Karada Vishwa

Article · April 2, 2026

ರಜೆಯ ಮಜ

(ಕವಿತೆ ) - ಸಂಧ್ಯಾ ಕೊರೆಕ್ಕಾನ

ಬೇಸಿಗೆ ರಜೆಯದು ಬಂದೇಬಿಟ್ಟಿತು
ಮಕ್ಕಳಿಗೆಲ್ಲ ಏನು ಖುಷಿ 
ಆಟದ ಅಂಗಳದಲ್ಲೇ ಇರುವರು 
ತಾಗದು ಅವರಿಗೆ ಹಗಲ ಬಿಸಿ 

ಓಡುತ ಬರುವರು ಕೇಕೆಯ ಹಾಕುತ 
ತಿನ್ನಲು ಒಮ್ಮೆ ಮನೆಒಳಗೆ 
ಮತ್ತೇನದುವು ಕೇಳಿಸದವರಿಗೆ 
ದಿನದಲ್ಲೆಲ್ಲ ಮನೆ ಹೊರಗೆ 

ಅಮ್ಮನ ದಿನವ ಪೀಡಿಸುವವರು
ಅಜ್ಜನ ಮನೆಗೆ ಹೋಗೋಣ
ಮಾವನ ಮಕ್ಕಳು ಇರುವರು ಅಲ್ಲಿ 
ಕ್ರಿಕೆಟ್ ಆಟವ ಆಡೋಣ 

ಈಗಲೆ ಹೊರಟರೆ ಹೇಗದು ಮಕ್ಕಳೆ 
ಬೇಸಿಗೆ ಶಿಬಿರ ಇದೆಯಲ್ಲ 
ದಶದಿನ ಶಿಬಿರವ ಮುಗಿಸಿದ ಬಳಿಕ 
ಹೋಗುವ ಯೋಚನೆ ಸಾಕಲ್ಲ 

ಅಮ್ಮ ನಮಗೆ ಬೇಡವೊ ಈಗ 
ಬೇಸಿಗೆ ಶಿಬಿರದ ಸಹವಾಸ 
ರಜೆಯಲ್ಲಾದರು ಇರುವೆವು ಖುಷಿಯಲಿ 
ಬಂಧನ ಇರದ ಸುಖವಾಸ 

ಮೂಲೆಯ ಮಾವಿನ ಮರದಲಿ ಮಾವು
ಬೆಳೆದಿದೆ ಎಂದರು ಮಾವ
ಅಮ್ಮಗೆ ಹೇಳಿ ಬಳ್ಳಿಲಿ ತುಂಬಾ
ಅರಳಿದೆ ಮಲ್ಲಿಗೆ ಹೂವ

ಹಲಸಿನ ಹಪ್ಪಳ ಮಾಡಲು ಅತ್ತೆಗೆ
ನೆರವನು ನೀಡುವೆವಮ್ಮ
ಬೇಗನೆ ತಲುಪಿಸು ಅಜ್ಜನ ಮನೆಗೆ 
ಅಜ್ಜಿಯ ಪ್ರೀತಿಯು ಸಾಕಮ್ಮ 


Creative Writings
ರಜೆಯ ಮಜ