Karada Vishwa

Article · October 23, 2026

ಇಂತೀ ಪ್ರಕೃತಿ

By ಶಾರದಾ ಕಜೆಗದ್ದೆ, ಬಾಯಾರು

ಶಾರದಾ ಕಜಕದ್ದೆ

ತನ್ನ ಸಂಪೂರ್ಣ ಪ್ರಾಕೃತಿಕ ಸಮತೋಲನವನ್ನು ಕಳಕೊಂಡ ಭೂಮಿತಾಯಿಯ ಅಸಹಾಯಕತೆಯ ಏಕಾಂಗಿ ಅಳಲು ಹೀಗಿರಬಹುದೇನೋ ಎಂಬ ಯೋಚನೆ.

ನಮಸ್ಕಾರ. ನಾನು ಪ್ರಕೃತಿ. ನಾನು ಕ್ಷೇಮವಾಗಿಲ್ಲ. ನೀವೆಲ್ಲರೂ ಸುಖವಾಗಿದ್ದೀರಿ ಎಂಬುದನ್ನು ಕಣ್ಣಾರೆ ನೋಡುತ್ತಿದ್ದೇನೆ. ನನ್ನನ್ನು ನೀವೆಲ್ಲ ಎಂದೋ ಮರೆತಾಗಿದೆ. ಹಾಗಾಗಿ ನೆನಪಿಸಿದೆ ನನ್ನ ಹೆಸರು ಪ್ರಕೃತಿ ಎಂಬುದಾಗಿ.

ಈ ಸಲದ ಹನ್ನೊಂದು ದಿನಗಳ ದಸರಾ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಅದ್ದೂರಿಯಲ್ಲಿ ಆಚರಿಸಿದ ಎಲ್ಲಾ ಕುರುಹು ನಿಮ್ಮೆಲ್ಲರ ಮನೆ, ದೇವಸ್ಥಾನಗಳ ಮುಂದೆ ರಾರಾಜಿಸುತ್ತಿದೆ. ನನ್ನ ಪ್ರೀತಿಯ ಮಳೆರಾಯನ ಗೈರು ನಿಮ್ಮ ಯಾರನ್ನೂ ಅಷ್ಟಾಗಿ ಕಾಡಿದಂತಿಲ್ಲ. ಇರಲಿ, ಇರಲಿ. ಕೆಲವು ತಿಂಗಳ ಹಿಂದೆ ನಿಮಗೆಲ್ಲ ಒಂದು ಚಾಲೆಂಜ್ ಹಾಕಿದ್ದೆ... ಬದಲಾವಣೆ ಜಗದ ನಿಯಮ ಅಂತ ಹೇಳುತ್ತಿರುವ ನಿಮಗೆ ನಾನೂ ಬದಲಾವಣೆಯ ಹೆಜ್ಜೆಯೂರಲು ಆರಂಭಿಸುತ್ತೇನೆ. ನೀವೂ ನನ್ನ ಜೊತೆ ಬರಲು ಸಾಧ್ಯವಾ ಎಂದು. ಹೇಗಿದೆ ಈ ಸಲದ ಮಳೆ ಚಳಿ ಬಿಸಿಲುಗಳೆಲ್ಲ. ನೀವೆಲ್ಲ ಕ್ಷೇಮವಾಗಿ ಆರಾಮವಾಗಿ ಬಾಳುತ್ತಿದ್ದೀರಲ್ಲ. ಇಲ್ಲಿವರೆಗೆ ಏನೂ ತೊಂದರೆ ಆಗಲಿಲ್ಲ ಅಲ್ವಾ. ಸಕಲ ಸೌಕರ್ಯನ್ನೊಳಗೊಂಡ ಸುಸಜ್ಜಿತ ಮನೆ, ಐಷಾರಾಮಿ ಕಾರು, ಆಧುನಿಕ ಶಾಲೆ/ ಕಾಲೇಜು/ ಆಫೀಸು. ಅಡೆತಡೆಗಳಿಲ್ಲದ ಚತುಷ್ಪಥ ರಸ್ತೆಗಳು. ಬ್ಯಾಂಕ್ ಅಕೌಂಟುಗಳ ತುಂಬ ಸಂಬಳ. ಬೇಕುಬೇಕಾದನ್ನು ಕೊಂಡುಕೊಳ್ಳಲು ಮಾಲ್ಗಳು ಇಲ್ಲವೇ online shopping app ಗಳು. ವಾರಾಂತ್ಯ ರಜೆಗಳನ್ನು ಸಂಭ್ರಮಿಸಲು fb/ insta ಗಳಲ್ಲಿ ಯಾರ್ಯಾರೋ ಹಂಚಿಕೊಂಡ ಹೊಸ ಹೊಸ ಪ್ರವಾಸೀ ತಾಣಗಳ ಭೇಟಿ. ಇನ್ನೇನು ಸ್ವರ್ಗಕ್ಕೆ ಮೂರು ಗೇಣು ಅಲ್ವಾ. ಇರಲಿ ನಿಮ್ಮ ದಿನಗಳು ಹೀಗೆ ಉರುಳುತ್ತಿರಲಿ ಎಂಬುವುದೇ ನನ್ನಾಸೆ.
ಆದರೇನು ಮಾಡುವುದು. ನಿಮ್ಮಿಂದಾಗಿ ಇಂದು ನಾನೂ ಬದಲಾಗಲೇಬೇಕಿದೆ. ಹಾಗೆಂದು ಏಕಾಏಕಿ ನಾನು ಬದಲಾದರೆ ನನ್ನನ್ನು ನಂಬಿ ಬಾಳುವ ಉಳಿದವರ ಚಿಂತೆಯೂ ಕಾಡುತ್ತಿದೆ. ಆದರೆ ನಿಮ್ಮ ಮತಿಭ್ರಷ್ಟ ಕೆಲಸಗಳಿಂದಾಗಿ ನನಗರಿವಿಲ್ಲದೆ ನನ್ನ ಕರ್ತವ್ಯಗಳ ತಾಳ ತಪ್ಪತೊಡಗಿದೆ. ನಾಲ್ಕಾರು ತಿಂಗಳುಗಳ ಕಾಲ ಮಳೆ ಸುರಿಸಬೇಕೆಂದುಕೊಂಡು ಆಕಾಶಮಾರ್ಗದಲ್ಲಿ ಎಷ್ಟು ಸುತ್ತಾಡಿದರೂ ತಂಪನ್ನಿತ್ತು ನನ್ನ ಬರಸೆಳೆಯುವ ಕಾಡುಗಳೇ ಕಾಣುತ್ತಿಲ್ಲ. ಸುತ್ತಾಡಿ ಸುತ್ತಾಡಿ ಸುಸ್ತಾಗಿ ಅದೆಲ್ಲೋ ಕಣ್ಣೀರ ಮಳೆಗರೆದು ಹೋಗುವೆ. ನನಗಾಗಿ ಕಾಯುತ್ತಿರುವ ಕೃಷಿಕರ ಗದ್ದೆ ತೋಟಗಳಿಗೆ ನೀರುಣಿಸಲಾಗುತ್ತಿಲ್ಲ. ನಿಮ್ಮ ರಾಕ್ಷಸೀ ಕೈಗಳಿಂದ ಬಚಾವಾಗಿ ನನಗಾಗಿ ವರ್ಷಪೂರ್ತಿ ಕಾದುಕುಳಿತ ಅಲ್ಪಸ್ವಲ್ಪ ಕಾಡು, ಅದರಲ್ಲಿ ವಾಸಿಸುತ್ತಿರುವ ಅದೆಷ್ಟೋ ಜೀವಜಂತುಗಳು, ಹರಿಯುತ್ತಿರುವ ಝರಿತೊರೆಗಳಿಗೆ ನೀರುಣಿಸಲಾಗುತ್ತಿಲ್ಲ ಎಂಬ ಚಿಂತೆ ಕಾಡುತ್ತಿದೆ. ಈ ನನ್ನ ಅಸಹಾಯಕತೆಯ, ಕರ್ತವ್ಯ ಲೋಪದ ಬೇಗುದಿ ನಿಮ್ಮನ್ನು ತಟ್ಟದಿರಲು ಸಾಧ್ಯವೇ??

ಏನಪ್ಪಾ ಹೀಗೆ ಬ್ಲಾಕ್ ಮೇಲ್ ಮಾಡುತ್ತಿದ್ದೇನೆ ಅಂದುಕೊಳ್ಳಬೇಡಿ.ನಿಮ್ಮ ಉದ್ಯೋಗಕ್ಕೆ, ಐಶಾರಾಮಿ ಮನೆ, ಕಾರು, ಆಫೀಸ್, ಬ್ಯಾಂಕ್ ಅಕೌಂಟ್ ಗಳಿಗೆ ನನ್ನ ಅಭಾವ ಅಥವಾ ಗೈರುಹಾಜರಿಯಿಂದ ಎಳ್ಳಷ್ಟೂ ತೊಂದರೆ ಆಗಲಿಕ್ಕಿಲ್ಲ. ಕೇವಲ ನೀರು ಮತ್ತು ಆಹಾರ ವಸ್ತುಗಳ ಅಭಾವ ಕಾಡೀತು ಅಷ್ಟೇ. ತಾಪಮಾನ ಸ್ವಲ್ಪ ಜಾಸ್ತಿಯೇ ಏರಿತು. ಮತ್ತೇನೂ ಆಗಲಿಕ್ಕಿಲ್ಲ. ಯಾವುದಕ್ಕೂ ನಿಮ್ಮ ಐಷಾರಾಮಿ ಅತ್ಯಾಧುನಿಕ ಜೀವನದತ್ತ ಗಮನವಿರಲಿ.

ಇಂತೀ ನಿಮ್ಮ ಜೊತೆ ಬದಲಾಗುತ್ತಿರುವ
ಪ್ರಕೃತಿ

Creative Writings