
Article · September 18, 2026
ಗಣಪತಿಯ ಗುಂಗು
By ದಿವ್ಯಾ ಶಿರಂತಡ್ಕ
ದಿವ್ಯಾ ಶಿರಂತಡ್ಕ
ಇದು ಸುಮಾರು 45 ವರ್ಷಗಳ ಹಿಂದೆ ನಡೆದ ಘಟನೆ. ಆಗಿನ್ನೂ ನನ್ನೆಜಮಾನರು ಹತ್ತು ವರ್ಷದ ಪುಟ್ಟ ಬಾಲಕ. ಎಲ್ಲಾ ಮಕ್ಕಳಂತೆ ಚೌತಿ ಎಂದರೆ ಅತಿಯಾದ ಉತ್ಸಾಹ, ತನ್ಮಯತೆ. ಆ ಎಳೆ ಪ್ರಾಯದಲ್ಲಿ ಭಕ್ತಿಗಿಂತಲೂ ಕುತೂಹಲವೇ ಹೆಚ್ಚು.
ಆಕರ್ಷಕ ಗಣೇಶನ ಮೃಣ್ಮಯ ಮೂರ್ತಿಯನ್ನು ಕಂಡು ಬೆರಗು. ಪೂಜೆ, ಆರತಿ, ಅವಲಕ್ಕಿ ಪ್ರಸಾದ, ಜನಸ್ತೋಮ, ಜೈಕಾರ ಎಲ್ಲವೂ ಇನ್ನೊಂದು ಅದ್ಭುತ ಲೋಕಕ್ಕೆ ಕರೆದೊಯ್ದಿತ್ತು. ಕೊನೆಗೆ ಗಣೇಶೋತ್ಸವ ಮೆರವಣಿಗೆ ಹಾಗೂ ವಿಸರ್ಜನೆ.
ಅಷ್ಟು ಸುಂದರವಾದ ಗಣೇಶನನ್ನು ಬಾವಿಯಲ್ಲಿ ವಿಸರ್ಜನೆ ಮಾಡುವುದೆಂದು ತಿಳಿದಾಗ ಇನ್ನಿಲ್ಲದಷ್ಟು ಬೇಸರ. ತನ್ನ ಆತ್ಮೀಯರಾರನ್ನೋ ಕಳೆದುಕೊಂಡ ಭಾವ. ಹೇಳುವಂತಿಲ್ಲ, ಅನುಭವಿಸುವಂತಿಲ್ಲ. ಅದೇ ಗುಂಗಿನಲ್ಲಿ ಮನೆಯತ್ತ ಪ್ರಯಾಣ. ಪರಿಚಯದವರೊಬ್ಬರು 'ಗಣಪತಿಯ ಎಲ್ಲಿ' ? ಎಂದು ಕೇಳಿದರು. ಸಪ್ಪೆ ಮೋರೆಯಿಂದ 'ಬಾವಿಯಲ್ಲಿ' ಎಂದಾಗ ಅವರು ಕಕ್ಕಾಬಿಕ್ಕಿ. ಸ್ವಲ್ಪ ಸಾವರಿಸಿಕೊಂಡು 'ಚಿಕ್ಕಪ್ಪ ಎಲ್ಲಿ ಅಂತ ಹೇಳಿದೆ'!? ಎಂದು ಮತ್ತೊಮ್ಮೆ ಕೇಳಿದಾಗಲೇ ಅವರು ಈ ಐಹಿಕ ಪ್ರಪಂಚಕ್ಕೆ ಇಳಿದಿದ್ದು! 'ಅವರು ಪೇಟೆಯಲ್ಲಿ ಇದ್ದಾರೆ' ಎಂದು ಹೇಳಿ ನಾಚಿಕೆಯಿಂದ ತಲೆತಗ್ಗಿಸುತ್ತಾ ಮನೆಯ ದಾರಿ ಹಿಡಿದಿದ್ದರು.
