Karada Vishwa

Article · September 7, 2026

ಕೃಷ್ಣಲೀಲೆ

By ಗಾಯತ್ರಿ ನಾಗರಾಜ

ಗಾಯತ್ರಿ ಕೆ ಅಡ್ಕತೊಟ್ಟಿ

ಘನಾಂಧ ತಮಸ್ಸಿನಲಿ ಮಧ್ಯಯಾಮದಲಿ ಜನಿಸಿದೆ ಸೆರೆಮನೆಯೊಳಗೆ
ಆರ್ತಳಾದ ದೇವಕಿಯ ನಯನದಲಿ ಮೂಡಿಹುದು ದಿವ್ಯ ತೇಜಸು ಅಲ್ಲಿ
ಸಂಕೊಲೆಗಳ ಬಂಧನವು ಸಡಿಲವಾಗಿ ಜಾರಿದುದು ವಿಧಿಲೀಲೆಯಲಿ
ಪಂಕಜಾಕ್ಷನ ಆಗಮನಕಂಡು ಧಾರಿಣಿಯು ಹಿಗ್ಗಿದಳು ಹರ್ಷದಲಿ

ವಸುದೇವನ ಶಿರದಿ ಶೋಭಿಸುತಿಹೆ ಜಗದೊಡೆಯನಾಗಿ ನೀನು
ನಸುಗತ್ತಲ ಹಾದಿಯಲಿ ನಡೆದನು ಮೋಡವು ಕೊಡೆಹಿಡಿದು ತಾನು
ವಿಸ್ತರಿಸಿ ತರಂಗಿಣಿ ಯಮುನೆಯು ಉಕ್ಕಿ ನಿಂತಳು ರಭಸದಿ
ಹಸ್ತಸ್ಪರ್ಶದಿಂದ ದಾರಿ ಕೊಟ್ಟಳವಳು ನಿನ್ನ ಪಾದಕಮಲಕೆ ಮುದದಿ

ದುರುಳ ಕಂಸನ ಅಣತಿಯಲಿ ಬಂದಳಲ್ಲ ಪೂತನಿ ಮಾಯೆಯಲಿ
ಮರುಳು ಮಾಡುವ ಮೋಹಕ ರೂಪವ ತಾಳಿ ವಿಷವ ತುಂಬಿ ಎದೆಯಲಿ
ಹರುಷದಿ ತೊಡೆಯೇರಿ ಉಣಿಸೆ ಬಂದವಳ ಉಸಿರನು ಹೀರಿದೆ
ಧರೆಗುರುಳಿ ಬಿದ್ದಳವಳು ನಿನ್ನ ಬಾಲಲೀಲೆಯ ಮುಂದೆ

ಶಕಟ ರೂಪದಲಿ ಬಂದ ಅಸುರನನು ಕಾಲ ತೊಡರಿ ಉರುಳಿಸಿದೆ
ವಿಕಟ ತೃಣಾವರ್ತನನು ಬಿರುಗಾಳಿಯಲಿ ಬರಲು ಮುಷ್ಟಿಯಲಿ ಹಿಂಡಿದೆ
ಪ್ರಕಟವಾಗಿ ಬಕನಂತೆ ಬಂದವನ ಕೊಕ್ಕನು ಸೀಳಿ ವಧಿಸಿದೆ
ಸಕಲ ಗೋಪಕುಲವೇ ಬೆರಗಾಗಿ ಕಂಡಿತು ನಿನ್ನ ಅದ್ಭುತ ಲೀಲೆಯ

ಅಘಾಸುರನು ಹೆಬ್ಬಾಯಿ ತೆರೆದು ಮಲಗಿರಲು ದಾರಿಯಲಿ
ವಿಹರಿಸುತ ಬಂದ ಕರುಗಳ ಸಹಿತ ನುಗ್ಗಿದಿರಿ ಆ ಬಾಯೊಳಗೆ
ಅಹುದಹುದು ಎನುವೊಳಗೆ ಬೆಳೆದು ಅವನ ಉದರವನು ಸೀಳಿದೆ
ಬಹುಬೇಗನೆ ಗೋಪರನು ಕರುಗಳನು ಕಾದೆ ನೀನು ಕೃಪೆಯಲಿ

ಮದದಿಂದ ಮತ್ತೇರಿದ ಗಜವ ಕಳುಹಿದನು ಕಂಸನು ನಿನ್ನೆಡೆಗೆ
ಎದೆಯುಬ್ಬಿಸಿ ಬಂದ ಗಜವ ಕಂಡು ಗೋಪಬಾಲಕರು ಬೆದರೆ ಅಲ್ಲೆ
ಮೃದು ಕರದಿ ಮುಷ್ಟಿಯಿಂದ ವಧಿಸಿ ಕಳುಹಿಸಿದೆ ಯಮಪುರಿಗೆ
ಎದುರಿಲ್ಲ ನಿನಗೆಂದು ಸಾರಿದವು ಗೋಕುಲದ ಗೋವುಗಳು ನಲಿದು

ವಿಕಟ ಕಾಳಿಯನ ವಿಷದಿ ಕಲುಷಿತವಾದ ಯಮುನಾ ತಟದೊಳಗೆ
ನಿಕಟವಾಗಿ ಜಿಗಿದು ಹೆಡೆಗಳ ಮೇಲೆ ನರ್ತಿಸಿ ಮದವಿಳಿಸಿದೆ
ಪ್ರಕಟ ಗೋವರ್ಧನವ ಎತ್ತಿ ಹಿಡಿದೆ ಕಿರುಬೆರಳ ತುದಿಯಲಿ
ಸಕಲ ಗೋಕುಲವ ಕಾದೆ ಕೃಷ್ಣಾ ನಿನ್ನ ಕರುಣಾಮೃತದ ಲೀಲೆಯಲಿ

Creative Writings