
Article · August 19, 2026
ಭಕ್ತಿ ಗೀತೆ
-ವೀಣಾ ಎಂ ಭಟ್
ಆವ ಮಾಯೆಗೆ ಲೋಕ ಎಳೆ ತಂದೆ ಅರಿಯೇ
ಕಾವ ಗೋಕುಲಕೆ ನೀ ನಾಕ ತೋರಿದೆ ಹರಿಯೇ
ಮಥುರೆಯಲಿ ಜನಿಸಿದೆ ಬೆಳೆದೆ ಗೋಕುಲದಲ್ಲಿ
ಅಧರದಲಿ ಕೊಳಲನೂದುತ ಬೆಸೆದೆ ಪ್ರೇಮದಲಿ
ಮಧುರಗಾನದಿ ನಿಂದೆ ಗೋಪಿಯರ ಹೃದಯದಲಿ
ಪದುಮನಾಭನೆ ನಿನ್ನ ಲೀಲೆಯನೆಂತು ವರ್ಣಿಸಲಿ
ಬಂದೆ ಗೋಪಿಯರಲ್ಲಿ ಸರಿಸಮ ವೇಳೆಯಲಿ
ಮಿಂದೆ ಸಕಲರೊಡನೆ ಭಾವ ಸಮ್ಮೋಹದಲಿ
ಇಂದಿರೇಶನೆ ಗೋಪಿಯ ತೇಲಿಸಿ ಮಾಯೆಯಲಿ
ಬಂಧುವಾದೆ ಮುಕುಂದ ನಂದ ಗೋಕುಲದಲ್ಲಿ
ಕಂಸನಿಗೆ ಜವನಾದೆ ಅಕ್ರೂರಗೆ ದೇವನಾದೆ
ಹಂಸತೂಲಿಕದಲ್ಲಿ ನಂಬಿದಗೆ ಪವಡಿಸಿದೆ
ಅಸುರಾರಿಯೇ ನಿನ್ನ ಹೆಸರು ಸಾವಿರವಿರಲು
ಜಪಿಸುವಗೆ ಸದ್ಗತಿಯ ನೀಡು ಶ್ರೀ ಹರಿಯೇ
Creative Writings
