
Article · October 28, 2026
ನೆನಪಿನ ಗೋಡೆಯ ಮೇಲೆ ನೇತಾಡುವ ಬದುಕು
By Shylaja Bhat
ಶೈಲಜಾ ಭಟ್
ಒಂದು ದಿನ ಇಂದಿನ ದಿನವೂ ನಿನ್ನೆಯಾಗಿ, ಇಂದಿನ ನಾವೂ ನೆನಪಾಗಿ ಉಳಿಯುತ್ತೇವೆ.ಕಾಲದೊಂದಿಗೆ ಎಲ್ಲವೂ ಬದಲಾಗಬಹುದು; ಆದರೆ ಪ್ರೀತಿಯಿಂದ ಬದುಕಿದ ಕ್ಷಣಗಳು ಮಾತ್ರ ಕಾಲದ ಮಿತಿಯನ್ನು ಮೀರಿ ನೆನಪಾಗಿ ಉಳಿಯುತ್ತವೆ.
ಕಾಲ ಕಳೆದಂತೆ ಬದುಕು ನೆನಪಿನ ಪುಟಕ್ಕೆ ಸೇರುತ್ತದೆ. ಒಮ್ಮೆ ನಮ್ಮ ಕಣ್ಣೆದುರೇ ಜೀವಂತವಾಗಿದ್ದ ಕ್ಷಣಗಳೆಲ್ಲ, ದಿನಗಳು ಉರುಳಿದಂತೆ ಮನಸ್ಸಿನ ಪುಟಗಳಲ್ಲಿ ಚಿತ್ರಗಳಾಗಿ ಉಳಿಯುತ್ತವೆ. ಮನೆಯ ಗೋಡೆಯ ಮೇಲೆ ನೇತಾಡುವ ಹಳೆಯ ಫೋಟೋಗಳನ್ನು ನೋಡಿದಾಗ, ಆ ಚಿತ್ರಗಳ ಹಿಂದೆ ಅಡಗಿರುವ ನೂರಾರು ಕಥೆಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ನಗು, ಅಳು, ತುಂಟಾಟ, ಮುನಿಸು, ಪ್ರೀತಿ — ಎಲ್ಲವೂ ಮತ್ತೆ ಕಣ್ಣಮುಂದೆ ಬಂದು ನಿಂತಂತೆ ಭಾಸವಾಗುತ್ತದೆ. ಆಗ ಅನಿಸುವುದೊಂದೇ, ಬದುಕು ಎಷ್ಟು ಬೇಗ ಕಳೆದುಹೋಗುತ್ತದೆ!
ಬಾಲ್ಯವೆಂಬುದು ಹಾಗೆಯೇ. ಮತ್ತೆ ಮರಳಿ ಪಡೆಯಲಾಗದ ಸುಂದರವಾದ ಕಾಲ. ಅಜ್ಜಿ ಮನೆಯ ಅಂಗಳದಲ್ಲಿ ಆಡಿದ ಆಟಗಳು, ಅವಳು ಹೇಳುತ್ತಿದ್ದ ರಾಜಕುಮಾರನ, ರಾಕ್ಷಸನ ಕಥೆಗಳು, ಪ್ರೀತಿಯಿಂದ ಮಾಡಿಕೊಡುತ್ತಿದ್ದ ತಿಂಡಿಗಳು ಎಂದಿಗೂ ಮನದ ಮೂಲೆಯಲ್ಲಿ ಹಸಿರಾಗಿ ಉಳಿಯುತ್ತದೆ. ಕತ್ತಲಾದರೂ ಆಟವಾಡುತ್ತಾ ಕಾಲ ಕಳೆಯುತ್ತಿದ್ದ ದಿನಗಳು, ಕಥೆ ಕೇಳುತ್ತಾ ನಿದ್ದೆಗೆ ಜಾರಿದ ರಾತ್ರಿಗಳು — ಅದೆಲ್ಲ ನೆನಪಿಸಿಕೊಂಡರೆ ಮನಸ್ಸು ಮತ್ತೆ ಮಗುವಾಗುತ್ತದೆ.
ಅಂದಿನ ಮನೆಗಳಲ್ಲಿದ್ದ ಕತ್ತಲೆ ಕೋಣೆಗಳಿಗೂ ತಮ್ಮದೇ ಆದ ಆಕರ್ಷಣೆ ಇತ್ತು. ಹಗಲಿನಲ್ಲೂ ತಂಪಾಗಿರುತ್ತಿದ್ದ ಆ ಕೋಣೆಗಳಲ್ಲಿ ಧಾನ್ಯಗಳ ಚೀಲಗಳು, ಹಳೆಯ ಪೆಟ್ಟಿಗೆಗಳು, ಮಡಕೆಗಳು ಜಾಗ ಪಡೆದಿರುತ್ತಿದ್ದವು. ಆ ಕೋಣೆಯೊಳಗೆ ಹೋಗುವುದೆಂದರೆ ಒಂದು ರೀತಿಯ ಕುತೂಹಲ, ಕೆಲವೊಮ್ಮೆ ಭಯವೂ ಕೂಡ! ಸಂಜೆ ಕತ್ತಲಾಗುತ್ತಿದ್ದಂತೆ ಹೊತ್ತಿಕೊಳ್ಳುತ್ತಿದ್ದ ಚಿಮಿಣಿ ದೀಪದ ಮಂದ ಬೆಳಕು ಮನೆಯ ಗೋಡೆಗಳ ಮೇಲೆ ವಿಚಿತ್ರ ನೆರಳುಗಳನ್ನು ಮೂಡಿಸುತ್ತಿತ್ತು. ಆ ಬೆಳಕಿನಲ್ಲಿ ಮನೆಯವರೆಲ್ಲ ಕುಳಿತು ಮಾತನಾಡುತ್ತಿದ್ದ ಕ್ಷಣಗಳೇ ಒಂದು ಸುಂದರ ಅನುಭವವಾಗಿದ್ದವು. ಅಲ್ಲಿ ವಿದ್ಯುತ್ ದೀಪಗಳ ಬೆಳಕು ಇಲ್ಲದಿದ್ದರೂ, ಪ್ರೀತಿಯ ಹೊಳಪಿತ್ತು.
ಹಬ್ಬ ಹರಿದಿನಗಳ ಸಂಭ್ರಮ, ಮನೆಯವರೆಲ್ಲ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದ ಕ್ಷಣಗಳು,ಅಂಗಳದಲ್ಲಿ ಆಡಿದ ಆಟಗಳು, ಸಣ್ಣಪುಟ್ಟ ಜಗಳಗಳು, ಮತ್ತೆ ಒಂದಾಗುತ್ತಿದ್ದ ಕ್ಷಣಗಳು — ಇವೆಲ್ಲವೂ ಅಂದು ಸಾಮಾನ್ಯ ಸಂಗತಿಗಳಾಗಿದ್ದವು. ಅವುಗಳನ್ನು ಅನುಭವಿಸುತ್ತಿದ್ದಾಗ ಅವುಗಳ ಮಹತ್ವ ನಮಗೆ ತಿಳಿದಿರಲಿಲ್ಲ. ಆದರೆ ಇಂದು ಅದೇ ಕ್ಷಣಗಳು ಬದುಕಿನ ಅತ್ಯಮೂಲ್ಯ ಸಂಪತ್ತಾಗಿ ಕಾಣುತ್ತವೆ.
ಕಾಲ ಯಾರಿಗಾಗಿಯೂ ನಿಲ್ಲುವುದಿಲ್ಲ. ಬಾಲ್ಯ ಯೌವನವಾಗುತ್ತದೆ, ಯೌವನ ಪ್ರೌಢಾವಸ್ಥೆಗೆ ತಿರುಗುತ್ತದೆ. ಮನೆಗಳು ಬದಲಾಗುತ್ತವೆ, ಊರುಗಳು ಬದಲಾಗುತ್ತವೆ, ಜೀವನದ ಜವಾಬ್ದಾರಿಗಳು ಹೆಚ್ಚುತ್ತವೆ. ಒಮ್ಮೆ ನಮ್ಮದಾಗಿದ್ದ ಅಂಗಳದಲ್ಲಿ ಈಗ ಬೇರೆಯವರ ಹೆಜ್ಜೆಗಳಿರಬಹುದು. ನಾವು ಬೆಳೆದ ಮನೆಯಲ್ಲೀಗ ಹೊಸ ಬಣ್ಣ ಬಳಿದಿರಬಹುದು. ಆದರೆ ಮನಸ್ಸಿನೊಳಗೆ ಉಳಿದಿರುವ ಆ ಮನೆಯ ನೆನಪುಗಳಿಗೆ ಮಾತ್ರ ವಯಸ್ಸಾಗುವುದಿಲ್ಲ.
ಇಂದು ನಾವು ಬದುಕುತ್ತಿರುವ ಈ ಕ್ಷಣಗಳೂ ನಾಳೆ ನೆನಪುಗಳಾಗಲಿವೆ. ಈಗ ನಮ್ಮ ಸುತ್ತಲಿರುವ ಮಕ್ಕಳು ದೊಡ್ಡವರಾಗುತ್ತಾರೆ. ಅವರ ತುಂಟಾಟಗಳು, ಅವರ ಮುಗ್ಧ ಪ್ರಶ್ನೆಗಳು, ಅವರ ನಗು, ಅವರೊಂದಿಗೆ ಕಳೆದ ಸಂಜೆಯ ಕ್ಷಣಗಳು — ಒಂದಲ್ಲ ಒಂದು ದಿನ ನಮ್ಮ ನೆನಪಿನ ಪುಟಗಳಲ್ಲಿ ಸ್ಥಾನ ಪಡೆಯುತ್ತವೆ. ಹೀಗಿರುವಾಗ ಇಂದಿನ ಕ್ಷಣಗಳನ್ನು ನಾಳೆಯ ನೆನಪುಗಳಿಗಾಗಿ ಸುಂದರವಾಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ.
ಬದುಕು ಎಂದರೆ ಕೇವಲ ಮುಂದೆ ಸಾಗುವ ಪಯಣವಲ್ಲ; ಹಿಂದೆ ತಿರುಗಿ ನೋಡಿದಾಗ ಮನಸ್ಸಿಗೆ ನೆಮ್ಮದಿ ನೀಡುವ ನೆನಪುಗಳ ಸಂಗ್ರಹವೂ ಹೌದು.ಗೋಡೆಯ ಮೇಲೆ ನೇತಾಡುವ ಫೋಟೋಗಳು ನಮ್ಮ ಬದುಕಿನ ಕೆಲವು ಕ್ಷಣಗಳನ್ನು ಮಾತ್ರ ತೋರಿಸಬಹುದು. ಆದರೆ ಅವುಗಳ ಹಿಂದೆ ಅಡಗಿರುವ ಪ್ರೀತಿ, ಸಂಬಂಧ, ತ್ಯಾಗ, ಸಂತೋಷ ಮತ್ತು ನೋವಿನ ಕಥೆಗಳನ್ನು ನಮ್ಮ ಹೃದಯ ಮಾತ್ರ ಓದಬಲ್ಲದು.
ಒಂದು ದಿನ ಇಂದಿನ ದಿನವೂ ನಿನ್ನೆಯಾಗಿ, ಇಂದಿನ ನಾವೂ ನೆನಪಾಗಿ ಉಳಿಯುತ್ತೇವೆ.ಕಾಲದೊಂದಿಗೆ ಎಲ್ಲವೂ ಬದಲಾಗಬಹುದು; ಆದರೆ ಪ್ರೀತಿಯಿಂದ ಬದುಕಿದ ಕ್ಷಣಗಳು ಮಾತ್ರ ಕಾಲದ ಮಿತಿಯನ್ನು ಮೀರಿ ನೆನಪಾಗಿ ಉಳಿಯುತ್ತವೆ.
ಕಾಲಾಯ ತಸ್ಮೈ ನಮಃ 🙏
