
News · June 3, 2026
ಭಾರತಿ ಎಂ. ಅವರು ದೂರದರ್ಶನ 'ಬಿ' ಗ್ರೇಡ್ ಕಲಾವಿದೆಯಾಗಿ ಆಯ್ಕೆ
ಕರಾಡ ವಿಶ್ವದ ಅಭಿನಂದನೆಗಳು
ಬೆಂಗಳೂರು ದೂರದರ್ಶನ ಕೇಂದ್ರವು 2025ರ ನವೆಂಬರ್ ತಿಂಗಳಲ್ಲಿ ಆಯೋಜಿಸಿದ್ದ ಭರತನಾಟ್ಯ ವಿಭಾಗದ ಆಡಿಷನ್‌ನಲ್ಲಿ ಭಾಗವಹಿಸಿದ್ದ ಭಾರತಿ ಎಂ. ಅವರು 'ಬಿ' ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ. ಕಳೆದ 11 ವರ್ಷಗಳಿಂದ ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿರುವ ಅವರು, ತಮ್ಮ 10ನೇ ವಯಸ್ಸಿನಲ್ಲಿ ನೃತ್ಯ ಕಲಿಕೆಯನ್ನು ಆರಂಭಿಸಿದ್ದರು. ಇತ್ತೀಚೆಗೆ ನಡೆದ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಭಾರತಿ ಎಂ. ಅವರು ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ, ಧರ್ಮಸ್ಥಳ ಲಕ್ಷದೀಪೋತ್ಸವ, ಮೈಸೂರು ದಸರಾ, ಹಂಪಿ ಉತ್ಸವ, ಬನವಾಸಿ ಕದಂಬೋತ್ಸವ, ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ, ಕರಾವಳಿ ಉತ್ಸವ ಸೇರಿದಂತೆ ರಾಜ್ಯದ ವಿವಿಧ ಪ್ರತಿಷ್ಠಿತ ಸಾಂಸ್ಕೃತಿಕ ವೇದಿಕೆಗಳಲ್ಲಿ 60ಕ್ಕೂ ಅಧಿಕ ಸಮೂಹ ಹಾಗೂ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನಗಳನ್ನು ನೀಡಿದ್ದಾರೆ.
ಕಡಬ ಸಮೀಪದ ಕನಕವನ ನಿವಾಸಿಗಳಾದ ಎಂ. ಮಾಧವ ಭಟ್ ಹಾಗೂ ಗಾಯತ್ರಿ ದಂಪತಿಯ ಪುತ್ರಿಯಾಗಿರುವ ಭಾರತಿ, ಪ್ರಸ್ತುತ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಪುತ್ತೂರಿನಲ್ಲಿ ನಡೆದ ತಮ್ಮ ಭರತನಾಟ್ಯ ರಂಗಪ್ರವೇಶವನ್ನು ಯಶಸ್ವಿಯಾಗಿ ನೆರವೇರಿಸಿ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
