
News · October 28, 2026
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ನವರಾತ್ರಿ ಉತ್ಸವ
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ನವರಾತ್ರಿ ಉತ್ಸವವು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ವಿಜೃಂಭಣೆಯಿಂದ ಜರುಗಿತು.
ಉತ್ಸವದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಪೂಜೆಗಳು, ವೇದಪಾರಾಯಣ, ತುಲಾಭಾರ ಸೇವೆ, ಲಲಿತಾ ಸಹಸ್ರನಾಮ ಪಾರಾಯಣ, ನಾರಾಯಣೀಯಂ ಪಾರಾಯಣ, ಕುಣಿತ ಭಜನೆ, ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆ ಮೊದಲಾದ ಕಾರ್ಯಕ್ರಮಗಳು ನಡೆದವು. ಸುಮಾರು 20 ಭಜನಾ ತಂಡಗಳು ಭಾಗವಹಿಸಿ ಭಕ್ತಿಗೀತೆಗಳ ಮೂಲಕ ಉತ್ಸವಕ್ಕೆ ವಿಶೇಷ ಮೆರುಗು ನೀಡಿದವು.
ನವಮಿಯಂದು ಶ್ರೀ ದೇವಿಗೆ ನವಾನ್ನ ಹಾಗೂ ಪಾಯಸ ಸಮರ್ಪಣೆ, ಆಯುಧ ಪೂಜೆ ಮತ್ತು ವಾಹನ ಪೂಜೆ ನೆರವೇರಿದರೆ, ವಿಜಯದಶಮಿಯಂದು ಶಾರದಾ ಪೂಜೆ, ಮಂಗಳಾರತಿ ಹಾಗೂ ವಿದ್ಯಾರಂಭ ಕಾರ್ಯಕ್ರಮಗಳು ಭಕ್ತಿಪೂರ್ವಕವಾಗಿ ನಡೆದವು.
ಉತ್ಸವದ ಯಶಸ್ಸಿಗೆ ಸಮಾಜದ ಮಾತೆಯರು, ಸಹೋದರಿಯರು ಹಾಗೂ ಕಾರ್ಯಕರ್ತರು ಅಪಾರ ಶ್ರಮ ವಹಿಸಿದರು. ಅಡುಗೆ ಸಿದ್ಧತೆ, ಸೇವಾ ಪ್ರಸಾದ ಹಾಗೂ ಅನ್ನಪ್ರಸಾದ ವಿತರಣೆ, ಕಾರ್ಯಾಲಯದ ನಿರ್ವಹಣೆ ಮತ್ತು ಸ್ವಚ್ಛತೆ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಎಲ್ಲರೂ ಸಹಕರಿಸಿದರು.
ಒಟ್ಟಿನಲ್ಲಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾಜದ ಒಗ್ಗಟ್ಟು ಮತ್ತು ಸಹಕಾರವನ್ನು ಸಾರಿದ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ನವರಾತ್ರಿ ಉತ್ಸವವು ಭಕ್ತರ ಪಾಲಿಗೆ ಸ್ಮರಣೀಯವಾಯಿತು. ಉತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕ್ಷೇತ್ರದ ಆಡಳಿತ ಮಂಡಳಿಯು ಕೃತಜ್ಞತೆ ಸಲ್ಲಿಸಿದೆ.






