Karada Vishwa

Article · September 20, 2026

ಚೈತನ್ಯ

ವೀಣಾ ಎಂ ಭಟ್

ಮನಕೆ ಮುದ ನೀಡುವ ನಗುವಿನಲೆಯಲಿ ತೇಲಿ

ಮನದಲಿಹ ಸಂಕಟವು ಹೊರ ಹರಿದು ಬರಲಿ

ಮಾನಸ ಸರೋವರವು ನಿತ್ಯ ಹರಿದ್ವರ್ಣದಲಿ

ಮುಗ್ಧ ಮನವೇ ನೀ ಏತಕೇ ಕೊಡುವೆ ಬಲಿ

ಸಂಸಾರ ಸಾಗರದಿ ಬರುವ ಏರುಪೇರುಗಳೆಲ್ಲ

ಸಹಜವದು ಮಾನವಗೆ ದೈವದತ್ತವು ಎಲ್ಲ

ಸಕಲ ಸಂಕಟವು ನಿನಗೆಂದೂ ತೀರುವುದಿಲ್ಲ

ಸವಿನುಡಿಯ ನಗುವಲ್ಲಿ ವರ್ಣರಂಜಿತವೆಲ್ಲ

ಗೆಳೆತನದ ಬಂಧವದು ಎಳೆತನವ ನೀಡುವುದು

ಗತಿಸಿದ ಭಾವವದು ಎಳೆಯಾಗಿ ತೇಲುವುದು

ಗರ್ಭಗುಡಿಯಲಿ ಅವಿತ ನುಡಿಮುತ್ತುಗಳ ಸೆಳೆದು

ಗೂಡುಕಟ್ಟಿದ ಮೌನ ಮಾತಾಡ ಬಯಸುವುದು

ಗೆಳೆತನದ ಬಳಗದಲಿ ಸ್ನೇಹದಲಿ ಮೈಮರೆತು

ಗೂಡಿನಿಂದ ಹೊರಬಂದ ಗಿಳಿಮರಿಯ ತೆರದಿ

ಗಾಳಿಯಲಿ ತೇಲಾಡಿ ಬಾನಿನಲಿ ಬಾನಾಡಿ

ಗೂಡು ಸೇರುವ ಮುನ್ನ ತನ್ನಿಚ್ಛೆಯ ತೆರದಿ

Creative Writings