Karada Vishwa

Article · October 28, 2026

ನನ್ನಿಷ್ಟ, ನಿನ್ನಿಷ್ಟ....

By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ಕಷ್ಟ ಕೊಡು ನಷ್ಟ ಕೊಡು ಏನೇ ಕೊಡು

ಓ ಶಿವನೇ ಎಲ್ಲವೂ ನಿನ್ನಿಷ್ಟದಂತೇ /

ನಿನ್ನ ಸೇವೆಯ ಭಾಗ್ಯ ಬೇಡುವೆನು ಮನಸಾರೆ

ಅದು ಮಾತ್ರ ನನ್ನಿಷ್ಟದಂತೆ /

ತಪ್ಪು ಒಪ್ಪುಗಳೆಲ್ಲ ಮಾನವನ ಸಹಜ ಗುಣ

ಎಲ್ಲವೂ ನಿನ್ನಿಷ್ಟದಂತೆ /

ಅನವರತವು ನಿನ್ನ ಧ್ಯಾನ ಮಾಡುವ ಮನಸು

ನೀಡೆನಗೇ ನನ್ನಿಷ್ಟದಂತೆ /

ಮುಪ್ಪಿನ ಕಾಲಕ್ಕೆ ತಪ್ಪಿದ ತಾಳಕ್ಕೆ

ನಡೆಸು ನೀ ನಿನ್ನಿಷ್ಟದಂತೇ /

ಪ್ರಾಣ ಹೋಗುವ ಸಮಯ ನೆನೆವೆ ನಿನ್ನನೆ ದೇವ

ಕೈ ಹಿಡಿದು ನಡೆಸುವೆಯಂತೇ /

ಅಂತ್ಯ ಕಾಲಕ್ಕೆ ನನ್ನ ಬಂಧುಗಳು ಯಾರಿಲ್ಲ
ಒಂಟಿಯಾಗಿ ಬರುವೆನಂತೆ /

ನಿನ್ನನೇ ಕರೆಯುವೆನು ನಿನ್ನನೇ ನೆನೆಯುವೆನು ,

ನೀ ಬಂಧುವಾಗುವೆಯಂತೇ /

ಕಳ್ಳ ಸುಳ್ಳರ ಸಂತೆ ಜಗವೇ ಮಾಯಾಜಾಲ

ನಡೆಸು ನೀ ನಿನ್ನಿಷ್ಟದಂತೇ /

ನಿನ್ನ ಪದ ಕಮಲದಲಿ ಧೂಳಾಗಿ ಬಿಡುವೆನಾ

ಅದು ತಾನೇ ಆ ಸ್ವರ್ಗದಂತೆ /

ಸಂಸಾರ ಸಾಗರದಿ ಈಜಾಡಿ ಸೋಲುವುದು

ಎಲ್ಲವೂ ನಿನ್ನಿಷ್ಟದಂತೇ /

ದೀನ ಬಂಧುವೆ ನಿನ್ನ ಪಾದದಲಿ ಜಾಗ ಕೊಡು

ಇದು ಮಾತ್ರ ನನ್ನಿಷ್ಟದಂತೇ /

ಜೀವನದ ಶರಧಿಯಲಿ ಸಾಗುತಿಹ ನಾವೆಯಲಿ

ಪಯಣಿಗಳು ನಾನಿರುವೆನಂತೆ /

ಅಂಬಿಗನು ನೀನಾಗಿ ಶರಧಿಯನು ದಾಟಿಸು

ಆಗಲೇ ನನಗೆ ನಿಶ್ಚಿಂತೆ /

Creative Writings