Karada Vishwa

Article · August 30, 2026

ಶ್ರೀ ಲಲಿತಾ ಸಹಸ್ರನಾಮ.

ಸುಬ್ರಹ್ಮಣ್ಯ ಭಟ್ ಕಜಮಲೆ.

ಶ್ರೀ ಲಲಿತಾ ಸಹಸ್ರನಾಮವು ಹಯಗ್ರೀವನು ಅಗಸ್ತ್ಯನಿಗೆ ಬೋಧಿಸಿದ ಸಂವಾದವೆಂದು ಹೇಳಲ್ಪಟ್ಟಿದೆ. ಉಪನಿಷತ್ತುಗಳಲ್ಲಿ ಹೇಳಿದ ನಿರ್ಗುಣ ನಿರ್ವಿಕಾರ ನಿಷ್ಕಳಂಕ ಬ್ರಹ್ಮನನ್ನೇ ಇಲ್ಲಿ ಸಗುಣ ಸಾಕಾರದಲ್ಲಿ ದೇವೀ ರೂಪದಿಂದ ವರ್ಣಿಸಲಾಗಿದೆ.ಪರಬ್ರಹ್ಮವು ಮಾಯಾ ಶಕ್ತಿಯಿಂದ ಒಡಗೂಡಿದಾಗಲೇ ಪ್ರಪಂಚದ ಸೃಷ್ಟಿಯಂತೆ.

ಪರಮಾತ್ಮನ ಸಗುಣರೂಪದ ಆರಾಧನೆ ಜನಸಾಮಾನ್ಯರಿಗೂ ಸಾಧ್ಯವಾಗುವುದರಿಂದಲೇ ಅದು ಹೆಚ್ಚು ಪ್ರಿಯವಾಗುತ್ತದೆ. ಸಗುಣರೂಪದಲ್ಲಿ ಸಲ್ಲಿಸಿದ ಪೂಜೆಯು ನಿರ್ಗುಣ ರೂಪಕ್ಕೂ ಸಲ್ಲುತ್ತದೆ ಎನ್ನುವುದು ಪ್ರಾಜ್ಞರ ಅಭಿಪ್ರಾಯ. ಸಾಕಾರ ರೂಪದ ಬೆಲ್ಲವನ್ನ ತಿಂದಾಗ ನಿರಾಕಾರವಾದ ಸಿಹಿಯ ಅನುಭವವಾಗುವಂತೆ ಸಗುಣಾರಾಧನೆಯು ನಿರ್ಗುಣ ಆರಾಧನೆಗೆ ಪ್ರೇರಕ ಹಾಗೂ ಪೂರಕ. ಜಗನ್ಮಾತೆಯನ್ನು ಸ್ತ್ರೀ ರೂಪದಿಂದ ಆರಾಧಿಸಿದಾಗ ಆಕೆಯಲ್ಲಿ ಹೆಚ್ಚು ಆತ್ಮೀಯ ಭಾವವು ಉಂಟಾಗುತ್ತದೆ. ಸನಾತನ ಸಂಸ್ಕೃತಿಯಲ್ಲಿ ತಾಯಿಗೇ ಪರಮೋಚ್ಛ ಸ್ಥಾನ. ವೇದಗಳಲ್ಲೂ ದುರ್ಗಾಸೂಕ್ತ, ದೇವೀಸೂಕ್ತ ಮೇಧಾಸೂಕ್ತ ಮತ್ತು ಶ್ರೀ ಸೂಕ್ತಗಳಲ್ಲಿ ಮಾತೃಭಾವವು ತುಂಬಿರುತ್ತದೆ. ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ, ಅತಿಥಿ ದೇವೋ ಭವ ಎಂಬಲ್ಲಿ ತಾಯಿಗೇ ಮೊದಲ ಸ್ಥಾನ.ಉಳಿದವುಗಳಿಗೆ ಎರಡು ಮೂರನೇ ಸ್ಥಾನ. ದೇವರು ಎಲ್ಲಾ ಕಡೆಯಲ್ಲೂ ಪ್ರಕಟವಾಗಲು ಆಗದಿರುವದರಿಂದ ತಾಯಿಯನ್ನು ಸೃಷ್ಟಿಸಿದ್ದಾನೆ ಎಂಬ ಗಾದೆಯೊಂದು ಆಂಗ್ಲ ಭಾಷೆಯಲ್ಲಿ ಇದೆ.(God couldn't be every where.So he created mothers). ಇದರ ವೈಶಿಷ್ಟ್ಯವೆಂದರೆ, ಅನೇನ ಸದೃಶಂ ಸ್ತೋತ್ರಂ ನ ಭೂತೋ ನ ಭವಿಷ್ಯತಿ. ಎಂಬ ವಾಕ್ಯ. ಸಹಸ್ರ ಎಂಬುದು ಸಂಖ್ಯಾವಾಚಕ ಶಬ್ದ. ಈ ಶಬ್ದಕ್ಕೆ ಅನಂತವೆಂಬ ಅರ್ಥವೂ ಇದೆ.ವಿಶ್ವಂ ಶತಂ ಸಹಸ್ರಂ ಸರ್ವಂ ಅಕ್ಷಯ ವಾಚಕ ಶಬ್ದಗಳು. ವಿಷ್ಣು ಸಹಸ್ರನಾಮದ ಪ್ರಾರಂಭವೇ ವಿಶ್ವಂ ಎಂಬ ಶಬ್ದದಿಂದ. ಸರ್ವ ಶಬ್ದವೂ ವಿಷ್ಣು ಸಹಸ್ರನಾಮದಲ್ಲಿದೆ.ದೇವತಾ ಪೂಜೆಗಳಲ್ಲಿ ಆಯಾ ದೇವತೆಗಳ ಒಂದೊಂದು ನಾಮವೂ ಓಂಕಾರ ಮತ್ತು ನಮ: ಶಬ್ದಗಳಿಂದ ಕೂಡಿರುತ್ತದೆ ಲಲಿತಾ ಸಹಸ್ರನಾಮದ ಒಂದೊಂದು ನಾಮವೂ ಸೂತ್ರವಿದ್ದಂತೆ. ಒಂದೊಂದು ನಾಮದಲ್ಲೂ ಹಲವಾರು ವಿಷಯಗಳು ಗೂಢರೂಪದಲ್ಲಿವೆ ಎಂದು ಶ್ರೀಮನ್ನೆಲಮಾವು ಮಠದ ಯತಿಗಳು ಹೇಳಿದ್ದಾರೆ. ಇದರಲ್ಲಿ ಬರುವ ಸಹಸ್ರ ಶೀರ್ಷ ವದನಾ ಸಹಸ್ರಾಕ್ಷೀ ಸಹಸ್ರಪಾತ್ ಇವುಗಳೆಲ್ಲಾ ಪುರುಷ ಸೂಕ್ತದಲ್ಲಿ ವರ್ಣಿತವಾದ ರೂಪಗಳೇ. (ಶ್ರೀ ಶ್ರೀ ಬ್ರಹ್ಮಾನಂದ ಭಾರತೀಸ್ವಾಮಿಗಳು ಈ ರೀತಿ ಬರೆಯುತ್ತಾರೆ. ತತ್ವಮಯೀ 425 ನೇ ನಾಮದಲ್ಲಿ ಶ್ವೇತಕೇತುವಿಗೆ ಉಧ್ಧಾಲಕ ಆರುಣಿಯು ಉಪದೇಶಿಸಿದ ಛಾಂದೋಗ್ಯ ಉಪನಿಷತ್ತಿನ ಇಂಗಿತವಿದೆ.ವಿಜ್ಞಾನ ಘನರೂಪಿಣೀ 253, ಪ್ರಜ್ಞಾನ ಘನರೂಪಿಣೀ 574 ನಾಮಗಳಲ್ಲಿ ಐತರೇಯೋಪನಿಷತ್ತಿನ ಪ್ರಜ್ಞಾನಂ ಬ್ರಹ್ಮ ಎಂಬ ಧ್ವನಿಯಿದೆ. ಜಾಗರಿಣೀ257, ಸ್ವಪಂತೀ 258, ಸುಪ್ತಾತುರ್ಯಾ 262 ಎಂಬ ನಾಮಗಳು ಮಾಂಡುಕ್ಯೋಪನಿಷತ್ತಿನ ಹಾಗೂ ಕಾರಿಕೆಗಳಲ್ಲಿ ತಿಳಿಸಿದ ಅವಸ್ಥಾತ್ರಯ ವಿಷಯವನ್ನ ಸೂಚಿ‌ಸುತ್ತದೆ. ಭೂಮರೂಪಾ 666 ಎಂಬ ನಾಮದಲ್ಲಿ ಛಾಂದೋಗ್ಯಪನಿಷತ್ತಿನ ಭೂಮವಿದ್ಯೆಯ ತಾತ್ಪರ್ಯವಿದೆ.ಹಾಗೆಯೇ ಬ್ರಹ್ಮಾತ್ಮೈಕ್ಯ ಸ್ವರೂಪಿಣೀ672 ಚಿತಿ:362, ತತ್ಪದಲಕ್ಷ್ಯಾರ್ಥಾ 363, ಧ್ಯಾನ ಧ್ಯಾತೃ ಧ್ಯೇಯರೂಪಾ 254, ಇವೇ ಮೊದಲಾದ ನಾಮಗಳೆಲ್ಲಾ ಉಪನಿಷತ್ ಪುರುಷನನ್ನು ತಿಳಿಸುತ್ತವೆ. ಆಬ್ರಹ್ಮಕೀಟಜನನೀ 285, ಪಂಚಕೃತ್ಯ ಪರಾಯಣಾ272, ಉನ್ಮೇಷನಿಮಿಷೋತ್ಪನ್ನ ವಿಪನ್ನ ಭುವನಾವಲಿ: 281, ಮುಂತಾದುವುಗಳಲ್ಲಿ ಜಗತ್ ಸೃಷ್ಟ್ಯಾದಿ ಗುಣಗಳು ವರ್ಣಿತವಾಗಿವೆ.ಸಹಸ್ರ ಶೀರ್ಷವದನಾ282, ಸಹಸ್ರಾಕ್ಷೀ 283, ಸಹಸ್ರಪಾತ್ 284 ಈ ನಾಮಗಳೆಲ್ಲಾ ಪುರುಷ ಸೂಕ್ತದಲ್ಲಿ ವರ್ಣಿತವಾದ ಪರಮಾತ್ಮನ ವಿರಾಡ್ರೂಪವನ್ನು ದರ್ಶನ ಮಾಡಿಸುತ್ತವೆ.

Creative Writings
ಶ್ರೀ ಲಲಿತಾ ಸಹಸ್ರನಾಮ.