Karada Vishwa

Article · August 31, 2026

ಕಾಲಾಯ ತಸ್ಮೈ ನಮಃ

By ಶಾರದಾ ಕಜೆಗದ್ದೆ, ಬಾಯಾರು

ಶಾರದಾ ಕಜಕದ್ದೆ

ಸತ್ಯ, ತ್ರೇತಾ, ದ್ವಾಪರ ಯುಗಗಳ ಕಥೆಗಳಂತೆ ನಮ್ಮ ಈ ಕಲಿಯುಗದ ಕಥೆ ಹೇಗಿದ್ದೀತೋ ಅನ್ನುವ ಸಣ್ಣ ಯೋಚನೆಯ ಕುರಿತ ಲೇಖನ.

ನಾವೆಲ್ಲಾ ರಾಮಾಯಣ, ಮಹಾಭಾರತ ಮತ್ತು ಅನೇಕ ಪುರಾಣ ಸಂಬಂಧೀ ಕಥೆಗಳನ್ನು ಕೇಳುತ್ತಾ, ಓದುತ್ತಾ, ನೋಡುತ್ತ (ಟಿವಿ ಮೊಬೈಲ್ಗಳಲ್ಲಿ) ಬೆಳೆದೆವು. ಇಂದಿಗೂ ಕೂಡ ಪುಸ್ತಕ, ಪೇಪರ್, ಮ್ಯಾಗಜೀನ್,ಟಿವಿ, ಮೊಬೈಲ್ ಗಳಲ್ಲಿ ಮತ್ತೊಮ್ಮೆ ಮಗದೊಮ್ಮೆ ಈ ಪೌರಾಣಿಕ ಕಥೆಗಳನ್ನು ಓದಲು, ನೋಡಲು, ಕೇಳಲು ಮನಸ್ಸು ಹಾತೊರೆಯುತ್ತದೆ. ಯಾಕೆಂದರೆ ನಮಗೆ ತಿಳಿಯದಿರುವ ಅದೆಷ್ಟೋ ಪಾತ್ರಗಳ ಕಥೆಗಳು ಇನ್ನೂ ಅನೇಕವಿರಬಹುದು ಎಂದು ಅನಿಸುವುದು.

ಇಂಥಾ ರಾಮಾಯಣ ಮಹಾಭಾರತಗಳನ್ನು ಅದೆಷ್ಟು ಕವಿಗಳು ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ವಿದೇಶಿ ಭಾಷೆಗಳಿಗೆ ಯಾಥಾವತ್ ತರ್ಜುಮೆ ಮಾಡಿರಬಹುದು. ಅಷ್ಟು ಸಾಲದೆಂಬಂತೆ ಅದೆಷ್ಟು ಕವಿಗಳು , ಸಾಹಿತಿಗಳು, ಲೇಖಕರು ತಾವು ಅರ್ಥೈಸಿದಂತೆ ತಮ್ಮದೇ ದೃಷ್ಟಿಕೋನದಲ್ಲಿ ಅಳೆದು ತೂಗಿ ತಂತಮ್ಮ ಭಾಷೆಗಳಲ್ಲಿ ಕಾವ್ಯಾತ್ಮಕವಾಗಿಯೋ, ಕಥೆಯಾಗಿಯೋ ವರ್ಣಿಸಿರಬಹುದು. ನಾವುಗಳೆಲ್ಲ ನಮ್ಮ ಜೀವಿತಾವಧಿಯಲ್ಲಿ ಮೂಲಕಥೆಯಲ್ಲದೆ ಇತರ ಸಾಹಿತಿಗಳ ಕಥೆ, ಕಾವ್ಯ, ಗದ್ಯ, ಮಂತ್ರ, ಸ್ತೋತ್ರ, ಲೇಖನಗಳನ್ನು ಅದೆಷ್ಟು ಸಲ ಓದಿ ರಸಾನುಭವಿಸಿದ್ದೇವೆ. ಅಷ್ಟಲ್ಲದೆ ಯಕ್ಷಗಾನ, ನಾಟಕ,ಹರಿಕಥೆ, ತಾಳಮದ್ದಳೆ, ವಿವಿಧ ಪ್ರಕಾರದ ನೃತ್ಯರೂಪಕಗಳು, ಸಿನೆಮಾಗಳ ರೂಪದಲ್ಲಿ ಇನ್ನೂ ಇನ್ನೂ ಪ್ರದರ್ಶನಗೊಳ್ಳುತ್ತಿದೆ. ಇನ್ನು ದಾಸರಪದಗಳಿಗೆಲ್ಲ ಮೂಲವಸ್ತುವೇ ಈ ಶ್ರೇಷ್ಠ ಪೌರಾಣಿಕ ಕಥಾಪಾತ್ರಗಳು. ಹೀಗೆ ನಮ್ಮ ಪಂಚೇಂದ್ರಿಯಗಳಿಂದಲೂ ನೂರಾರುಸಲ ಅವುಗಳನ್ನು ಅನುಭವಿಸಿದ್ದರೂ ಎಂದಿಗೂ ಸಾಕು, ಎಲ್ಲವೂ ತಿಳಿದಾಯಿತು ಎಂದು ಯಾವತ್ತಿಗೂ ಅನಿಸಿದ್ದಿಲ್ಲ.

ಇನ್ನು ಈ ಕಲಿಯುಗದಲ್ಲಿ ಮಹಾವಿಷ್ಣುವು ತನ್ನ ಕೊನೆಯ, ಹತ್ತನೆಯ ಅವತಾರವಾದ ಕಲ್ಕಿಯ ರೂಪದಲ್ಲಿ ಜನ್ಮವೆತ್ತಿ ಅಧರ್ಮವನ್ನು ಕೊನೆಗಾಣಿಸುವನು ಎಂಬ ಕಥೆಯನ್ನು ನಾವೆಲ್ಲ ಓದಿರುತ್ತೇವೆ. ಅವನು ಶ್ವೇತವರ್ಣದ ಕುದುರೆಯನ್ನೇರಿ ಖಡ್ಗಧಾರಿಯಾಗಿ ಬಂದು ಅಧರ್ಮದ ಅಹಂಕಾರದಲ್ಲಿ ಮೆರೆದಾಡುತ್ತಿರುವ ಮ್ಲೇಚ್ಛರನ್ನು ಸಂಹಾರ ಮಾಡುವನು ಎಂಬುದಾಗಿ ಜಯದೇವ ಕವಿಯು ದಶಾವತಾರ ಸ್ತೋತ್ರದಲ್ಲಿ ಉಲ್ಲೇಖಿಸಿರುತ್ತಾರೆ.

ಮ್ಲೇಚ್ಛನಿವಹನಿಧನೆ ಕಲಯಸಿ ಕರವಾಲಮ್ l
ಧೂಮಕೇತುಮಿವ ಕಿಮಪಿ ಕರಾಲಮ್ ll
ಕೇಶವಧೃತ ಕಲ್ಕಿಶರೀರ ಜಯ ಜಗದೀಶ ಹರೇ ll

ಹಾಗಾದರೆ ಈ ಮ್ಲೇಚ್ಛರು ಅಂದರೆ ಯಾರಿರಬಹುದು??!! ಬೇರೆ ಯಾರೋ ಅಲ್ಲ. ಅಧರ್ಮಿಗಳು, ಅಹಂಕಾರಿಗಳು, ಅವೈದಿಕರು, ಪ್ರಕೃತಿನಾಶಕರು. ಯೋಚನೆ ಮಾಡಿ ನೋಡಿ. ಒಂದು ರೀತಿಯಲ್ಲಿ ನಾವೆಲ್ಲ ಅದೇ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವೆ. ಇಂದು ನಾವೆಲ್ಲಾ ದೇವರ ಅಸ್ತಿತ್ವ, ದೈವಬಲ, ಭಾರತೀಯ ಸಂಸ್ಕಾರ, ಸಂಪ್ರದಾಯಗಳೇ ಆಧಾರವಾಗಿರುವ ಸರಳಸುಂದರ ಆರೋಗ್ಯಕರ ಜೀವನಶೈಲಿಯನ್ನು ಪ್ರಶ್ನೆ, ಹಾಸ್ಯ ಮಾಡುತ್ತಾ ದುಡ್ಡಿನ ದರ್ಪದಲ್ಲಿ ಅನಾರೋಗ್ಯಕರ, ಅವೈಜ್ಞಾನಿಕ ಐಷಾರಾಮಿ ಜೀವನ ವಿಧಾನಕ್ಕೆ ಒಗ್ಗಿಕೊಂಡಾಗಿದೆ. ನಮ್ಮ ಪಾರಂಪರಿಕ ವೈದಿಕ, ಆಧ್ಯಾತ್ಮಿಕ ಶಿಕ್ಷಣವನ್ನು ಸಂಪೂರ್ಣವಾಗಿ ಅವಗಣಿಸಿ ಕೇವಲ ಉದ್ಯೋಗ, ಅರ್ಥಸಂಪಾದನೆಯ ನಿಮಿತ್ತವಾಗಿರುವಂಥ ಭೌತಿಕ, ಲೌಕಿಕ ವಿದ್ಯಾಭ್ಯಾಸದತ್ತ ಮುಖಮಾಡಿಯಾಗಿದೆ. ಇದರ ಪರಿಣಾಮವಾಗಿ ಅತ್ಯಂತ ಒತ್ತಡಯುಕ್ತ ಅನಾರೋಗ್ಯಕರ ಜೀವನ ಶೈಲಿಯನ್ನು ಬರಮಾಡಿಕೊಂಡಿದ್ದೇವೆ. ಧನಬಲದ ಅಹಂಕಾರದಲ್ಲಿ ಈ ಭೂಮಿ ಕೇವಲ ಮನುಜನೊಬ್ಬನಿಗೆ ಮಾತ್ರ ಸೇರಿದ್ದು ಎನ್ನುವ ಸ್ವಾರ್ಥ ಮನೋಭಾವದಲ್ಲಿ, ಅವೈಜ್ಞಾನಿಕ ಅಭಿವೃದ್ಧಿಯ ಸೋಗಿನಲ್ಲಿ ಪ್ರಕೃತಿಯನ್ನು ಎಷ್ಟು ಅಮಾನುಷವಾಗಿ ದುರ್ಬಳಕೆ ಮಾಡುತ್ತಿದ್ದೇವೆ. ಇಡೀ ಸೃಷ್ಟಿಗೆ ಮೂಲಾಧಾರವಾಗಿರುವಂಥ ನೀರು, ಗಾಳಿ, ಅಗ್ನಿ, ಮಣ್ಣು ಮತ್ತು ಆಕಾಶ ಎಂಬ ಪಂಚಭೂತಗಳನ್ನು ಕಿಂಚಿತ್ ಅಪರಾಧಿಭಾವವಿಲ್ಲದೆ ವಿಷಮಯವಾಗಿಸಿದ್ದೇವೆ. ಅಷ್ಟಲ್ಲದೆ ದೇಶ ವಿದೇಶಗಳೆಂಬ ವಿಂಗಡಣೆ, ಇನ್ನೊಂದು ದೇಶವನ್ನು ಬಗ್ಗುಬಡಿಯಲು ಇನ್ನಿಲ್ಲದ ಹೋರಾಟ, ಕೇವಲ ಮಾನವ ಜಂತುವನ್ನು ಮಾತ್ರ ಪರಿಗಣಿಸಿ, ಉಳಿದ 99.99% ಜೀವಸಂಕುಲವನ್ನೊಳಗೊಂಡ ಪ್ರಕೃತಿಯನ್ನು ಸಂಪೂರ್ಣವಾಗಿ ಮರೆತು ಮಾಡುವ ವಿನಾಶಕಾರಿ ಯುದ್ಧಗಳು ಭೂಮಿಯನ್ನೇ ನಲುಗುವಂತೆ ಮಾಡುತ್ತಿವೆ. ಇದೇ ಮುಂದೊಂದು ದಿನ ಭೂಮಿಯ ಅಸ್ತಿತ್ವಕ್ಕೆ ಕುತ್ತಾದಾಗ ಅಂಥ ಮ್ಲೇಚ್ಛಗುಣ ವಿಪರೀತಕ್ಕೇರಿದ ವಿನಾಶಕಾರಿ ಮಾನವನ ಸರ್ವನಾಶ ನಿಶ್ಚಿತವೆನಿಸಿದಾಗ ಸೃಷ್ಟಿಕರ್ತನು ತನ್ನ ಕಾರ್ಯವನ್ನು ಕಲ್ಕಿಯ ರೂಪದಲ್ಲಿ ಬಂದು ನೆರವೇರಿಸುವುದು ಖಚಿತ ಎಂದೆನಿಸದೆ ಇರದು.

ಇದನ್ನೆಲ್ಲಾ ಯೋಚಿಸುತ್ತಿದ್ದಾಗ ಈ ಕಲಿಯುಗದ ಕಥೆಯನ್ನು ವಾಲ್ಮೀಕಿ, ವ್ಯಾಸರಂತೆ ಅಷ್ಟು ಕಾವ್ಯಾತ್ಮಕವಾಗಿ, ಅತ್ಯಂತ ಕುತೂಹಲಕಾರಿಯಾಗಿ ಯಾರು ಬರೆದಾರೂ ಎಂಬ ಆಲೋಚನೆ ಬಂದು ಮನಸ್ಸಲ್ಲೇ ನಕ್ಕುಬಿಟ್ಟೆ. ಯಾಕೆಂದರೆ ಈಗಿನ ಈ ಟಿವಿ, ಮೊಬೈಲ್ ಗಳಲ್ಲಿ ಬರುವ ಸಿನಿಮಾ, ಧಾರಾವಾಹಿ, reels, stories, web series ಗಳ ಚಿತ್ರವಿಚಿತ್ರ fashion, trend, life style ಗಳ ಅಂಧ ಅನುಕರಣೆ, gen z ಗಳ ಹುಚ್ಚು ಆಲೋಚನೆಗಳು, ದೇಶ ದೇಶಗಳ ನಡುವಿನ ಯುದ್ಧದ ವಿಚಿತ್ರ ಕಾರಣಗಳು, ಅಭಿವೃದ್ಧಿಯ ಧಿಮಾಕಿನಲ್ಲಿ ಪ್ರಕೃತಿಯ ಸರ್ವನಾಶ, ಸ್ವಂತ ಆರೋಗ್ಯವನ್ನೂ ಕಡೆಗಣಿಸಿ ಹಣ, ಐಷಾರಾಮ, ಆಧುನಿಕತೆಯ ಕಡೆಗಿನ ಅರ್ಥವಿಲ್ಲದ ವ್ಯಾಮೋಹ ಇಂಥಾ ಅತಿರೇಕಗಳನ್ನೆಲ್ಲ ಒಗ್ಗೂಡಿಸಿ ಅಷ್ಟೊಂದು ಆಸಕ್ತಿದಾಯಕವಾಗಿ, ಕಾವ್ಯಾತ್ಮಕವಾಗಿ ನಿರೂಪಿಸಲು ನಮ್ಮೆಲ್ಲರ ನೆಚ್ಚಿನ ಹೆಮ್ಮೆಯ ಆಂಗ್ಲಭಾಷೆಯಿಂದ ಸಾಧ್ಯವೇ??!! ಸಂಸ್ಕೃತ ಮತ್ತು ಸಂಸ್ಕೃತ ಆಧಾರಿತ ಭಾರತೀಯ ಭಾಷೆಗಳಿಗಿರುವಷ್ಟು ತಾಕತ್ತು, ವ್ಯಾಪ್ತಿ, ಆಳ, ಸಾಮರ್ಥ್ಯ, ಗಾಂಭೀರ್ಯ ಯಾವುದಾದರೂ ಬೇರೆ ಭಾಷೆಗಳಿಗಿದ್ದೀತೆ!!

ನಾವು ಇನ್ನೂ ಕಲಿಯುಗದ ಮೊದಲ ಪಾದದಲ್ಲಿ ಜೀವಿಸುತ್ತಿದ್ದೇವಷ್ಟೇ. ಹಾಗಾದರೆ ಯುಗದ ಕೊನೆಕೊನೆಯ ದಿನಗಳಲ್ಲಿ ಜನಿಸಬಹುದಾದ ಜೀವಿಗಳ ಜೀವನ ಅದಿನ್ನು ಹೇಗಿರಬಹುದು? ಕಲ್ಪನಾತೀತ!! ಇನ್ನು ಅಂತ್ಯ, ಕಾದುನೋಡಬೇಕಷ್ಟೇ. ಯುಗಧರ್ಮವೇ ಇಂತಿರುವಾಗ ನಾವು ಮಾಡುವುದೇನಿದೆ ಅಲ್ಲವೇ.

ಕಾಲಾಯ ತಸ್ಮೈ ನಮಃ.

Creative Writings
ಕಾಲಾಯ ತಸ್ಮೈ ನಮಃ