
Article · November 9, 2026
ನರಕಚತುರ್ದಶಿ
ವೀಣಾ ಎಂ ಭಟ್
ಮುಂಜಾನೆಯ ಸಮಯ ಎಣ್ಣೆ ಹಚ್ಚಿದ ಪುಳಕ
ನರಕಾಸುರನ ವಧೆಯ ಪುಣ್ಯದ ಜಳಕ
ಗಂಗೆ ಯಮುನೆ ಸಿಂಧು ಗೋದಾವರಿ ನೆನೆದು
ತುಂಬಿದ ಹಂಡೆಯ ಪುಣ್ಯ ನದಿನೀರ ಜಳಕ
ಹಿಂದಿನ ಮುಸ್ಸಂಜೆಯಲಿ ಗಂಧ ಹಂಡೆಗೆ ಹಚ್ಚಿ
ಹೂಮಾಲೆ ಕಟ್ಟಿ ಜಲ ಪೂಜೆಯನು ಮಾಡಿ
ಶಂಖ ಊದುತ ಜಾಗಟೆ ನಾದ ಹಿಮ್ಮೇಳದಲಿ
ಪುಣ್ಯ ನದೀ ಜಲಗಳ ಹಂಡೆ ತುಂಬಾ ತುಂಬಿ
ಭಕ್ಷ್ಯಭೋಜ್ಯ ಹಲವು ಕಡಬುಗಳ ಉಪಹಾರ
ಭಾರೀ ರಸದೌತಣ ಮನೆಮಂದಿಯರು ಸೇರಿ
ಮಕ್ಕಳ ನೆಚ್ಚಿನ ಪಟಾಕಿ ದುರುಸುಗಳ ಬಾಣ
ದಿನವೆಲ್ಲ ಗಲಿಬಿಲಿಯು ಹಬ್ಬದ ಆಚರಣೆ
ಮನವೊಂದು ಮರ್ಕಟವು ಜಾರಿತು ಹಿಂದಕ್ಕೆ
ಇಂದು ಉಳಿದಿದೆ ಬರಿಯ ನೆನಪಿನ ಚುಕ್ಕೆ
ಮಕ್ಕಳೆಲ್ಲರು ಇಂದು ಬಹು ದೂರದ ಊರಿನಲಿ
ದೀಪಾವಳಿಯ ಹಬ್ಬವದು ಬಂದಾಗ ನಮಗಿಲ್ಲಿ
ದೀಪಾವಳಿ ದಿನವೆಲ್ಲ ಕಾಡಿತು ನೆನಪುಗಳು
ಬೇಡವಾಯಿತು ಮನಕೆ ಸಿಹಿತಿನಿಸ ಮೆಲ್ಲಲು
ಕಣ್ಣುಗಳು ಯಾತಕೋ ಬಹು ದೂರ ಸರಿದಾಗ
ನಿಟ್ಟುಸಿರ ದನಿಯೊಂದು ಒಡಲಾಳ ಸೇರಿತಾಗ
Creative Writings
