
Article · July 16, 2026
ಒಪ್ಪಂದ
--ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
ತಿಂಗಳ ಬೆಳಕಿನ ಅಂಗಳದಲ್ಲೀ
ಮಂಗಳಕರವಾಗಿಹ ಸಮಯ..
ಅಷ್ಟದಿಕ್ಕುಗಳ ಸಾಕ್ಷಿಯನಿಟ್ಟೂ
ಒಪ್ಪಂದವ ಮಾಡಿದ ವಿಷಯ..
ಹಗಲಿಗೆ ನಾನೂ ಇರುಳಿಗೆ ನೀನೂ
ಜಗವನು ಬೆಳಗುವ ಆ ಸಮಯ...
ಹುಣ್ಣಿಮೆ ನಿನಗೆ ಅಮಾವಾಸ್ಯೆಯು ನನಗೇ
ಎಂದನು ಸೂರ್ಯನು ಜಗದೊಡೆಯ...
ಒಪ್ಪಿದೆ ಎಂದೂ ಚಂದ್ರನು ಹಾಕಿದ
ಪತ್ರದ ಮೇಲ್ಗಡೆಯಲಿ ಸಹಿಯ...
ನಾನೂ ಒಪ್ಪಿದೆ ಎಂದನು ಸೂರ್ಯನು
ಪತ್ರದಿ ಬಿಂಬಿಸಿದನು ಸಹಿಯಾ....
ತಂಪಿನ ಬೆಳಕನು ನೀಡುವ ಚಂದ್ರಮ
ವಿಜೃಂಭಿಸಿದನು ಹುಣ್ಣಿಮೆ ದಿವಸ...
ಉಳಿದಂತೆಲ್ಲಾ ಮೆಲ್ಲನೆ ಹೊಳೆದನು
ಹಗಲೂ ಇರುಳೂ ಪ್ರತಿ ದಿವಸ....
ಜಗಮಗಿಸುತ ಜಗ ಬೆಳಗುವ ಸೂರ್ಯನು
ರಾರಾಜಿಸಿದನು ಪ್ರತಿ ದಿವಸ...
ಇರುಳಿನ ಸಮಯ ದಣಿದಿಹ ಸೂರ್ಯಗೆ
ವಿಶ್ರಾಂತಿಯ ಪಡೆಯುವ ಕೆಲಸ...
ಹಗಲೂ ನಿನಗೆ ರಾತ್ರಿಯು ನನಗೇ
ಎಂದನು ಚಂದ್ರನು ನಸುನಗುತಾ....
ಒಪ್ಪಿಗೆ ಎಂದನು ಸೂರ್ಯನು ಇದಕೇ
ಚಂದ್ರನ ಕೈಯನು ಕುಲುಕುತ್ತಾ ...
ಹಂಚಿದರಿಬ್ಬರು ಜಗಳವ ಮಾಡದೆ
ದುಡಿಯುವ ವಿಶ್ರಮಿಸುವ ಕೆಲಸ..
ಲಕ ಲಕ ಹೊಳೆಯುತ ಬಾನಂಗಳದಲಿ
ಮುಗಿಯದ ಕಾಯಕ ಪ್ರತಿ ದಿವಸ....
