
Article · October 15, 2026
ಮನೆಮನದ ನವರಾತ್ರಿಯ ನವೋಲ್ಲಾಸ
ಲವಲVK ಸಾಪ್ತಾಹಿಕದಲ್ಲಿ ಪ್ರಕಟವಾದ ಮೇಘನಾ ಕಾನೇಟ್ಕರ್ ಅವರ ಲೇಖನ
ಉತ್ತರ ಕನ್ನಡ ಸುತ್ತಮುತ್ತ ನವರಾತ್ರಿ ವಿಶಿಷ್ಟ ಆಚರಣೆಗಳೊಂದಿಗೆ ರಂಗೇರುತ್ತದೆ. ನವರಾತ್ರಿ ಅಂದರೆ ಉಲ್ಲಾಸಕ್ಕೆ ಅಂಟಿದ ಸವಿ. ಅಲ್ಲಿ ಕೌಟುಂಬಿಕ ಪ್ರೀತಿ ಇದೆ. ಸಾಮಾಜಿಕವಾಗಿ ಬೆರೆಯಲು ಒಂದಷ್ಟು ನೆಪಗಳು ಜೊತೆಗಿವೆ. ಸಂಸ್ಕೃತಿಯ ಸಿಂಚನದಲ್ಲಿ ಮಿಂದೇಳುವಷ್ಟು ಸಾಂಸ್ಕೃತಿಕ ವೈಭವ ಕಳೆಕಟ್ಟುತ್ತದೆ. ಭಕ್ತಿ ಎಂದವರಿಗೆ ಧಾರ್ಮಿಕ ಕೇಂದ್ರ, ಮನರಂಜನೆ ಎನ್ನುವವರಿಗೆ ಹಾಡು, ನೃತ್ಯ, ಯಕ್ಷಗಾನದ ವೇದಿಕೆ. ನಂಬಿಕೆಯ ಜೊತೆಯಾದ ತಲೆಮಾರುಗಳಿಂದ ಬಂದ ಆಚರಣೆ. ಪುಟ್ಟ ಹುಡುಗಿಯರಿಗೆ ಬಾಲ ದುರ್ಗೆಯರ ಹೆಸರಲ್ಲಿ ಬಾಗಿನ ಪಡೆಯುವ ಸಡಗರ, ಮಹಿಳೆಯರಿಗೆ ನವದಿನವೂ ವಿವಿಧ ಭಕ್ಷ್ಯ ಭೋಜನ ತಯಾರಿಸುವ, ಹೂಮಾಲೆ ಕಟ್ಟುವ, ಆರತಿ ತಟ್ಟೆ ಅಲಂಕರಿಸುವ ಜೊತೆಗೆ ಭಕ್ತಿಯಿಂದ ದೇವಿಯನ್ನು ಆರಾಧಿ ಸುವ ಖುಷಿ. ಪುರುಷರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಮಭಾಗಿಗಳು. ಹೀಗೆ ಉತ್ತರ ಕನ್ನಡದ ನಾನಾ ತಾಲೂಕುಗಳಲ್ಲಿ ನವರಾತ್ರಿ ವಿಭಿನ್ನವಾಗಿ ತೆರೆದುಕೊಳ್ಳುತ್ತದೆ.
ಸಾಂಸ್ಕೃತಿಕ ಕಲರವ: ದಸರಾ ಎಂದರೆ ಕೇವಲ ಹಬ್ಬವಲ್ಲ; ಅದು ವಿಜಯದ ನೆನಪು, ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹರಿಸಿ ಸೀತೆಯನ್ನು ಮರಳಿ ಕರೆತಂದ ವಿಜಯ, ದ್ವಾಪರಯುಗದಲ್ಲಿ ಪಾಂಡವರು ಕೌರವರ ವಿರುದ್ಧ ಸಾಧಿಸಿದ ಧರ್ಮದ ಜಯ, ಮತ್ತೊಂದೆಡೆ ಆದಿಶಕ್ತಿಯು ವಿವಿಧ ರೂಪಗಳಲ್ಲಿ ದುಷ್ಟಶಕ್ತಿಗಳನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸಿದ ಎಂಬುದು ಕಥನ. ಆದರೆ ವಿವಿಧತೆಯಲ್ಲಿ ಏಕತೆಯ ತತ್ವಸಾರುವ ನಮ್ಮ ದೇಶದಲ್ಲಿ ದಸರೆಯ ಸೊಗಡು ಎಲ್ಲೆಡೆ ಒಂದೇ ರೀತಿಯಲ್ಲಿಲ್ಲ, ಅಂತೆಯೇ ಉತ್ತರ ಕನ್ನಡದ ದಸರೆಯ ಆಚರಣೆಗೆ ಅದರದೇ ಆದ ವಿಶಿಷ್ಟ ಸಾಂಸ್ಕೃತಿಕ ಬಣ್ಣವಿದೆ. ಇಲ್ಲಿನ ಹಳ್ಳಿಗಳಲ್ಲಿ ದಸರೆಯ ಸಂದರ್ಭದಲ್ಲಿ ಊರಿನ ಬದುಕೇ ಹಬ್ಬದ ವಾತಾವರಣದಲ್ಲಿ ಮಿಂದೇಳುತ್ತದೆ. ಭಕ್ತಿ, ಸಂಪ್ರದಾಯ, ಮನರಂಜನೆ ಮತ್ತು ಪರಸ್ಪರ ಆತಿಥ್ಯ ಇವೆಲ್ಲದರಲ್ಲೂ ಸಡಗರ ಎದ್ದು ಕಾಣುತ್ತದೆ. ವಿಶೇಷವಾಗಿ ಹವ್ಯಕ ಸಮುದಾಯದ ಕೆಲವು ಊರುಗಳಲ್ಲಿ ಕಂಡುಬರುವ ಅಲಂಕೃತ ಆರತಿ ತಟ್ಟೆಗಳು ಈ ಆಚರಣೆಗೆ ಮತ್ತೊಂದು ಸೊಗಡನ್ನು ನೀಡುತ್ತವೆ. ಅರಿಶಿಣ ಕುಂಕುಮ, ಹೂವುಪತ್ರೆ, ರಂಗೋಲಿ, ಧಾನ್ಯಗಳಿಂದ ಅಲಂಕರಿಸಿದ ಆರತಿ ಹರಿವಾಣಗಳು ಪ್ರತಿದಿನ ಹೊಸರೂಪತಾಳಿ ಕಂಗೊಳಿಸುತ್ತವೆ.
ಇದರೊಂದಿಗೆ ಸಾಂಪ್ರದಾಯಿಕ ಹಾಡುಗಳು, ಭಕ್ತಿಗೀತೆಗಳು ಮತ್ತು ಒಂಬತ್ತು ದಿನಗಳೂ ಒಂದೊಂದು ವೈವಿಧ್ಯಮಯ ಸಿಹಿ ಖಾದ್ಯಗಳ ನೈವೇದ್ಯಗಳು ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ಸಂದರ್ಭದಲ್ಲಿ ಉತ್ತರ ಕನ್ನಡದ ದಸರೆಯ ಭಕ್ತಿಪರಂಪರೆಯನ್ನು ಸ್ಮರಿಸುವಾಗ ಸೋದೆಯ ಸ್ವರ್ಣವಲ್ಲಿ ಸಂಸ್ಥಾನದ ಶ್ರೀ ರಾಜರಾಜೇಶ್ವರಿ ದೇವಿಯ ಆರಾಧನೆ ಮಹತ್ವದ್ದು. ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿಗೆ ವಿವಿಧ ರೂಪಗಳಲ್ಲಿ ವಿಶೇಷ ಅಲಂಕಾರ ಮಾಡಿ ಪೂಜಿಸುವ ಸಂಪ್ರದಾಯದೊಂದಿಗೆ, ಶ್ರೀಪಾದಂಗಳವರಿಂದ ಅಲ್ಲಿ ನಡೆಯುವ ದಸರಾ ದರ್ಬಾರ್ ಕೂಡ ಭಕ್ತರಿಗೆ ವಿಶಿಷ್ಟ ಆಕರ್ಷಣೆ.
ಅಂದು ಪಗಡೆ, ಇಂದು ಯಕ್ಷಗಾನ
ದಸರೆಯ ಸಂದರ್ಭದಲ್ಲಿ ಅಹೋರಾತ್ರಿ ಪಗಡೆ ಆಟ ಈ ಹಿಂದೆ ಇಲ್ಲಿನ ನವರಾತ್ರಿ ಆಕರ್ಷಣೆಯಾಗಿತ್ತು. ಪಾಂಡವ ಕೌರವರ ಪಗಡೆಯ ನೆನಪನ್ನು ಹೊತ್ತುಕೊಂಡಿರುವ ಈ ಆಟದಲ್ಲಿ ಪೈಪೋಟಿ, ನಗು, ಮೋಜು ಎಲ್ಲವೂ ಬೆರೆತಿರುತ್ತಿತ್ತು. ಊರಿನ ಅರಳಿಕಟ್ಟೆಯ ಜಗಲಿ ಅಥವಾ ದೇವಸ್ಥಾನದ ಪ್ರಾಂಗಣವೇ ಆಟದ ಅಂಗಳವಾಗುತ್ತಿತ್ತು. ಈಗ ಇದರ ವೈಭವ ಇಲ್ಲವಾದರೂ ಬದಲಾದ ಹಬ್ಬದ ಆಚರಣೆ ಹೊಸ ಆಯಾಮಗಳಲ್ಲಿ ತೆರೆದುಕೊಂಡಿದೆ.ಆದರೆ ಅದೇ ಸಡಗರ ಉಳಿದಿದೆ. ಅಹೋರಾತ್ರಿ ಯಕ್ಷಗಾನ ಪ್ರದರ್ಶನಗಳು ಇಲ್ಲಿ ಸಾಮಾನ್ಯ. ಒಂಬತ್ತು ದಿನಗಳ ದೇವಿಯ ಆರಾಧನೆಯೂ ಅಷ್ಟೇ ಭಕ್ತಿಭರಿತ. ಪ್ರತಿದಿನ ಸಂಧ್ಯಾಕಾಲದಲ್ಲಿ ದುರ್ಗಾ ಸಪ್ತಶತಿ ಪಾರಾಯಣ, ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿ ಮೊದಲಾದ ಪಠಣಗಳಲ್ಲಿ ಮಹಿಳೆಯರು ಸಾಮೂಹಿಕವಾಗಿ ಭಾಗವಹಿಸುತ್ತಾರೆ. ಪ್ರಮುಖ ಆಧ್ಯಾತ್ಮಿಕ ಪ್ರವಾಸಿ ತಾಣ ಶಿರಸಿಯ ಮಾರಿಕಾಂಬೆಯನ್ನು ಈ ಸಮಯದಲ್ಲಿಕಣ್ಣುಂಬಿಕೊಳ್ಳುವುದೇ ಸೊಗಸು. ದೇವಿಯ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿನ ಪ್ರಮುಖ ಆಕರ್ಷಣೆ.
ಕುಮಾರಿಕಾ ಪೂಜೆ: ದಸರೆಯ ಆರಾಧನೆಯ ಭಾಗವಾಗಿ ಕುಮಾರಿಕಾ ಪೂಜೆಗೆ ವಿಶೇಷ ಮಹತ್ವವಿದೆ. ಕುಮಾರಿಯರ ಪಾದಗಳನ್ನು ತೊಳೆದು ಪೂಜಿಸಿ, ಅವರಿಗೆ ಹಾಲು, ಹಣ್ಣು ವಸ್ತ್ರ ಹಾಗೂ ದಕ್ಷಿಣೆಯನ್ನು ನೀಡಿ ಗೌರವಿಸುವುದು ಈ ಆಚರಣೆಯ ವಿಶೇಷತೆ. ಹಾಗೆಯೇ ನವರಾತ್ರಿಯ ಒಂಬತ್ತು ದಿನಗಳಲ್ಲಿ ಒಂದೊಂದು ದಿನ ಒಬ್ಬೊಬ್ಬರ ಮನೆಯಲ್ಲಿ ಮುತ್ತೈದೆಯರನ್ನು ನವದುರ್ಗೆಯರ ಸಂಕೇತವಾಗಿ ಭಾವಿಸಿ, ಅವರಿಗೆ ಭಕ್ತಿಯಿಂದ ವಿವಿಧ ಭಕ್ಷ್ಯಗಳ ಊಟ ಬಡಿಸಿ, ಹೂವು, ಹಣ್ಣು ವಸ್ತ್ರ ಹಾಗೂ ದಕ್ಷಿಣೆಯನ್ನು ನೀಡಿ ನಮಸ್ಕರಿಸುವ ಸಂಪ್ರದಾಯವೂ ಇದೆ. ಅವರ ಆಶೀರ್ವಾದ ಪಡೆದು ಅಖಂಡ ಸೌಭಾಗ್ಯವನ್ನು ಬೇಡುವ ಈ ಆಚರಣೆಯಲ್ಲಿ ಭಕ್ತಿ ಮಾತ್ರವಲ್ಲದೆ, ಹೆಣ್ಣಿನ ಸುಮಂಗಲೀ ಸ್ವರೂಪಕ್ಕೆ ನೀಡುವ ಗೌರವವೂ ಅಡಕವಾಗಿದೆ. ಇವೆಲ್ಲದರ ಜೊತೆಗೆ ಅನೇಕರ ಮನೆಗಳಲ್ಲಿ ಒಂಬತ್ತು ದಿನಗಳ ಕಾಲ ನಿರಂತರವಾಗಿ ಅಖಂಡ ನಂದಾದೀಪವನ್ನು ಬೆಳಗಿಸುವುದು ನವರಾತ್ರಿಯ ಪಾವಿತ್ರ್ಯವನ್ನು ಸಾರುತ್ತದೆ. ಹೀಗೆ ದೇವಿಯ ಆರಾಧನೆ ಕೇವಲ ದೇವಾಲಯದ ಪೂಜೆಗೆ ಸೀಮಿತವಾಗದೆ, ಮನೆಮನೆಗಳ ಬದುಕಿನಲ್ಲೂ ಭಕ್ತಿ ಮತ್ತು ಸಂಪ್ರದಾಯದ ಬೆಳಕನ್ನು ಬೀರುತ್ತದೆ.
