Karada Vishwa

Article · October 18, 2026

ಅನ್ನ ....ಚೆಲ್ಲುವ ಮುನ್ನ

By ದಿವ್ಯಾ ಶಿರಂತಡ್ಕ

ದಿವ್ಯಾ ಬಿ ಶಿರಂತಡ್ಕ

ಯಾವುದೇ ಸಮಾರಂಭಕ್ಕೆ ಹೋದರೂ ಊಟ ಮಾಡುತ್ತಲೇ ಅಕ್ಕಪಕ್ಕದವರ ಎಲೆಗಳ ಮೇಲೆ ಒಮ್ಮೆ ಕಣ್ಣಾಡಿಸುವುದು ನಾನು ಬೆಳೆಸದೇ ಬಂದ ಒಂದು ಅಭ್ಯಾಸ. ವ್ಯಕ್ತಿಯೊಬ್ಬನ ವ್ಯಕ್ತಿತ್ವ ಊಟದ ರೀತಿ ನೀತಿಯಲ್ಲೂ ಅಡಗಿದೆ ಎಂದು ಹಲವು ಬಾರಿ ನನಗೆ ಅನಿಸಿದ್ದೂ ಇದೆ. ಕೆಲವೊಮ್ಮೆ ಎಂಟ್ಹತ್ತು ವರ್ಷದ ಪುಟ್ಟ ಮಕ್ಕಳ ತಾಯಿಯಂದಿರು ಮಗುವಿನ ಜೊತೆ ಊಟಕ್ಕೆ ಕುಳಿತಾಗ ನನ್ನ ನೋಟ ವಿಶೇಷವಾಗಿ ಅವರನ್ನು ಗಮನಿಸುತ್ತಿರುತ್ತದೆ. ಸಮಾರಂಭ ಎಂದರೆ ಹತ್ತಾರು ರೀತಿಯ ಭಕ್ಷ್ಯ ಗಳು, ವ್ಯಂಜನಗಳು ಇದ್ದೇ ಇರುತ್ತದೆ. ಕೆಲವರು ತಮ್ಮ ಮಕ್ಕಳ ಎಲೆ ತುಂಬಾ ಇಕ್ಕಿಸಿ ಕೊನೆಗೆ ಆ ಮಗು ಒಂದೆರಡು ತುತ್ತು ತಿಂದೋ, ಒಂದೆರಡು ವ್ಯಂಜನಗಳನ್ನು ನೆಕ್ಕಿಯೋ ಊಟ ಮುಗಿಸಿ ಅಂತೆಯೇ ಎಲೆಯನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿಡುವುದನ್ನು ಕಂಡಿದ್ದೇನೆ. ಸಂಸ್ಕಾರ ಎನ್ನುವುದು ಶುರುವಾಗಬೇಕಾದ್ದು ಮನೆಯಿಂದ ಹಾಗೂ ಅತಿ ಮುಖ್ಯವಾಗಿ ತಾಯಿ ಎಂಬ ಮಹಾನ್ ಗುರುವಿನಿಂದ. ಊಟ ಮಾಡುವುದು ಒಂದು ಕಲೆ, ಅದನ್ನು ಮೊದಲು ಕಲಿಸಬೇಕಾದದ್ದೇ ಮಕ್ಕಳಿಗೆ. ಒಂದೊಂದು ತುತ್ತಿನ ಮಹತ್ವ, ಸೇವಿಸುವ ರೀತಿ ಎಲ್ಲವೂ ಪ್ರೀತಿಯಿಂದ ತಿಳಿಸಿದಾಗಲಷ್ಟೇ ಆ ಮಗುವಿಗೆ ತಿನ್ನುವ ಆಹಾರದಲ್ಲಿ ಪ್ರೀತಿ ಹುಟ್ಟುತ್ತದೆ. ಮನೆಯಲ್ಲಿ ಮಗುವಿಗೆ ಊಟ ಕೊಡುವಾಗ ಟಿ.ವಿ ಯಾ ಮೊಬೈಲಿನಲ್ಲಿ ಕಾರ್ಟೂನ್ ವೀಕ್ಷಣೆ ಮುಂತಾಗಿ ಅಭ್ಯಾಸ ಮಾಡಿದರೆ ಮಗುವಿಗೆ ತಾನು ಏನು ತಿನ್ನುತ್ತಿದ್ದೇನೆ ಎನ್ನುವ ಪ್ರಾಥಮಿಕ ಅರಿವಾದರೂ ಹುಟ್ಟುವುದು ಹೇಗೆ?! ಅದರಲ್ಲಿ ಪ್ರೀತಿ ಬೆಳೆಯುವುದಾದರೂ ಹೇಗೆ?!
ನನ್ನ ಆತ್ಮೀಯರೊಬ್ಬರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಆಗ ಅವರ ಮನೆಯಲ್ಲಿ ಸಮಾರಂಭಗಳಾದರೆ ಎಂಜಲೆಲೆಗಳನ್ನೆಲ್ಲ ಒಂದೇ ಕಡೆ ರಾಶಿ ಹಾಕುತ್ತಿದ್ದರಂತೆ. ಅದೇ ಸಮಯಕ್ಕೆ ಕಾದು ಕುಳಿತಿರುವವರಂತೆ ಸಮಾಜದ ಒಂದು ಕೆಳ ಸ್ಥರದ ವರ್ಗ ಎಂದು ಕರೆಯಲ್ಪಡುತ್ತಿದ್ದ ಸಮೂಹ ಓಡಿ ಬಂದು ಅದರಲ್ಲಿ ಉಳಿದದ್ದನ್ನೆಲ್ಲಾ ಸಂಗ್ರಹಿಸಿ ತೆಗೆದುಕೊಂಡು ಹೋಗಿ ತಿನ್ನುತ್ತಿದ್ದರಂತೆ. ಅದನ್ನು ಕಂಡ ಅವರಿಗೆ ತುಂಬಾ ದುಃಖವಾಗುತ್ತಿತ್ತಂತೆ. ಆದರೆ ಪುಟ್ಟ ಮಕ್ಕಳ ಮಾತಿಗೆ ಬೆಲೆ ಕೊಡುವವರಾದರೂ ಯಾರು? ಈಗಲೂ ಆ ದೃಶ್ಯಗಳು ಮನಸ್ಸಿನಲ್ಲಿ ಹಸಿರಾಗಿದೆ ಎನ್ನುತ್ತಾರೆ ಅವರು. ಒಂದು ಕಡೆಯಲ್ಲಿ ವೈಭವೋಪೇತ ಆಹಾರ ಲೋಕ ಇನ್ನೊಂದೆಡೆ ತುತ್ತು ಅನ್ನಕ್ಕೂ ಪರದಾಡುತ್ತಿರುವ ದೈನೇಸಿ ಬದುಕು. ಎಂತಹ ವೈರುಧ್ಯ ನೋಡಿ! "ಹಸಿವು" ಎನ್ನುವುದು ಎಲ್ಲರಿಗೂ ಒಂದೇ. ಒಂದೊಂದು ಕ್ಷಣ ಕಳೆದಾಗಲೂ ಅದರ ತೀವ್ರತೆ ಅನುಭವಿಸುವುದೇ ಕಷ್ಟ. ಎಸ್ ಎಲ್ ಭೈರಪ್ಪ ಅವರು ಭಿಕ್ಷಾನ್ನದ ಮೂಲಕ ಹೊಟ್ಟೆ ತುಂಬಿಸಿಕೊಂಡು ಜ್ಞಾನಾರ್ಜನೆ ಮಾಡಿದವರು. ಅವರ ಆತ್ಮಕಥೆ 'ಭಿತ್ತಿ'ಯಲ್ಲಿ ಆಹಾರಕ್ಕಾಗಿ ಅವರು ಮಾಡಿಕೊಂಡ ವ್ಯವಸ್ಥೆ, ಅನುಭವಿಸಿದ ಪಾಡು ಓದಿದರೆ ಎಂತಹವರಿಗೂ ಒಂದೊಂದು ತುತ್ತಿನ ಮೌಲ್ಯವೂ ಮನವರಿಕೆಯಾದೀತು. ಹಾಗೆ ಕಷ್ಟಪಟ್ಟು ಓದಿದವರ ಸಾಲು ಆ ಕಾಲದಲ್ಲಿ ಬಹು ದೊಡ್ಡದೂ ಇತ್ತು. ಆದರೆ ಕಾಲ ಬದಲಾದಂತೆ, ಜನರ ಜೀವನಮಟ್ಟ ಸುಧಾರಿಸಿದಂತೆ ಆಹಾರಕ್ಕಾಗಿ ಅಲೆದಾಡುವವರ ಸಂಖ್ಯೆ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ ಆದರೂ ಆಫ್ರಿಕಾದಂತಹ ಕೆಲವು ಹಿಂದುಳಿದ ದೇಶಗಳು ಅಥವಾ ಭಾರತದಲ್ಲೇ ಇರುವಂತಹ ನಿರ್ಗತಿಕರು ಇನ್ನೂ ಜಠರಾಗ್ನಿಯನ್ನು ತಣಿಸಲು ವಿಫಲರಾಗುತ್ತಲೇ ಇದ್ದಾರೆ. ಹೀಗೆ ವಿಶ್ವದಾದ್ಯಂತ ಸುಮಾರು 65 ಕೋಟಿ ಜನರಿಗೆ ಹೊಟ್ಟೆ ತುಂಬ ಆಹಾರ ಸಿಗುತ್ತಿಲ್ಲ ಎಂದರೆ ಅದು ಸಿಗುತ್ತಿರುವ ನಾವು ಅದೆಷ್ಟು ಸುಖಿಗಳು ಎಂದು ನಮ್ಮನ್ನು ಹೇಳಬಹುದು. ಆದರೆ ಆಹಾರ ಸೇವಿಸುವ ಹಕ್ಕು ನಮಗಿದೆಯೇ ಹೊರತು ಅದನ್ನು ಪೋಲು ಮಾಡುವುದಲ್ಲ. ಅನ್ನ ಚೆಲ್ಲುವ ಬದಲು ಹಿತಮಿತವಾಗಿಯೇ ಕೇಳಿದರೆ ಚೆಲ್ಲುವ ಪ್ರಮೇಯವೇ ಇಲ್ಲ. ಅಂತೆಯೇ ಸಮಾರಂಭದಲ್ಲಿ ಬಡಿಸುವವರು ಅನಗತ್ಯ ಒತ್ತಾಯಿಸದೆ ಜನರ ಹೊಟ್ಟೆಯನ್ನೂ ಮನವನ್ನೂ ತಣಿಸಬೇಕು. ಉತ್ತಮ ಆಹಾರಾಭ್ಯಾಸ ಮನೆಯಲ್ಲಿ ರೂಢಿಯಾದರೆ ಎಲ್ಲಿ ಹೋದರೂ ಅದು ಹಿಂಬಾಲಿಸುತ್ತದೆ.‌
ದಾನಗಳಲ್ಲೂ ಶ್ರೇಷ್ಠದಾನ ಎಂದರೆ ಅದು ಅನ್ನದಾನವೇ ಹೌದು. ಗೀತೆಯಲ್ಲೂ 'ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ |ಯಜ್ಞಾದ್ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ ॥ ಎನ್ನುವ ಶ್ಲೋಕ ಬರುತ್ತದೆ. ಇದರಲ್ಲಿ ಈ ಪ್ರಕೃತಿಯಲ್ಲಿರುವ ಎಲ್ಲ ಜೀವಿಗಳ ಪರಸ್ಪರ ಅವಲಂಬನೆ ಮತ್ತು ಜೀವನದ ಚಕ್ರವನ್ನು ವಿವರಿಸುತ್ತದೆ. ಜೀವಿಗಳು ಬದುಕಲು ಆಹಾರ ಬೇಕು, ಆಹಾರಕ್ಕೆ ಮಳೆ ಬೇಕು, ಮಳೆಗೆ ಯಜ್ಞ-ತ್ಯಾಗದ ಮನೋಭಾವದ ಕರ್ಮಗಳು ಬೇಕು ಎಂದು ಇದು ತಿಳಿಸುತ್ತದೆ. ಆಹಾರ ಸೃಷ್ಟಿಯ ಜೊತೆ ಅದು ಪೋಲಾಗದಂತೆ ಮನದಲ್ಲೇ ಪ್ರತಿಜ್ಞೆ ಮಾಡೋಣ. ಇಷ್ಟೆಲ್ಲಾ ನೆನಪಾಗಲು ಕಾರಣ ಅಕ್ಟೋಬರ್ 16 ವಿಶ್ವ ಆಹಾರ ದಿನ.'ಆಹಾರ' ಈ ವಿಶ್ವದ ಪ್ರತಿಯೊಬ್ಬರ ಉದರ ತಣಿಸಲಿ ಎನ್ನುವುದೇ ಈ ಹೊತ್ತಿನ ಹಾರೈಕೆ.





Creative Writings