿ ಕ್ರಾಸ್ನ್ನು ಮರೆಯಲು ಸಾಧ್ಯವೇ ಇಲ್ಲ. ಅಲ್ಲಿನ ಬಸ್ಸ್ಟಾಪ್ ಮತ್ತು ಪ್ರಯಾಣಿಕರ ಓಡಾಟದ ನಡುವೆ ಟಿ.ಟಿ. ಬಳ್ಳಾರಿ ಅವರ ಸಣ್ಣ ಅಂಗಡಿಯಲ್ಲಿ ಸಿಗುವ ಡಬಲ್ ಫ್ರೈ ಕಟ್ಮಿರ್ಚಿ ಬಜ್ಜಿ ಬಹಳ ಜನಪ್ರಿಯ. ಬಿಸಿ ಬಿಸಿಯಾದ, ಗರಿಗರಿಯಾದ ಆ ಬಜ್ಜಿಯ ಖಾರ ಮತ್ತು ಬಾಯಲ್ಲಿ ನೀರೂರಿಸುವಂತಹ ವಿಶಿಷ್ಟ ರುಚಿ ಪ್ರವಾಸದ ಆಹಾರ ನೆನಪುಗಳಲ್ಲಿ ವಿಶೇಷ ಸ್ಥಾನ ಪಡೆದದ್ದು ನಿಜ. ನನಗಂತೂ ಹೀಗೆ ಪ್ರವಾಸಕ್ಕೆ ಹೋದಾಗ ದೊಡ್ಡ ಹೋಟೆಲ್ಗಳಿಗಿಂತ ಸ್ಥಳೀಯರ ನೆಚ್ಚಿನ ಇಂತಹ ಸಣ್ಣ ಅಂಗಡಿಗಳೇ ಆ ಊರಿನ ಆಹಾರ ಸಂಸ್ಕೃತಿಯನ್ನು ಹೆಚ್ಚು ಪರಿಚಯಿಸುತ್ತವೆ. ಈಗಂತೂ ಟಿ.ಟಿ. ಬಳ್ಳಾರಿ ಅವರ ಅಂಗಡಿ ಸುತ್ತಮುತ್ತ ಬೇರೆಯವರೂ ಕಟ್ ಮಿರ್ಚಿ ಬಜ್ಜಿ, ಒಗ್ಗರಣೆ ಮಂಡಕ್ಕಿ ಮಾರುವ ಸಣ್ಣಪುಟ್ಟ ಅಂಗಡಿಗಳನ್ನು ತೆರೆದಿದ್ದಾರೆಯಾದರೂ ಸ್ಥಳೀಯರಿಗೆ ನಾವು ಅವರ ಊರನ್ನು ನೋಡಲು ಬಂದಿರುವ ಪ್ರವಾಸಿಗರು ಅಂತ ಗೊತ್ತಾದ ಕೂಡಲೇ ನಮಗೆ ಸೂಚಿಸುವುದು ಇದೇ ಹಳೆಯ ಟಿ.ಟಿ. ಬಳ್ಳಾರಿಯವರ ಅಂಗಡಿಯನ್ನು.
ಬಾಗಲಕೋಟೆಯ ಮತ್ತೊಂದು ಹೆಮ್ಮೆ ಇಳಕಲ್ ಸೀರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಇಳಕಲ್ಲ ಎಂಬ ಗ್ರಾಮದಲ್ಲಿ ತಲೆಮಾರುಗಳಿಂದ ನೇಕಾರರು ಬೆಳೆಸಿಕೊಂಡು ಬಂದಿರುವ ಈ ಕೈಮಗ್ಗ ಪರಂಪರೆ ತನ್ನ ವಿಶಿಷ್ಟ ಅಂಚು, ಸೆರಗು ಮತ್ತು ನೇಯ್ಗೆಯ ತಂತ್ರದಿಂದ ಗುರುತಿಸಿಕೊಂಡಿದೆ. ದೇಹದ ಭಾಗ ಮತ್ತು ಸೆರಗನ್ನು ಜೋಡಿಸುವ ಟೋಪಿ ತೆನೆ, ಜೋಳದ ತೆನೆ ವಿಧಾನ ಇಳಕಲ್ ಸೀರೆಯ ಪ್ರಮುಖ ವೈಶಿಷ್ಟ್ಯ. ನಾಲ್ಕರಿಂದ ಆರು ಇಂಚಿನವರೆಗೂ ಇರುವ ಇಳಕಲ್ ಸೀರೆಯ ಅಂಚುಗಳ ವಿನ್ಯಾಸವನ್ನು ಗುರುತಿಸುವ ಹೆಸರುಗಳೇ ಚೆಂದ -- ಚಿಕ್ಕಿ ಪರಸ್, ಪಟ್ಟೆದ ಅಂಚು, ಗಾಯತ್ರಿ ಬಾರ್ಡರ್, ಗೋಮಿ (ಟೆಂಪಲ್ ಬಾರ್ಡರ್) ಹೀಗೆ. ಹತ್ತಿ ಹಾಗು ರೇಶಿಮೆ ನೂಲಿನ ಮಿಶ್ರಣದಿಂದ ನೇಯಲಾಗುವ ಇಳಕಲ್ ಸೀರೆಯಲ್ಲಿ ಪ್ಲೇನ್, ಚೌಕಡಿ, ಕಡ್ಡಿ ಸೀರೆ, ನಕ್ಷತ್ರ ಬುಟ್ಟ ಅಲ್ಲದೆ ಆನೆ, ಕಮಲ, ಪಲ್ಲಕ್ಕಿ ಚಿತ್ತಾರಗಳಿಂದ ಕೂಡಿದ ಕಸೂತಿ ಎಂಬ ಹಲವು ವಿಧಗಳಿವೆ. ಒಂದು ಸೀರೆಯ ಹಿಂದೆ ನೇಕಾರರ ಪರಿಶ್ರಮ, ತಲೆಮಾರುಗಳ ಜ್ಞಾನ ಮತ್ತು ಸ್ಥಳೀಯ ಕಲಾ ಪರಂಪರೆ ಅಡಗಿದೆ ಎಂಬುದನ್ನು ಇದು ನೆನಪಿಸುತ್ತದೆ. 2007ರಲ್ಲಿ ಭೌಗೋಳಿಕ ಸೂಚ್ಯಂಕದ (GI) ಮಾನ್ಯತೆ ಪಡೆದ ಈ ಸೀರೆ ಕರ್ನಾಟಕದ ಪ್ರಮುಖ ಸಾಂಪ್ರದಾಯಿಕ ಉತ್ಪನ್ನಗಳಲ್ಲಿ ಒಂದಾಗಿದೆ ಎನ್ನುವುದು ನಮಗೆಲ್ಲ ಹೆಮ್ಮೆಯ ವಿಷಯವೇ ಹೌದು.
ಅರೆ! ನೋಡಿ, ನಾನು ಇಲ್ಲಿನ ಕಟ್ ಮಿರ್ಚಿಯ ಬಗ್ಗೆ ಹೇಳುವಾಗ ಗಲ್ಗಲಿ ಪೇಡಾದ ಬಗ್ಗೆ ಹೇಳುವುದನ್ನೇ ಮರೆತೆ. ಇದು ಬಾಗಲಕೋಟೆಯ ಪ್ರಸಿದ್ಧ ಸಿಹಿ ತಿಂಡಿ. ನೋಡಲು ಸಾಮಾನ್ಯ ಧೂದ್ ಪೇಡಾದಂತೆ ಕಾಣುವ, ಕೆಲವೇ ಕೆಲವು ಸಾಮಾಗ್ರಿಗಳನ್ನು ಬಳಸಿ ತಯಾರಿಸುವ ಈ ಪೇಡಾ ದೂರದ ಅಮೆರಿಕಾ, ಲಂಡನ್ ಮತ್ತು ಜರ್ಮನಿಯಂತಹ ದೇಶಗಳಲ್ಲಿ ನೆಲೆಸಿರುವ ಬಾಗಲಕೋಟೆಯವರು ಭಾರತದಿಂದ ತಮ್ಮ ಕುಟುಂಬಸ್ಥರು, ಸ್ನೇಹಿತರು ಬರುತ್ತಿದ್ದಾರೆ ಎಂದರೆ ಸಾಕು ಮುದ್ದಾಂ ಗಲ್ಗಲಿ ಪೇಡಾ ತರಿಸಿಕೊಳ್ಳುತ್ತಾರೆ ಎಂಬ ಮಾತು ಕೇಳಿಬರುತ್ತದೆ. ತಮ್ಮ ಊರಿನಿಂದ ದೂರವಿದ್ದರೂ ಅಲ್ಲಿನ ರುಚಿಯನ್ನು ಮರೆಯದ ಜನರ ಪ್ರೀತಿ ಈ ಸಿಹಿತಿಂಡಿಯ ಜನಪ್ರಿಯತೆಯನ್ನು ತೋರಿಸುತ್ತದೆ.
ಇಷ್ಟೆಲ್ಲಾ ಹೇಳುವಾಗ ನಿಮಗೆ ಖಂಡಿತವಾಗಿಯೂ ಈಗ‘ಬಾಗಲಕೋಟೆ’ ಎಂಬ ಹೆಸರಿನ ಮೂಲದ ಬಗ್ಗೆಯೂ ಕುತೂಹಲ ಮೂಡಿರುತ್ತದೆ ಅಲ್ಲವೇ? ಹಳೆಯ ಶಾಸನಗಳಲ್ಲಿ ‘ಬಾಗದಿಗೆ’ ಎಂಬ ಹೆಸರು ಉಲ್ಲೇಖವಾಗುತ್ತದೆ. ‘ಬಾಗಲ’ ಎಂದರೆ ಬೃಹತ್ ಬಾಗಿಲು ಅಥವಾ ದೊಡ್ಡದಾದ ಪ್ರವೇಶದ್ವಾರ, ಮತ್ತು ‘ಕೋಟೆ’ ಎಂದರೆ ಎತ್ತರದ ಕಲ್ಲಿನ ಕಟ್ಟಡ ಎಂಬ ವ್ಯಾಖ್ಯಾನವೂ ಇದೆ. ಆದರೆ ಹೆಸರಿನ ಮೂಲದ ಬಗ್ಗೆ ಒಂದೇ ಒಂದು ಖಚಿತವಾದ ವಿವರಣೆ ಇಲ್ಲ. ಹೀಗೆ ಊರಿನ ಇತಿಹಾಸವನ್ನು ತಿಳಿಯುವಾಗ ಇಂತಹ ಸ್ಥಳನಾಮಗಳೂ ಸಂಶೋಧನೆಗೆ ಆಸಕ್ತಿದಾಯಕ ವಿಷಯಗಳಾಗುತ್ತವೆ. ಹೀಗೆ ಸುತ್ತಿ ಬಂದ ಬಾಗಲಕೋಟೆ ತನ್ನ ಇತಿಹಾಸದ ವೈಭವವನ್ನಷ್ಟೇ ಅಲ್ಲ, ಜನರ ಬದುಕಿನ ಸರಳತೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನೂ ಪರಿಚಯಿಸಿತು. ಇತಿಹಾಸವನ್ನು ಶಿಲೆಯಲ್ಲಿ, ಸಂಸ್ಕೃತಿಯನ್ನು ಕೈಮಗ್ಗದಲ್ಲಿ, ಆತ್ಮೀಯತೆಯನ್ನು ಊಟದ ಬುತ್ತಿಯಲ್ಲಿ ಕಾಣಬಹುದಾದ ಬಾಗಲಕೋಟೆ, ಮತ್ತೆ ಭೇಟಿ ನೀಡಬೇಕೆನಿಸುವ ನೆಲವಾಗಿ ನೆನಪಿನಲ್ಲಿ ಉಳಿಯಿತು.
