
News · June 18, 2025
ಶಂಕರ ಸದನ ಬ್ಯಾಡ್ಮಿಂಟನ್ ಲೀಗ್ ಆವೃತ್ತಿ - 2
ಸಂಕ್ಷಿಪ್ತ ವರದಿ (ವರದಿ ಕೃಪೆ : ಶ್ರೀ ವಿಘ್ನೇಶ ಶಿರಂತಡ್ಕ )
ಆತ್ಮೀಯ ಕ್ರೀಡಾಭಿಮಾನಿಗಳೆ,
ಶ್ರೀ ಶಂಕರ ಸದನ ಕ್ರೀಡಾ ಸಮಿತಿ ಪೆರ್ಲ ಮತ್ತು ಕಾರ್ಕಳ ಕರಾಡ ಸಹಯೋಗದಲ್ಲಿ ನಡೆದ ಶಂಕರ ಸದನ ಬ್ಯಾಡ್ಮಿಂಟನ್ ಲೀಗ್ ಆವೃತ್ತಿ - 2 ಇಂದು ಬೆಳಿಗ್ಗೆ 8.30ಕ್ಕೆ ಜೆರ್ಸಿ ಬಿಡುಗಡೆ ಮೂಲಕ ಭವ್ಯವಾಗಿ ಪ್ರಾರಂಭವಾಯಿತು.
ಜೆರ್ಸಿಯನ್ನು ಶ್ರೀ ಉತ್ತಮ ಕೊರೆಕ್ಕಾನ ಬಿಡುಗಡೆ ಮಾಡಿ, ನಮ್ಮನ್ನು ಪ್ರೋತ್ಸಾಹಿಸಿ ಬೆಂಬಲಿಸಿದ್ದಾರೆ. ಅವರಿಗೆ ತುಂಬು ಹೃದಯದ ಧನ್ಯವಾದಗಳು.
ದಿವಂಗತ ಗೋಪಾಲಕೃಷ್ಣ ಭಟ್ ಪೊಸವಳ್ಯ ಅವರ ಸ್ಮರಣಾರ್ಥವಾಗಿ ನಿರ್ಮಿತ ಒಳಾಂಗಣವನ್ನು ಶ್ರೀ ವಿಶ್ವನಾಥ ಭಟ್ ಪೊಸವಳ್ಯ ಉದ್ಘಾಟಿಸಿದರು. ಬಳಿಕ 8 ತಂಡಗಳ ಲೀಗ್ ಪಂದ್ಯಾವಳಿ ಪ್ರಾರಂಭವಾಯಿತು.
ಟೂರ್ನಿಯ ಅಧಿಕೃತ ಉದ್ಘಾಟನಾ ಕಾರ್ಯಕ್ರಮವನ್ನು ಬೆಳಿಗ್ಗೆ 10.30ಕ್ಕೆ ಶ್ರೀ ವಸಂತಕುಮಾರ್ ಪಳ್ಳತಮೂಲೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಾಸುದೇವ ಭಟ್ ವಹಿಸಿದ್ದರು. ಶ್ರೀ ರಮಾನಂದ ಎಡಮಲೆ ಶುಭ ಹಾರೈಸಿದರು.
ಈ ಪಂದ್ಯಾವಳಿಯಲ್ಲಿ Team Sadana ಪ್ರಥಮ ಸ್ಥಾನವನ್ನು ಮತ್ತು Sanathana Strikers ದ್ವಿತೀಯ ಸ್ಥಾನವನ್ನು ಪಡೆದು ಕೀರ್ತಿಶಾಲಿಯಾದವು. ಪ್ರಥಮ ಬಹುಮಾನ ರೂ. 20,000 ಮತ್ತು ದ್ವಿತೀಯ ಬಹುಮಾನ ರೂ. 15,000 ವಿತರಿಸಲಾಯಿತು.
ಇದಕ್ಕೆ ಜೊತೆಗೆ, ದಿವಂಗತ ಸುನಂದಾ ಆರ್. ಭಟ್ ಆಟಿಕುಕ್ಕೆ ಅವರ ಸ್ಮರಣಾರ್ಥವಾಗಿ ಆನೆಮಜಲು ಶಶಿಧರ ವಕೀಲರು, ಕಾಸರಗೋಡು ಕೊಡಮಾಡಿದ ಶಾಶ್ವತ ಫಲಕವನ್ನು ವಿಜೇತ ತಂಡಗಳಿಗೆ ಪ್ರದಾನ ಮಾಡಲಾಯಿತು.
ಇದೇ ವೇಳೆ, ದಿವಂಗತ ಕೋಟೆ ವೆಂಕಟರಮಣ ಭಟ್ ಸ್ಮರಣಾರ್ಥವಾಗಿ, ಕೋಟೆ ಮನೆಯವರು ಕೊಟ್ಟ ಪ್ರಥಮ ಮತ್ತು ದ್ವಿತೀಯ ಸ್ಥಾನಗಳ ಟ್ರೋಫಿಗಳನ್ನು ಎಲ್ಲ ಆಟಗಾರರಿಗೆ ವಿತರಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕೋಟೆ ರಾಮ ಭಟ್ ವಹಿಸಿದ್ದರು. ಶ್ರೀ ಆದರ್ಶ ಉಪ್ಪಂಗಳ ಮತ್ತು ಶ್ರೀ ಪ್ರಸನ್ನ ಕೋಟೆ ಬಹುಮಾನ ವಿತರಿಸಿದರು.
ಈ ಪಂದ್ಯಾವಳಿಯಲ್ಲಿ ನಮ್ಮೊಡನೆ ಸಹಕರಿಸಿದ ಕಾರ್ಕಳ ಕರಾಡ ತಂಡದ ಆದರಾತಿಥ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ರುಚಿಕರವಾದ ಊಟ-ತಿಂಡಿ ವ್ಯವಸ್ಥೆ, ನಗುಮೊಗದ ಸ್ವಾಗತ ಮತ್ತು ಅಚ್ಚುಕಟ್ಟಾದ ಆಯೋಜನೆಯು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಲ್ಲಿ ಪ್ರಮುಖ ಪಾತ್ರವಹಿಸಿತು.
ಪಂದ್ಯವಾಡಲು ಬಂದ ಎಲ್ಲಾ ತಂಡದ ಮಾಲೀಕರು ಹಾಗೂ ಆಟಗಾರರಿಗೆ ನಮ್ಮ ಹೃತ್ಪೂರ್ವಕ ವಂದನೆಗಳು.
ಒಟ್ಟಿನಲ್ಲಿ, ಈ ಪಂದ್ಯಾವಳಿ ಎಲ್ಲರ ಸಹಾಯ ಮತ್ತು ಸಹಕಾರದಿಂದ ಬಹುಕಾಲ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಟೂರ್ನಿಗಳನ್ನು ಆಯೋಜಿಸಲು ಪ್ರೇರಣೆ ನೀಡಿದ ಎಲ್ಲರಿಗೂ,
ಶ್ರೀ ಶಂಕರ ಸದನ ಕ್ರೀಡಾ ಸಮಿತಿ ಪೆರ್ಲದ ಅಧ್ಯಕ್ಷರು ಮತ್ತು ಸದಸ್ಯರು ತುಂಬು ಹೃದಯದಿಂದ ಧನ್ಯವಾದಗಳನ್ನು ಅರ್ಪಿಸುತ್ತಾರೆ.
