
Article · June 13, 2026
ಒಗ್ಗರಣೆ
(ಲಲಿತ ಪ್ರಬಂಧ) ✍️ ದಿವ್ಯಾ ಶಿರಂತಡ್ಕ
ರೀ, ಒಂದೇ ನಿಮಿಷ, ಒಮ್ಮೆ ಒಳಹೋಗಿ ಒಗ್ಗರಣೆ ಹಾಕಿ ಬರುವೆ ಎಂದು ಅದೇನೋ ಕೆಲಸ ಹೇಳಿದ ಪತಿ ದೇವರಲ್ಲಿ ವಿನಂತಿಸಿ ಒಳ ಓಡಿದ್ದೆ. 'ಕೆಲಸ ಕಳ್ಳಿ' ಅದೇನೋ ಕುಂಟು ನೆಪ ಹೇಳಿ ಓಡಿದಳಪ್ಪ ...ಎಂದು ನಾ ಒಳ ಹೋದೊಡನೆ ಗುಣಗಾನ?! (ಗೊಣಗಾಟ) ಮಾಡುತ್ತಿದ್ದ ಇವರ ಮಾತಿಗೆ ಮಗಳ ಒಗ್ಗರಣೆ.
ಬಾಗಿಲ ಸಂದಿಯಲ್ಲಿ ಮೈಯನ್ನೇ ಕಿವಿಯಾಗಿಸಿ ನಿಂತಿದ್ದ ನನ್ನೆದೆಯೊಳಗೆ ಸಾಸಿವೆ ಒಡೆಯುತ್ತಿರುವ ಚಟಪಟ ಸದ್ದು. ಮುಖ ಸಿಂಡರಿಸಿ ಒಗ್ಗರಣೆ ಸೌಟು ಒಲೆ ಏರಿಸಿದ್ದೆ. ತೆಂಗಿನೆಣ್ಣೆ ಬಿಸಿಯಾದಂತೆ ಉದ್ದಿನಬೇಳೆ ಮೊದಲೋ ಸಾಸಿವೆಯೋ ಎಂಬ ನನ್ನ ನಿತ್ಯದ ಗೊಂದಲಕ್ಕೆ ( ಮೊಟ್ಟೆ ಮೊದಲೋ ಕೋಳಿ ಮೊದಲೋ ಎಂಬಂತೆ) ಸುಮಾರು ಎರಡು ದಶಕದ ಅಡುಗೆಯ ಅನುಭವದಲ್ಲೂ ಪರಿಹಾರ ಕಂಡಿರಲಿಲ್ಲ. ಅದೇನೇ ಇರಲಿ ಅಂತೂ ಆ ಕ್ಷಣಕ್ಕೆ ಹೊಳೆದಂತೆ ಒಗ್ಗರಿಸಿಯೇ ಬಿಟ್ಟೆ.
ತಯಾರಿಸಿಟ್ಟಿದ್ದ ಪದಾರ್ಥಕ್ಕೆ ಅದೇನೋ ಸಾರ್ಥಕ ಭಾವ.
ಹೌದು ಒಗ್ಗರಣೆ ಅಡುಗೆಗೆ ವಿಶಿಷ್ಟ ಕಳೆ ಬರುವಂತೆ ಮಾಡುತ್ತದೆ. ತಲೆಗೊಂದು ಪೇಟ ಏರಿದಾಗ ಮದುಮಗನ ಕಳೆ ಏರುವಂತೆ ವ್ಯಂಜನಗಳು ಒಗ್ಗರಣೆಯೊಂದಿಗೆ ವಿಶಿಷ್ಟ ವಾಗುತ್ತದೆ. ನಾನು ಪಾಕಶಾಸ್ತ್ರ ಪರಿಣಿತೆಯಲ್ಲ. ನಿತ್ಯದ ಅನಿವಾರ್ಯತೆಯೊಂದಿಗೆ ಅಡುಗೆಮನೆ ಸೇರುವವಳು. ಆದರೂ ಬೊಗಳಿ ಬೊಗಳಿ ರಾಗ ಎಂಬಂತೆ ಅಡುಗೆಯಲ್ಲಿ ಒಂದಷ್ಟು ಪಕ್ವತೆ ಬಂದಿದೆ ಎನ್ನಬಹುದೇನೋ. ಸಾಂಬಾರು ಹುಳಿ ಸಾರು ಮುಂತಾದ ವ್ಯಂಜನಗಳಿಗೆ ಕೊನೆ ಘಳಿಗೆಯಲ್ಲಿ ಒಗ್ಗರಿಸುವುದು ವಾಡಿಕೆ. ಆದರೆ ಪಲ್ಯಕ್ಕೆ ಯಾವಾಗ ಒಗ್ಗರಣೆ ಕೊಡಬೇಕು ಎನ್ನುವುದು ಇದಮಿಥ್ಥಂ ಹೇಳುವುದು ಕಷ್ಟ. ಅವರವರ ಭಾವಕ್ಕೆ ಅನುಸಾರವಾದ ಕ್ರಮ ಅಷ್ಟೇ. ಅಂತೂ ಕೊನೆಘಳಿಗೆಯಲ್ಲಿ ಬಂದರೂ ವಿಶೇಷವಾಗುವ, ಅನಿವಾರ್ಯವಾಗುವ ಒಗ್ಗರಣೆಯ ಗುಣ ಮೆಚ್ಚಬೇಕಾದ್ದೇ ಅಲ್ವೇ?
ಒಮ್ಮೆ ಗೆಳತಿಯೊಬ್ಬಳ ಮನೆಗೆ ಹೋಗಿದ್ದೆ. ಅವಳಿಗೋ, ಬಲು ಅಪರೂಪಕ್ಕೆ ಹೋಗಿದ್ದ ನನ್ನನ್ನು ಉಪಚರಿಸುವ ಸಂಭ್ರಮವೋ ಸಂಭ್ರಮ. ಅಲ್ಲಿ ಹೋಗುವ ವಿಚಾರ ಮೊದಲೇ ತಿಳಿಸಿದ್ದರಿಂದ ಬೇಗನೆದ್ದು ಹಲವು ವ್ಯಂಜನಗಳು ನನ್ನ ಸಂತರ್ಪಣೆಗೆ ಸಜ್ಜುಗೊಂಡಿದ್ದವು. ನನ್ನ ಇಷ್ಟವಾದ ಗೋಧಿ ಪಾಯಸವೂ ತಯಾರಾಗಿತ್ತು. ವಾಚಾಳಿ ಆಗಿದ್ದ ನನ್ನ ಮಾತುಗಳನ್ನು ಕೇಳಿ ನಗ ಲೋಸುಗ ಎಲ್ಲಾ ಅಡುಗೆ ತಯಾರಿಯನ್ನು ನಾ ಬರುವ ಮೊದಲೇ ಮುಗಿಸಿ ನನ್ನ ಜೊತೆ ನಕ್ಕು ಹಗುರಾಗುತ್ತಿದ್ದಳು. "ಮಾತು ಕೇಳುವ ನಿನಗೆ ಹಸಿವಿಲ್ಲದಿದ್ದರೂ, ಭಾಷಣ ಮಾಡಿ ನನಗೆ ಹಸಿವಾಗಿದೆ" ಎಂದು ನಕ್ಕೆ. ಸರಿ ಒಗ್ಗರಣೆ ಒಂದೇ ಬಾಕಿ ಜೊತೆಗೆ ಊಟ ಮಾಡೋಣ ಎಂದು ಎದ್ದು ಒಳಹೋದಳು. ನಾನು ಒಳಹೋಗಿ ಕೂತು ಮತ್ತೆ ಅದೂ ಇದೂ ಹರಟೆ ಮುಂದುವರಿಸಿದೆ. ಮೂರ್ನಾಲ್ಕು ವ್ಯಂಜನಗಳಿಗೆ ಹೋಲ್ಸೇಲ್ ಒಗ್ಗರಣೆ ಹಾಕಲು ತೊಡಗಿದ್ದ ಗೆಳತಿ ಒಮ್ಮೆಲೆ ಹೌಹಾರಿ ಕಿರುಚಬೇಕೇ? ಏನಾಯ್ತು ಎಂದು ಭೂಮಿಯೇ ಕಂಪಿಸುವಷ್ಟು ಬಲವಾಗಿ ನೆಲಕ್ಕೆ ಕಾಲೂರಿ ಎದ್ದು ನೋಡಿದ ನಾನು ಒಂದರೆಕ್ಷಣ ದಂಗಾದೆ. ಪಾಪ ...ಏನೂ ಪಾಪ ಮಾಡದ ಪಾಯಸಕ್ಕೆ ಒಗ್ಗರಣೆ ಬಿದ್ದಿತ್ತು. ಗೆಳತಿಯ ಮುಖ ನೋಡಿ ನಗು ಬಂದರೂ ತೋರ್ಪಡಿಸದೆ ಅವಳನ್ನು ಸಮಾಧಾನಿಸಿದೆ. ನನ್ನ ಮಾತಿನಿಂದಲೇ ಕೆಲಸ ಕೆಟ್ಟದ್ದು ಎಂದು ಆಕೆಯ ಪೆಚ್ಚುಮೋರೆ ಹೇಳುತ್ತಿತ್ತು. ನಾನು ಅವಳ ಕೋಪಾಗ್ನಿಗೆ ತುಪ್ಪ ಎರೆಯದೆ ಸಮಾಧಾನದ ಒಗ್ಗರಣೆ ಹಾಕಿದೆ ಅನ್ನಿ.
ಒಗ್ಗರಣೆ ಎಂದಾಗ ಒಗ್ಗರಣೆ ಸೌಟಿನ ಬಗ್ಗೆ ಬರೆಯದಿರಲಾದೀತೆ? ಹಳ್ಳಿ ಮನೆಗಳಲ್ಲಿ ಮಾರುದ್ದದ ಕಬ್ಬಿಣದ ಅಥವಾ ಕಂಚಿನ ಸೌಟು ಹೆಚ್ಚಾಗಿ ಕಾಣಸಿಗುವುದು. ಒಗ್ಗರಣೆ ಕೊಡಲೆಂದು ಭಾರವಾದ ಕಂಚಿನ ಸೌಟು ಕೈಗೆತ್ತಿಕೊಂಡರೆ ಯಾವುದೋ ಬಲವಾದ ಆಯುಧದಂತೆ ಕಂಡು ನಿಸ್ಸಂಶಯವಾಗಿ ಯಾರೂ ಹತ್ತಿರ ಸುಳಿಯಲಾರರು. ನಮ್ಮ ಹಳ್ಳಿ ಮನೆಗೆ ಅಂದೊಮ್ಮೆ ನನ್ನ ದೂರ ಸಂಬಂಧಿ ಅತ್ತೆಯೊಬ್ಬರು ಬಂದಿದ್ದರು. ಹಳ್ಳಿಯಲ್ಲೇ ಹುಟ್ಟಿ ಬೆಳೆದಿದ್ದ ಅವರು ಅವರ ವಿವಾಹನಂತರ ಊರೂರು ಸುತ್ತಿದ್ದರು (ತಮ್ಮ ಪತಿಯ ಉದ್ಯೋಗದ ನಿಮಿತ್ತ). ಇಂಗ್ಲಿಷ್ ಭಾಷೆಯ ಮೇಲೆ ವಿಪರೀತ ಎನಿಸುವಷ್ಟು ಮೋಹವಿದ್ದರೂ, ಭಾಷೆ ಆಕೆಯ ಹಿಡಿತ ತಪ್ಪಿಸಿ ಅಲ್ಲಿ ಇಲ್ಲಿ ಓಡುತ್ತಿತ್ತು. ಒಮ್ಮೆ ಆಕೆಗೆ ಗೊತ್ತಿದ್ದ ಯಾವುದೋ ಉತ್ತರ ಭಾರತೀಯ ವ್ಯಂಜನ ತಯಾರಿಸಲು ನನ್ನನ್ನೇ ಸಹಾಯಕಿಯಾಗಿ ನಿಯೋಜಿಸಿಕೊಂಡಿದ್ದರು. Take vegetables...wash...cut...grind...boil...fry...add water ಮುಂತಾಗಿ ಜಬರ್ದಸ್ತಿನಿಂದಲೇ ಹೇಳಿ ಕೊನೆಗೆ lastly give ಒಗ್ಗರಣೆ ಎಂದರು. ಇಂಗ್ಲೀಷಿನಲ್ಲಿ ಒಗ್ಗರಣೆಗೆ ಏನಂತಾರೆ ಅತ್ತೆ ಎಂದು ಮುಸಿಮುಸಿ ನಗುತ್ತಾ ನಾ ಕೇಳಿದ್ದೆ ತಡ ಆಕೆ oil..dal... mustard ಪಟ ಪಟ ಎನ್ನಬೇಕೇ? ಅಂತೂ ಅವರ ಇಂಗ್ಲೀಷ್ ತಟಪಟ ವಾದರೂ ನನ್ನ ಸಾಸಿವೆ ಪಟಪಟ ಸಿಡಿದು, ಒಂದೆರಡು ಸಾಸಿವೆ ಕಾಳುಗಳು ಅತ್ತೆಯ ಮುಖಕ್ಕೂ ಬಡಿದು, ಆಕೆಯ ಮುಖ ಕೋಪದಿಂದ ಕೆಂಪೇರಿ ನನಗೆ ನಗು ತರಿಸಿತ್ತು.
ದಕ್ಷಿಣದವರಾದ ನಮಗೆ ಒಗ್ಗರಣೆಗೆ ತೆಂಗಿನೆಣ್ಣೆಯೇ ಅಚ್ಚುಮೆಚ್ಚು. ಪ್ರಾದೇಶಿಕ ಭಿನ್ನತೆಯಿಂದಾಗಿ ಬೇರೆ ಬೇರೆ ಎಣ್ಣೆಗಳ ಉಪಯೋಗ ಇದ್ದೇಇದೆ. ಆದರೂ ಒಗ್ಗರಣೆ ಎಂಬುದು ಸರ್ವಾಂತರ್ಯಾಮಿಯಾಗಿಯೇ ಮೆರೆಯುತ್ತದೆ. ಇನ್ನು ಎಣ್ಣೆಗೆ ಒಗ್ಗರಣೆ ಹೆಸರಲ್ಲಿ ಏನೇನು ಹಾಕಬೇಕು ಎನ್ನುವುದು ವಿಚಾರಯೋಗ್ಯ ವಿಷಯವೇ ಅನ್ನಿ. ಉದ್ದಿನಬೇಳೆ, ಸಾಸಿವೆ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ, ಕಡ್ಲೆಬೇಳೆ, ಅಬ್ಬಬ್ಬಾ ......ಒಂದೇ ಎರಡೇ ಮಾಡಿದ ಅಡುಗೆಯ ರುಚಿ ಹೆಚ್ಚಿಸಲು ಎಷ್ಟೆಲ್ಲಾ ಕಸರತ್ತು .....ಕೆಲವೊಂದು ವ್ಯಂಜನಗಳಿಗೆ ಬಲವಾದ ಒಗ್ಗರಣೆ ಹಾಕಿದರಷ್ಟೇ ಹೆಚ್ಚು ಸ್ವಾದ. ಹಾಗಲಕಾಯಿ ಪಲ್ಯ, ಕೋಡಸಿಗೆ ಕೋಡಿನ ಪಲ್ಯ, ಪತ್ರೊಡೆ ಪಲ್ಯ, ಮಾವಿನಕಾಯಿ, ಹಲಸಿನಕಾಯಿ ಪಲ್ಯಗಳಿಗೂ ಒಗ್ಗರಣೆಯ ಮಹಾ ಅಭಿಷೇಕ ನಡೆದರೆ ಸೊಗಸು. ಬೆಳಗ್ಗಿನ ಹೊತ್ತು ಎಂದರೆ ಗಡಿಬಿಡಿಯ ಸಮಯ. ಚುಯಿಂ ಚುಯಿಂ ಎಂದು ಸದ್ದಾಡುವ ಕಾವಲಿ, ಪಕ್ಕದಲ್ಲೇ ಕುದಿಯುತ್ತಿರುವ ಪದಾರ್ಥ, ಶಾಲೆ ಯಾ ಕಛೇರಿಗೆ ತಡವಾಗುತ್ತದೆ ಎಂದು ಪೀಠಿಕೆ ಹಾಕಿಯೇ ಅವಸರವಸರವಾಗಿ ಬಂದು ಊಟಕ್ಕೆ ಕುಳಿತುಕೊಳ್ಳುವ ಮಕ್ಕಳು, ಮನೆಯವರು." ರೀ ಆಗಿದೆ... ಒಗ್ಗರಣೆ ಹಾಕಿದರೆ ರೆಡಿ "ಎಂಬ ನನ್ನ ದಿನನಿತ್ಯದ ಸುಪ್ರಭಾತ ಕೇಳಿ ಇವರು ರೋಸಿಹೋಗಿದ್ದರು. ನಾವು ಹೋದಮೇಲೆ ಒಗ್ಗರಣೆ ಹಾಕು..ಮೊದಲು ಬಡಿಸು ಎಂದು ಬೇಸರ ಮತ್ತು ಕೋಪವನ್ನು ಸೇರಿಸಿ ನನ್ನಮೇಲೆ ಒಗ್ಗರಣೆ ಹಾಕುತ್ತಿದ್ದರು.
ನನ್ನ ಒಬ್ಬರು ಹಿರಿಯ ದೊಡ್ಡಮ್ಮನಿಗೆ ಉದಾಸೀನ ಯಾ ಮೈಗಳ್ಳತನದ ಚಾಳಿ ಇತ್ತು. ಆರಾಮವಾಗಿ ಕೂತು ಪಟ್ಟಾಂಗ ಮಾಡಿ ಕಾಲಹರಣ ಮಾಡುತ್ತಿದ್ದರು. ಯಾವುದೇ ಕೆಲಸಗಳಲ್ಲೂ ಕೊನೆಕ್ಷಣದಲ್ಲಿ ಬಂದು ಮಿಂಚುವುದು ಅವರಿಗೆ ಅಭ್ಯಾಸವಾಗಿತ್ತು. ಅವರು ನಡೆದಾಡಿದರೆ ತಮ್ಮ ಘನ ಗಾತ್ರದ ಶರೀರವನ್ನು ಹೊತ್ತು ಬಂದಂತೆ ಭಾಸವಾಗುತ್ತಿತ್ತು. ಅವರು ಕೂತಲ್ಲಿಂದ ಎದ್ದರೆಂದರೆ "ಏನೋ ಒಗ್ಗರಣೆ ಕೊಡಲು ಹೊರಟಿದ್ದಾರೆ" ಎಂದು ಮನೆಮಂದಿ ಗುಸುಗುಸು ಶುರುಮಾಡುತ್ತಿದ್ದರು. ಕೊನೇ ಕ್ಷಣದಲ್ಲಿ ಏನೋ ಸಣ್ಣ ಕೆಲಸ ಮಾಡಿ, ಬಂದವರ ಮುಂದೆ ಫೋಸ್ ಕೊಡುತ್ತಿದ್ದರು. ಒಮ್ಮೆ ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಿಗದಿಯಾಗಿತ್ತು. ಮುನ್ನಾ ದಿನ ರಾತ್ರಿ ಮನೆಮಂದಿ, ಹತ್ತಿರದ ನೆಂಟರಿಷ್ಟರು, ನೆರೆಕರೆಯವರೆಂದು ಸುಮಾರು ಹದಿನೈದು ಇಪ್ಪತ್ತು ಜನ ಸೇರಿದ್ದರು. ದೊಡ್ಡಮ್ಮನ ಸೊಸೆ ನನ್ನನ್ನು ಕರೆದು "ಒಳ್ಳೆ ಅವಲಕ್ಕಿ ಚಟ್ನಿ ಮಾಡು ಎಲ್ಲರಿಗೂ ಆಯ್ತು. ಎಲ್ಲಾ ಸಾಮಾನುಗಳೂ ಇಲ್ಲೇ ಇದೆ ಎಂದು ಅಡುಗೆಕೋಣೆಯ ಅಧಿಕಾರ ನನಗೆ ಹಸ್ತಾಂತರಿಸಿ ಹೊರಹೋದರು. ನನಗೋ, ನನ್ನ ಅಡುಗೆ ಕರಾಮತ್ತು ಅಷ್ಟೂ ಜನರ ಮುಂದೆ ತೋರಿಸುವ ಚಪಲ. ಅವಲಕ್ಕಿ ಚಟ್ನಿಯಾದರೂ ನನಗೆ ತಿಳಿದಿರುವುದರಲ್ಲೇ ವಿಶಿಷ್ಟವಾದುದನ್ನು ಮನಸ್ಸಿನಲ್ಲೇ ಆಯ್ದು ಮುಂದುವರೆದೆ. "ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ" ಎಂಬಂತೆ ಕೈ ಉದ್ದ ಮಾಡಿ ಧಾರಾಳ ಸಾಮಾನುಗಳನ್ನು ಸೇರಿಸಿ ಕಲಸಿದೆ. ಚಟಪಟ ಒಗ್ಗರಣೆ ಸದ್ದು ಕೇಳಿದ್ದೆ ತಡ, ದೊಡ್ಡಮ್ಮ ಮೆಲ್ಲಗೆ ಅಡುಗೆ ಕೋಣೆಗೆ ಬಂದರು. "ನೀನು ಹೋಗು, ಅಲ್ಲಿ ಹೊರಗೆ ಏನಾದ್ರೂ ಕೆಲಸ ಇರಬಹುದು, ಇದನ್ನು ನಾನು ಸರಿಮಾಡಿ ತರುತ್ತೇನೆ" ಎಂದರು. ಎಲ್ಲಾ ತಯಾರಿ ಆದಮೇಲೆ ಸರಿಮಾಡಲು ಏನಿದೆ ಎಂದು ತಲೆ ಕೆರೆದೆ. ದೊಡ್ಡಮ್ಮ ಕಲಸಿದ ಅವಲಕ್ಕಿಯನ್ನು ಮತ್ತೆ ಕಲಸಿಕೊಂಡು ಸ್ವಲ್ಪ ಬಾಯಿಗಿಟ್ಟರು. ಉಪ್ಪು ಹಾಕಿಲ್ಲವೆ ನೀನು? ಎಂದು ಹುಬ್ಬೇರಿಸಿದರು. "ಕಮ್ಮಿ ಆಗಿರಬೇಕು ತಗೊಳ್ಳಿ ಸೇರಿಸಿ ಬೇಕಾದ್ರೆ.."ಎಂದು ಉಪ್ಪಿನ ಕರಡಿಗೆಯನ್ನು ಅವರತ್ತ ದೂಡಿದೆ. ಅದಾಗಲೇ ನನಗೆ ಹೊರಗಿಂದ ಕರೆ ಬಂದ ಕಾರಣ ನಾನೂ ಹೊರನಡೆದೆ. ಎಷ್ಟು ಹೊತ್ತಾದರೂ ಅವಲಕ್ಕಿಯ ಸುಳಿವಿಲ್ಲ. ಸಂಶಯಗೊಂಡ ನಾನು ದೊಡ್ಡಮ್ಮ ಏನಾದ್ರೂ ಅಲ್ಲಿ ಜಾರಿ ಗೀರಿ ಹೋಗಿದ್ದಾರೋ ಎಂದು ಗಾಬರಿಯಿಂದ ಒಳನಡೆದೆ. ಅಲ್ಲಿ ಸೊಸೆಯ ಮುಂದೆ ದೊಡ್ಡಮ್ಮ ಜಾರಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದ್ದರು. ಹುಡಿ ಉಪ್ಪು ಎಂದು ತಿಳಿದುಕೊಂಡಿದ್ದ ಕರಡಿಗೆ ಸೋಡಾ ಹುಡಿಯದ್ದಾಗಿತ್ತು. ಎಷ್ಟು ಸುರಿದರೂ ಉಪ್ಪಿನ ರುಚಿ ಕಾಣದಾದಾಗ ಸೊಸೆಯ ಮೊರೆಹೋಗಿ ಆಕೆಯ ಕೆಂಗಣ್ಣಿಗೆ ಗುರಿಯಾಗಿದ್ದರು. ಕೊನೇ ಕ್ಷಣದಲ್ಲಿ ಬಂದು ಮಿಂಚುವ ದೊಡ್ಡಮ್ಮನ ಬುದ್ಧಿಗೆ ದೊಡ್ಡ ಕಲ್ಲೇ ಬಿದ್ದಿತ್ತು. ನಾನು ಏನೂ ಅರಿಯದವರಂತೆ ದೊಡ್ಡ ಕಣ್ಣುಬಿಟ್ಟು ದೊಡ್ಡಮ್ಮನನ್ನೇ ನೋಡಿದೆ. ಅಲ್ಲಿ ನೆರೆದ ಹಲವರು ಹಿರಿಯರಾದ ಆಕೆಯನ್ನು ಸಮರ್ಥಿಸಿಕೊಂಡರು. ನಾನೂ "ಇರಲಿ ದೊಡ್ಡಮ್ಮ ...ಕೆಲವು ಸಲ ಹಾಗೆ ಆಗ್ತದೆ. ಪರಮೋಸ ಮನುಷ್ಯರಿಗಲ್ಲದೆ ಮರಕ್ಕೆ ಬರುತ್ತದೆಯೇ" ಎಂದು ಒಗ್ಗರಣೆ ಹಾಕಿದೆ. ನಂತರ ಹರಿದು ತಿನ್ನುವಂತಹ ಆಕೆಯ ನೋಟವನ್ನು ತಪ್ಪಿಸಿ ಮೆತ್ತಗೆ ಹೊರಗೆ ನಡೆದೆ.
ಒಗ್ಗರಣೆಯಲ್ಲಿ ಸಾಸಿವೆಯದ್ದೇ ಮುಖ್ಯಪಾತ್ರ ಎನ್ನಬಹುದು. ಉಳಿದೆಲ್ಲಾ ಸಾಮಾಗ್ರಿಗಳು ಇಲ್ಲದಿದ್ದರೂ ಸಾಸಿವೆ ಅತ್ಯಗತ್ಯವೇ ಸರಿ. ಬಿಸಿ ಎಣ್ಣೆಗೆ ಬಿದ್ದಾಗ ಸಿಡಿಮಿಡಿಗೊಂಡು ಸಿಡಿಯುವ ದೃಶ್ಯ, ಯುದ್ಧಭೂಮಿಯಲ್ಲಿ ಗುಂಡೇಟಿಗೆ ಛಿದ್ರಗೊಳ್ಳುವ ವೈರಿ ಸೇನೆಯಂತೆ ಭಾಸವಾಗುತ್ತದೆ. ಶೇಕಡ ಐವತ್ತು ಪ್ರತಿಶತ ಸಾಸಿವೆಯೂ ದೂರ ಸರಿದರೆ ಅದೊಂದು ತುಂಬಲಾರದ ನಷ್ಟವೆಂದು ನಾನು ಪ್ರತಿಸಲ ಸಾಸಿವೆ ಹಾಕಿದೊಡನೆ ಮೇಲೊಂದು ತಟ್ಟೆ ಮುಚ್ಚಿ ಬಿಡುತ್ತೇನೆ.ಉಳಿದೆಲ್ಲಾ ಸಾಮಾಗ್ರಿಗಳು ಶಿಸ್ತಿನ ಸಿಪಾಯಿಗಳಂತೆ ಗಪ್ ಚುಪ್ ಸೌಟಿನೊಳಗೇ ಬಳಲಿ ಬೆಂಡಾಗುತ್ತಿರುತ್ತದೆ. ಮಾತಿನಲ್ಲಿ ಒಗ್ಗರಣೆ ಹಾಕುವ ಮಂದಿ ನಮ್ಮ ಸುತ್ತಮುತ್ತಲೂ ಇರುತ್ತಾರೆ. ಅವರಿಗೋ ಉಪ್ಪು,ಹುಳಿ, ಖಾರ ಮಸಾಲೆ ಬೆರೆಸಿ ಮಾತನಾಡುವವರ ಜೊತೆಗೆ ಹೆಚ್ಚಿನ ಬಾಂಧವ್ಯ. ತಮ್ಮ ಬೇಳೆ ಬೇಯುವಂತಹ ಸಂದರ್ಭಕ್ಕೆ ಸರಿಯಾಗಿ ಒಗ್ಗರಣೆ ಹಾಕುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಅವರಿವರನ್ನೇ ದೂರುವ ಹಾಗಿಲ್ಲ. ಹಲವು ಸಲ ನಾನೂ ಒಗ್ಗರಣೆ ಹಾಕಿದ್ದೇನೆ: ಅಡುಗೆ ಮನೆಯಲ್ಲೂ, ಅದರ ಹೊರಗೂ. ಏನೇ ಇರಲಿ, ಒಗ್ಗರಣೆ ಎನ್ನುವುದು ಅಡುಗೆ ಸಾಮ್ರಾಜ್ಯದ ಅನಭಿಷಿಕ್ತ ದೊರೆ ಎನ್ನಲಡ್ಡಿಯಿಲ್ಲ. ನೀವೇನಂತೀರಿ?
Creative Writings
