Karada Vishwa

News · August 27, 2026

ಕೊಪ್ಪ - ಚಿಟ್ಟೆಮಕ್ಕಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಉಪಾಕರ್ಮ.

ವರದಿ ಕೃಪೆ : ಆದಿತ್ಯ ಹರ್ಡೀಕರ್, ಕೊಪ್ಪ

ಶ್ರಾವಣ ಮಾಸದ ಶ್ರವಣಾ ನಕ್ಷತ್ರದಂದು ಉಪಾಕರ್ಮವನ್ನು ಮಾಡಲಾಗುತ್ತದೆ. ವೇದಾಧ್ಯಯನವನ್ನು ಮರು ಪ್ರಾರಂಭಿಸುವ ಮುನ್ನ ಉಪಾಕರ್ಮವನ್ನು ಮಾಡಲಾಗುತ್ತದೆ.

ಗಣಪತಿ ಪೂಜೆ, ಪುಣ್ಯಾಹ ವಾಚನ, ಪಂಚಗವ್ಯ ಪ್ರಾಶನದ ನಂತರ ಅರುಂಧತೀ ಸಹಿತ ಸಪ್ತರ್ಷಿಗಳ ಆರಾಧನೆಯನ್ನು ಅಗ್ನಿ ಪ್ರತಿಷ್ಠಾಪನೆ ಮಾಡಿ ವಿಧಿವತ್ತಾಗಿ ಹೇಳಿರುವ ಎಲ್ಲಾ ದೇವತೆಗಳಿಗೂ ಹವನವನ್ನು ಮಾಡುತ್ತಾರೆ, ನಂತರದಲ್ಲಿ ಆಚಾರ್ಯರು ದಧಿ-ಸತುವಿನ ಪ್ರಾಶನವನ್ನು ಎಲ್ಲ ಉಪಾಕರ್ಮ ಮಾಡಿಕೊಳ್ಳುವವರಿಗೂ ಮಾಡಿಸುತ್ತಾರೆ.

ಯಜ್ಞೋಪವೀತ ಹೋಮ ಹವನಗಳನ್ನು ಮಾಡಿ, ಯಜೋಪವೀತ ದಾನ - ಧಾರಣೆ ಮಾಡುತ್ತಾರೆ. ತದ ನಂತರದಲ್ಲಿ ದೇವ ಋಷಿ, ಆಚಾರ್ಯ, ಯಮ ಹಾಗೂ ಪಿತೃ ದೇವತೆಗಳಿಗೆ ತರ್ಪಣವನ್ನು ಕೊಟ್ಟ ನಂತರ ಎಲ್ಲ ವೇದಗಳ ಪಾಠವನ್ನು ಪುನಃ ಪ್ರಾರಂಭಿಸುತ್ತಾರೆ.

ಕೊಪ್ಪ ತಾಲೂಕಿನ ಚಿಟ್ಟೆಮಕ್ಕಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಸುಮಾರು 50 ವರ್ಷಗಳಿಂದ ಉಪಾಕರ್ಮವನ್ನು ಎಲ್ಲಾ ಬ್ರಾಹ್ಮಣರು ಸಾಮೂಹಿಕವಾಗಿ ಮಾಡಿಕೊಂಡು ಬರುತ್ತಿದ್ದಾರೆ, ಇದನ್ನು ದೇವಸ್ಥಾನದ ಅರ್ಚಕರಾದ ಶ್ರೀಯುತ ರವೀಂದ್ರ ಪಟವರ್ಧನ್ ಅವರು ನಡೆಸಿಕೊಡುತ್ತಿದ್ದಾರೆ. ಅಂತೆಯೇ ಈ ವರ್ಷವೂ ನಡೆದ ಉಪಾಕರ್ಮದಲ್ಲಿ ಅಂದಾಜು 25 ಮಂದಿ ಭಾಗವಹಿಸಿದ್ದರು

CommunityHeritage
ಕೊಪ್ಪ - ಚಿಟ್ಟೆಮಕ್ಕಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಉಪಾಕರ್ಮ.