Karada Vishwa

Article · October 17, 2026

ಮನದ ಲೇಖನ

By ಗಾಯತ್ರಿ ಕೆ ನಾಗರಾಜ ಕೃಷ್ಣಗಾನಂ ,ಬೇಳ

ಗಾಯತ್ರಿ ಕೆ ಅಡ್ಕತೊಟ್ಟಿ

ಕೈಗೆ ಸಿಕ್ಕಿತು ಲೇಖನಿಯೆಂಬ ಖಡ್ಗವು
ಮನೋಮಂಡಲದಿ ಮಿಂಚಿನ ಸಂಚಲನವು
ಮುಸುಕಿಲ್ಲ, ಮುಖವಾಡವಿಲ್ಲ ಇಲ್ಲಿ
ಆತ್ಮವೇ ತಾನಾಗಿ ಅಕ್ಷರವಾಗುವ ಘಳಿಗೆ

ಆ ಖಡ್ಗವು ಕತ್ತರಿಸುವುದು ಸುಳ್ಳಿನ ಪರದೆಯ
ಸೀಳುವುದು ಹೃದಯದಾಳದ ಗಾಢ ನಿಗೂಢವ
ರಣರಂಗದಲಿ ಸತ್ಯದ ಪತಾಕೆಯ ಹಾರಿಸುತ
ಭಾವಗಳ ಸೈನ್ಯವನು ಮುನ್ನಡೆಸುವ ಕ್ಷಣವು

ಮಿಂಚಿನ ಸಂಚಲನ ನಿಂತ ನೆಲೆಯಲ್ಲ
ಅದುಬೆಳಕಾಗಿ ಹರಿವುದು
ಅಕ್ಷರದ ಹೊಳೆಯಲ್ಲಿ
ಒಂದು ಹನಿ ಆಲೋಚನೆ ಸಾಗರವಾಗುತ
ದೂರ ತೀರದ ದಾಹವನು ತಣಿಸುವ ಅಮೃತವು

ಮುಖವಾಡ ಕಳಚಿದ ಮುಖವೇ
ನಿಜದ ಸೌಂದರ್ಯ
ಕಪಟವಿಲ್ಲದ ನುಡಿಯೇ
ಸಾಹಿತ್ಯದ ದಿವ್ಯವು
ಬರೆದದ್ದು ಕಾಗದವಲ್ಲ
ಕೆತ್ತಿದ್ದು ಕಾಲದ ಶಿಲೆಯಲಿ
ಯಾರಿಗೂ ಅಳಿಸಲಾಗದ ಸತ್ಯದ ಶಾಸನವು

ಹೀಗೆ ಅಕ್ಷರವಾದ ಆತ್ಮವು ಮತ್ತೆ ಹಿಂತಿರುಗದು
ಅದು ಓದುಗನ ಎದೆಯಲಿ
ದೀಪವಾಗಿ ಉರಿಯುವುದು
ನನ್ನ ಖುಷಿಯು ಅಲ್ಲಿಗೆ ಮುಗಿಯುವುದು
ಪರರ ಮನದಲ್ಲಿ ನಾನಾಗಿ ಬದುಕುವ ಭಾಗ್ಯದಲಿ

ಆದುದರಿಂದಲೇ ಲೇಖನಿಯು ಖಡ್ಗವಲ್ಲ
ಅದು ಕೀಲಿಕೈ
ಮನದ ಬೀಗವ ತೆರೆದು
ಬೆಳಕನು ತೋರುವ ದಿವ್ಯ ಜ್ಯೋತಿ
ನಾ ಬರೆಯುವೆನು ಎಂಬ ಅಹಂ ಇಲ್ಲ, ಬರೆಯಿಸುತಿಹುದುಕಾಲವೇ
ನನ್ನ ಮೂಲಕ ತನ್ನ ಕಥೆಯನು

Creative Writings