Karada Vishwa

Article · November 17, 2026

ಸಮಯ ಕಳ್ಳರಿಹರು... ಎಚ್ಚರಿಕೆ!

By ದಿವ್ಯಾ ಶಿರಂತಡ್ಕ

(ಪ್ರಬಂಧ) ದಿವ್ಯಾ ಬಿ ಶಿರಂತಡ್ಕ

ಅದೊಂದು ದಿನ ಸಮಾರಂಭವೊಂದಕ್ಕೆ ಹೋಗಿದ್ದೆ. ಅಲ್ಲಿಗೆ ನನ್ನ ಆತ್ಮೀಯ ಗೆಳತಿಯೂ ಬಂದಿದ್ದಳು. ಅಲ್ಲಿಗೆ ತಲುಪುತ್ತಿದ್ದಂತೆ ದೂರದಿಂದ ಗೆಳತಿ ಹಾರೈಸುತ್ತಲೇ ಹತ್ತಿರ ಬಂದಳು. ನನ್ನ ಸಂತಸ ಹೇಳತೀರದು. ಇನ್ನೇನು ಅವಳ ಕೈ ಹಿಡಿದು ಸಾಗಿ ಸಾವಿರ ವಿಷಯ ಮಾತಾಡಬೇಕು ಎಂದು ಅಂದುಕೊಳ್ಳುತ್ತಿರುವಾಗಲೇ ಮಧ್ಯದಲ್ಲಿ ಬಂದವರೇ ಆ ಆಸಾಮಿ. ಕುಶಲೋಪರಿಯ ಒಂದೆರಡು ಮಾತನಾಡಿದ ಅವರು ಅನಂತರ ಬ್ರೇಕ್ ಇಲ್ಲದ ಗಾಡಿಯಂತೆ ಒಂದೇ ಸಮನೆ ವಟಗುಟ್ಟತೊಡಗಿದರು. ನನ್ನ ಮನಸ್ಸು ಗೆಳತಿಯಲ್ಲಿ. ಕಿವಿ ಅನಿವಾರ್ಯವಾಗಿ ಇವರಿಗೆ ಕೊಡಬೇಕಾಯಿತು. ದೃಷ್ಟಿ ದೂರದ ನೆಲ ನೋಡುತ್ತಿತ್ತು. ಅವರಿಂದ ತಪ್ಪಿಸಿಕೊಳ್ಳುವ ಮಾರ್ಗ ಹುಡುಕುತ್ತಿದ್ದೆ. ಇಂದಿನ ಝೆನ್ ಜಿ ಗಳಾದರೆ ಯಾವಾಗಲೇ ಅವರ ಮಾತನ್ನು ಅಲ್ಲಗಳೆದು ಮುಂದೆ ಸಾಗುತ್ತಿದ್ದರು. ಆದರೆ ನಮ್ಮದು ಸ್ವಲ್ಪ ಹಳೆ ಸ್ವಭಾವ ನೋಡಿ... ಬಲವಂತದ ಮಾಘಸ್ನಾನ ಹಲವು ಸಂದರ್ಭದಲ್ಲಿ ಅಭ್ಯಾಸವಾಗಿಬಿಟ್ಟಿತ್ತು. ಎದುರಿನವರನ್ನು ನಿರ್ಲಕ್ಷಿಸುವ ಮನಸ್ಸಾಗದೆ ಸುಮಾರು ಅರ್ಧ ಗಂಟೆಯ ನಂತರ ಏನೋ ಒಂದು ಸಬೂಬು ಸಿಕ್ಕಿ ಅವರಿಂದ ಪಾರಾದೆ. ಅಷ್ಟಕ್ಕೂ ಅವರು ಮಾತನಾಡಿದ್ದಾದರೂ ಏನು? ಅದರಿಂದ ತನಗೆ ಏನಾದರೂ ಲಾಭ? ಆತ್ಮೋನ್ನತಿ? ಊಹುಂ...ಏನೂ ಇಲ್ಲ....ಪರರ ದೋಷಾರೋಪಣೆ, ಅವರ ಬಗ್ಗೆ ಹೊಗಳಿಕೆ ಇವೇ ಮುಂತಾದವುಗಳು ಅವರ ಮಾತಿನ ವಿಷಯವಾಗಿತ್ತು. ನನಗಂತೂ ಅದರಿಂದ ಎಳ್ಳು ಕಾಳಿನ ಮೊನೆಯಷ್ಟೂ ಪ್ರಯೋಜನ ಇದ್ದಿರಲಿಲ್ಲ!

ಇಂಥಹ ಅನುಭವ ಹೊಸದೇನಲ್ಲ. ಕೆಲವರು 'ಬಾಯ್ದೆರೆದರೆ ಬಣ್ಣಗೇಡು' ಎನ್ನುವ ಮಾತಿನಂತೆ ತಮ್ಮ ಸಂಕುಚಿತ ಮನಸ್ಸಿಗೆ ಅನುಗುಣವಾಗಿ ‌ ಏನೇನನ್ನೋ ಬಡಬಡಿಸುತ್ತಿರುತ್ತಾರೆ. ಎದುರಿದ್ದವರಿಗೆ ಅದು ಬೇಕೇ ಎನ್ನುವುದನ್ನು ಕೊಂಚವೂ ಯೋಚಿಸುವುದಿಲ್ಲ. ಬಾವಿಗೆ ಬಿದ್ದರೂ ಇಂಥವರ ಬಾಯಿಗೆ ಬೀಳಬಾರದು ಎಂದು ಎಷ್ಟೋ ಬಾರಿ ನನಗನಿಸಿದ್ದಿದೆ.

ಗೀತೆಯಲ್ಲಿ ಒಂದು ಶ್ಲೋಕ ಬರುತ್ತದೆ.

ಅನುದ್ವೇಗಕರಂ ವಾಕ್ಯಂ
ಸತ್ಯಂ ಪ್ರಿಯಹಿತಂ ಚ ಯತ್|
ಸ್ವಾಧ್ಯಾಯಾಭ್ಯಸನಂ ಚೈವ
ವಾಙ್ಮಯಂ ತಪ ಉಚ್ಯತೇ ||
‌ ‌
ಮಾತು ಎಂದರೆ ತಪಸ್ಸಿನಂತೆ. ಅದು ಉದ್ವೇಗ ರಹಿತವಾಗಿ, ಸತ್ಯವಾಗಿ, ಪ್ರಿಯವಾಗಿ, ಹಿತವಾಗಿ, ಚೆನ್ನಾಗಿ ಜ್ಞಾನಾರ್ಜನೆ ಮಾಡಿ ಹಾಗೂ ಸ್ವಾಧ್ಯಾಯದಿಂದ ಮೂಡಿ ಬರಬೇಕಂತೆ. ಆದರೆ ಅಂತೆ ಮಾತನಾಡುವವರ ಸಂಖ್ಯೆ ತೀರಾ ವಿರಳ. ಕೇಳುಗರಲ್ಲಿ ಆಸಕ್ತಿ ಮೂಡಿಸಿ ಒಂದಿಲ್ಲೊಂದು ರೀತಿಯಲ್ಲಿ ಅವರ ಜ್ಞಾನ ಹೆಚ್ಚುವಂತೆ ಅಥವಾ ಕಡೆ ಪಕ್ಷ ಮನಸ್ಸಿಗೆ ಮುದ ನೀಡುವಂತೆಯಾದರೂ ಇರಬೇಕು ಆಡುವ ಮಾತು. ಇಲ್ಲದಿದ್ದರೆ ಅದು ಕೇವಲ ಸಮಯ ವ್ಯರ್ಥ ಮಾಡುವ ಸಾಧನವಾದೀತಷ್ಟೆ.

ಕಬೀರರು ತಮ್ಮ ಒಂದು ದೋಹೆಯಲ್ಲಿ
'ಮಾತು ಅಮೂಲ್ಯ ಎನ್ನುವುದನ್ನು ಬಲ್ಲವನೇ ಬಲ್ಲ
ಹೃದಯದ ತಕ್ಕಡಿ ತೂಗಿ ತೂಗಿ ಬಾಯಿಯ ನೀ ತೆರೆಯೋ' ಎಂದಿದ್ದಾರೆ.

ಆದರೆ ತಾವಾಡುವ ಮಾತನ್ನು ಅಳೆದು ತೂಗಿ ಮಾತನಾಡುವವರು ಎಷ್ಟು ಜನ?! ಕೆಲವು ಹಿರಿಯರನ್ನು ಗಮನಿಸಿರಬಹುದು. ಅವರು ತಮ್ಮ ಕಾಲದ ವಿಚಾರಗಳನ್ನೇ ನೂರಾರು ಬಾರಿ ಹೇಳುತ್ತಲೇ ಇರುತ್ತಾರೆ. ಎದುರಿಗಿದ್ದವರು ಅವರಿಂದ ಅದು ಹೇಗೋ ತಪ್ಪಿಸಿಕೊಳ್ಳುತ್ತಾರೆ. ಕಾರಣ ಅದನ್ನು ಅವರು ಹಿಂದೆ ಅದೆಷ್ಟೋ ಬಾರಿ ಹೇಳಿರುತ್ತಾರೆ. ಅತಿಯಾಗಿ ಭೂತಕಾಲದ ವಿಚಾರಗಳನ್ನೇ ಹೇಳುವುದರಿಂದ ಆಗುವ ಲಾಭವಾದರೂ ಏನು? 'ಸತ್ತ ಎಮ್ಮೆಗೆ ಸೇರುಗಟ್ಲೆ ಹಾಲಿತ್ತು' ಎನ್ನುತ್ತಾ ಇದ್ದರೆ ಏನು ಲಾಭ?! ವರ್ತಮಾನದಲ್ಲಿ ಬೇಕಾದರೆ ಹಾಲಿಗೆ ಬೇರೆಯೇ ವ್ಯವಸ್ಥೆ ಮಾಡಬೇಕಾಗುತ್ತದೆ.
ನಮ್ಮ ಬಂಧು ಒಬ್ಬರಿಗೆ ಅತಿಯಾಗಿ ಮಾತನಾಡುವ ಚಪಲ. ಸಿಕ್ಕವರನ್ನು ಅವರು ಸುಲಭವಾಗಿ ಬಿಡುವುದಿಲ್ಲ. ಅವರ ಮಾತಿನ ಓಘ ಹೇಗೆ ಸಾಗುತ್ತದೆಂದರೆ ಕೇಳುವವರಿಗೆ ಮಧ್ಯದಲ್ಲಿ ಒಂದು ಅಕ್ಷರವನ್ನೂ ಹೇಳಲು ಅವರು ಬಿಡರು. ಇನ್ನೊಬ್ಬರ ಅಭಿಪ್ರಾಯಕ್ಕೆ ಅವರಲ್ಲಿ ಜಾಗವೇ ಇಲ್ಲ. ಅವರದ್ದು ಏನಿದ್ದರೂ ನಾನ್ ಸ್ಟಾಪ್ ಬಸ್ಸಿನಂತೆ... ಅದಕ್ಕೆ ವೇಗಮಿತಿಯೂ ಇಲ್ಲ! ಅವರನ್ನು ಕಂಡಾಗ ತಪ್ಪಿಸಿಕೊಳ್ಳುವವರೇ ಹೆಚ್ಚು. 'ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು' ಅಂತಾರಲ್ಲ ಹಾಗೆ.

ಇವರಕ್ಕಿಂತ ಅಪಾಯಕಾರಿ ಆದಂತಹ ಇನ್ನೊಂದು ವರ್ಗ ಇರುತ್ತದೆ. ಅವರದ್ದು ದ್ವಂದ್ವಾರ್ಥದ ಮಾತು. ಜೊತೆಗೆ ಎದುರಿನವರನ್ನು ಅವರ ಖೆಡ್ಡಾಕ್ಕೆ ಬೀಳಿಸುವ ತಂತ್ರ! ಇಂಥವರು ಎದುರಾದಾಗ ಮೈಯೆಲ್ಲಾ ಕಣ್ಣಾಗಿರುವುದೇ ಜಾಣ್ಮೆ. ಹೀಗೆ ನಮ್ಮ ಮನಸ್ಸನ್ನೂ ಜೊತೆಗೆ ಅಮೂಲ್ಯವಾದ ಸಮಯವನ್ನೂ ಕೊಳ್ಳೆ ಹೊಡೆಯುವ ಇಂಥವರ ಬಗ್ಗೆ ಕೆ.ಸಿ ಶಿವಪ್ಪ ಅವರು ತಮ್ಮ ಚೌಪದಿಯಲ್ಲಿ ಹೀಗೆ ಹೇಳಿದ್ದಾರೆ;

ಇದ್ದಾರೆ ಬಳಿಯಲ್ಲೆ ಸಮಯ ಕಳ್ಳರು, ಜೋಕೆ!
ಜೂಜಾಟವಾಡುತ್ತ ಕಿಸೆಯ ಕದಿಯುವವರು.
ಕಾಲಕಿಸೆಗಿಂತಾವ ಮಿಗಿಲಾದ ಚೀಲವಿದೆ?
ಕಾಲ ಬಾಳಿನ ಆಸ್ತಿ- ಮುದ್ದುರಾಮ....

ಎಷ್ಟು ಸತ್ಯ ಅಲ್ವಾ! ನಮ್ಮ ಜೀವಿತದ ಒಂದು ಕ್ಷಣವೂ ಮರಳಿ ಬರುವುದಿಲ್ಲ. ನಮ್ಮ ಕಾಲಕಿಸೆಗೆ ಕನ್ನ ಹಾಕುವವರ ಬಗ್ಗೆ ಜಾಗೃತರಾಗೋಣ ಯಾಕೆಂದರೆ ಅಂತಹ ಚೋರರನ್ನು ಯಾವ ಪೊಲೀಸರೂ ಹಿಡಿಯಲಾರರು! ಅಂತಹವರಿಂದ ತಪ್ಪಿಸಿಕೊಳ್ಳಬೇಕಾದದ್ದು ನಾವೇ!!!







Creative Writings