Karada Vishwa

Article · July 5, 2026

ಮಳೆ

✍️ಶ್ರೀವಿದ್ಯಾ ಎಸ್ ಗೋಖಲೆ

ಮಳೆ ಸುರಿಯುತ್ತಲೇ ಇದೆ

ಭವ ಭಾವಗಳ ಹಂಗಿಲ್ಲದೇ…

ಒಡೆದ ಹಂಚುಗಳ ಜೊತೆ ಹೊಂದಾಣಿಕೆಯ ಪ್ರಯತ್ನ ಮಾಡುತ್ತಲೇ

ಇರುವಳು ಮನೆಯೊಡತಿ

ಮನೆಯೊಳಗೆ ನೀರು ಬರದಂತೆ

ಮನದಲ್ಲಿ ಪ್ರಾರ್ಥನೆಯ ಸಂತೆ..//

ನೀರು ಬರಲಿ ಕಾಗದದ ದೋಣಿ ಇನ್ನೂ

ವೇಗ ಪಡೆಯಲಿ

ಶಾಲೆಯ ಪಾಟೀಚೀಲ ನೆನೆಯಲಿ

ರಜಾ ಸಿಗಲಿ

ಅಲ್ಲೊಂದು ಪುಟ್ಟ ಮನ ಬಯಸುತ್ತಿದೆ..

ಯಾವುದೇ ಪರಿಪಾಟಲುಗಳ

ಅರಿವಿಲ್ಲದಂತೆ..//

ಮನೆಯ ಯಜಮಾನ ಸೂರು ನೋಡುತ

ಮರುಗುತಿಹನು

ಹೀಗೇ ಮಳೆ ಸುರಿದರೆ ಹೊಟ್ಟೆಯ ಗತಿಯೇನು?

ಮನದಿ ಮನೆಯವರ ಹಿಟ್ಟಿನ ಚಿಂತೆ

ಕಣ್ಣೀರ ಕಟ್ಟೆ ಒಡೆದು ಹೃದಯ ಜಲಾವೃತಗೊಂಡಂತೆ..//

ಮಳೆ ಸುರಿಯುತ್ತಲೇ ಇದೆ

ಹೊತ್ತು ಗೊತ್ತಿಲ್ಲದಂತೆ

ಕೊನೆ ಮೊದಲೇ ಇಲ್ಲದಂತೆ….//

Creative Writings