Karada Vishwa

Article · March 18, 2026

ಯುಗಾದಿ ಆಚರಣೆ ಮತ್ತು ಸಂಪ್ರದಾಯಗಳು

ಲೇಖಕರು : ದಿವ್ಯಾ ಬಿ ಶಿರಂತಡ್ಕ


         ಮಾವಿನ ಬೇವಿನ ತೋರಣ ಕಟ್ಟು,
         ಬೇವುಬೆಲ್ಲಗಳನೊಟ್ಟಿಗೆ ಕುಟ್ಟು!
         ಜೀವನವೆಲ್ಲ ಬೇವೂಬೆಲ್ಲ;
         ಎರಡೂ ಸವಿವನೆ ಕಲಿಮಲ್ಲ!

         ರಸ ಋಷಿ ಕುವೆಂಪು ಅವರ ಯುಗಾದಿ ಹಬ್ಬದ ಕುರಿತ ಕವನದ ಈ ಸಾಲುಗಳು ಸಾರ್ವಕಾಲಿಕ. ಯುಗದ ಆದಿ "ಯುಗಾದಿ" ಎನಿಸಿತು ಎನ್ನುವುದು ಪುರಾಣ ಕಥೆ. ಬ್ರಹ್ಮನು ಪ್ರಪಂಚವನ್ನು ಸೃಷ್ಟಿ ಮಾಡಿದ ದಿನವೇ ಯುಗಾದಿ ಎನ್ನುವುದು ಐತಿಹ್ಯ. ಚೈತ್ರ ಶುದ್ಧ ಪಾಡ್ಯವನ್ನು ಚಾಂದ್ರಮಾನ ಯುಗಾದಿಯಾಗಿ ಆಚರಿಸುತ್ತಾರೆ.  ಈ ಸಮಯದಿಂದ ಗಿಡ, ಮರಗಳು ಹೊಸ ಚಿಗುರು ಪಡೆಯುವವು, ಹೂವುಗಳು ಅರಳುವವು, ಇದು ವಸಂತ ಋತುವಿನ ಆಗಮನದ ಸೂಚನೆಯಾಗಿದೆ. ಇಂತಹ ಸುಂದರ ವಾತಾವರಣದಲ್ಲಿ ಯುಗಾದಿಯ ಶುಭ ದಿನಕ್ಕಾಗಿ ಮನೆಯ ಪರಿಸರವನ್ನು ಸ್ವಚ್ಛ ಮಾಡಿ, ತಳಿರು ತೋರಣಗಳಿಂದ ಶೃಂಗರಿಸಿ, ಆ ದಿನ ಬೆಳಗ್ಗೆ ಮಂಗಲಸ್ನಾನ, ನವವಸ್ತ್ರಧಾರಣ, ತುಳಸಿ ಕಟ್ಟೆ ಹತ್ತಿರ ದೀಪವನ್ನು ಇಟ್ಟು ಪೂರ್ಣ ಪಾತ್ರಗಳೊಂದಿಗೆ ಫಲ ಕಾಣಿಕೆ ಇಟ್ಟು ನಮಸ್ಕರಿಸುವುದು, ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸಿ ಶುದ್ಧಗೊಳಿಸುವ ಪದ್ಧತಿ ಅನಾದಿ ಕಾಲದಿಂದಲೇ ನಡೆದುಕೊಂಡು ಬಂದಿದೆ. ಬೇವು ಬೆಲ್ಲದ ಸೇವನೆ, ಸಿಹಿ ಭಕ್ಷ್ಯ ಸಹಿತ ಮೃಷ್ಟಾನ್ನ ಭೋಜನವೂ ಯುಗಾದಿ ಹಬ್ಬದ ವಿಶೇಷ. ಅಲ್ಲದೆ ಮುಖ್ಯವಾಗಿ ಕರಾಡ ಸಮುದಾಯದಲ್ಲಿ ದೇವರಿಗೆ ' ಅಪ್ಪೆ ಪೈಸು' ಎನ್ನುವ ಸಿಹಿ ಭಕ್ಷ್ಯವನ್ನು ಮಾಡಿ ಸಮರ್ಪಿಸಲಾಗುತ್ತದೆ.
        
        ಯುಗಾದಿಯು ಚಾಂದ್ರಮಾನ ಪಂಚಾಂಗದ ವರ್ಷಾರಂಭ. ಆದ್ದರಿಂದ ದೇವಸ್ಥಾನಗಳಲ್ಲಿ ಅಥವಾ ಮನೆಗಳಲ್ಲಿ ಪಂಡಿತರಿಂದ ಹೊಸ ವರ್ಷದ ಪಂಚಾಂಗವನ್ನು ಪೂಜಿಸಿ, ಓದಿಸುವುದು ಸಂಪ್ರದಾಯವಾಗಿ ಮೂಡಿ ಬಂದಿದೆ. ಅವರು 
ಪ್ರಸ್ತುತ ವರ್ಷದಲ್ಲಿ ಗ್ರಹಗಳ ಸ್ಥಿತಿ, ತಿಥಿ, ನಕ್ಷತ್ರ, ಯೋಗ, ಕರಣ ಇತ್ಯಾದಿಗಳನ್ನು ನೋಡಿ ಆ ವರ್ಷದ ಸಾಮಾನ್ಯ ಫಲ, ಮಳೆಯ ಪ್ರಮಾಣ, ಕೃಷಿ, ರಾಜ್ಯದ ಸ್ಥಿತಿ, ಜನಜೀವನ ಮುಂತಾದವುಗಳ ಬಗ್ಗೆ ವಿವರಿಸಿತ್ತಾರೆ.

ಶತಾಯು ವಜ್ರ ದೇಹಾಯ ಸರ್ವ ಸಂಪತ್ಕರಾಯ ಚ 
ಸರ್ವರೋಗ ವಿನಾಶಾಯ ನಿಂಬಕಂ ದಳ ಭಕ್ಷಣಂ ||

          ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ರೋಗ ನಿವಾರಣೆಗಾಗಿಯೂ ಬೇವು- ಬೆಲ್ಲ ಸೇವನೆ ಮಾಡುತ್ತೇನೆ. ಬೇವು-ಬೆಲ್ಲ ಎನ್ನುವುದು ಬದುಕಿನ ಸಿಹಿ-ಕಹಿ ಅಥವಾ ನೋವು- ನಲಿವಿನ ಪ್ರತೀಕವಾಗಿದೆ. ಹಗಲು ಇರುಳಿನ ಚಕ್ರದಂತೆ ನಿರಂತರವಾಗಿ ನಮ್ಮನ್ನು  ಸುತ್ತುತ್ತಿರುವ ಸುಖ ದುಃಖ ಎನ್ನುವ ಎರಡು ಸ್ಥಿತಿಗಳನ್ನೂ ಸಮಾನವಾಗಿ ಸ್ವೀಕರಿಸಬೇಕು ಎನ್ನುವ ಸಂದೇಶ ಸಾರುತ್ತದೆ. ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ ಬೋಧಿಸಿದ ತತ್ವವೂ ಇದೇ ಆಗಿದೆ. 'ಸುಖದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ'  ಎಂದು. 
    ಚಾಂದ್ರಮಾನ  ಯುಗಾದಿಯಂತೆ ಸೌರಮಾನ ಯುಗಾದಿಯ ಆಚರಣೆಯೂ ಇದೆ. ಮೇಷಮಾಸ ಪ್ರಥಮ ದಿನ ಇದನ್ನು ಆಚರಿಸುತ್ತಾರೆ. ಆ ದಿನ ಒಕ್ಕಲುಗಳು ತಮ್ಮ ಧಣಿಗಳ ಮನೆಗೆ ಫಲವಸ್ತು ಯಾ ಸುವಸ್ತುಗಳನ್ನು ಒಪ್ಪಿಸಿ ದನಿಯ ಕಾಲು ಹಿಡಿದು ಆಶೀರ್ವಾದ ಬೇಡುವ ಕ್ರಮವಿತ್ತು. ಪ್ರತಿಯಾಗಿ ಆ ಮನೆಯವರು ಅವರಿಗೆ ಸಿಹಿಭಕ್ಷ್ಯಗಳಿಂದ ಕೂಡಿದ ಆಹಾರ, ಹೊಸ ಬಟ್ಟೆ  ಉಡುಗೊರೆ ಕೊಡುವ ಪದ್ಧತಿಯೂ ಇದೆ.  ಕರಾಡ ಸಮಾಜದವರು  ಈ ಎರಡೂ ಯುಗಾದಿಗಳನ್ನು ಆಚರಿಸುತ್ತಾರೆ. ಯುಗಾದಿಯಂದು ನಾವು ಹೇಗಿರುತ್ತೇವೆಯೋ ಅದೇ ರೀತಿ ವರ್ಷ ಪೂರ್ತಿ ಇರುತ್ತೇವೆ ಎನ್ನುವ ನಂಬಿಕೆ ಇರುವುದರಿಂದ ಆ ದಿನ ಸುಖ, ಶಾಂತಿ, ಸತ್ಯ, ನಿಷ್ಠೆ, ಧರ್ಮದ ಮೂಲಕ ದಿನ ಕಳೆಯುವುದರಿಂದ ಮುಂದೆ ಬರುವ ಭವಿಷ್ಯದ ದಿನಗಳಲ್ಲಿ ಅಂತೆಯೇ ಬದುಕಿ ಜೀವನ ಸಾರ್ಥಕಗೊಳಿಸುವಂತಾಗಬೇಕು.‌

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ? 
ಎಂದು ಪ್ರಶ್ನಿಸುತ್ತಾರೆ ದ. ರಾ ಬೇಂದ್ರೆಯವರು "ಯುಗಾದಿ" ಎನ್ನುವ ತಮ್ಮ ಕವಿತೆಯ ಸಾಲಿನಲ್ಲಿ.

          ಮನುಜಕುಲಕ್ಕೆ ಮಾತ್ರ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಹಾಗೂ ಒಂದೇ ಯೌವನ! ನಮಗೂ ಸಹ ನಿದ್ದೆಯಿಂದ ಎದ್ದ ಬಳಿಕ, ನಮ್ಮ ಹಳತನ್ನು ಕಳೆದೊಗೆದು, ಹೊಸ ಜೀವನವನ್ನು ಪಡೆಯುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನ್ನುವುದು ಅವರ ಪ್ರಶ್ನೆ. ಪ್ರತಿದಿನವೂ ಕಳೆದುದರ ಬಗ್ಗೆ ಮರೆತು ಹೊಸ ಹುಟ್ಟು ಪಡೆದ ಶಿಶುವಿನಂತೆ,  ಒಳಿತನ್ನೇ ಮೈಗೂಡಿಸಿಕೊಂಡು ಮುಂದುವರಿಯೋಣ. ಆಗ ದಿನದಿನವೂ ನಮಗದು 'ಯುಗಾದಿ'ಯೇ ಆದೀತು.

Creative Writings
ಯುಗಾದಿ ಆಚರಣೆ ಮತ್ತು ಸಂಪ್ರದಾಯಗಳು