Karada Vishwa

Article · June 7, 2026

ವರ್ಷಧಾರೆ

- ವೀಣಾ ಎಂ. ಭಟ್

ಮೇಘದ ನಡೆಗೆ ಸಿಡಿಲಿನ ಅಬ್ಬರ 
ವರ್ಷದ ಧಾರೆಯು ಸುರಿದಾಯ್ತು 
ಬಿಸಿಲಿನ ಬೇಗೆಯು ನೀಗಲು ಧರೆಗೆ 
ಹಸಿರಿನ ಹೊದಿಕೆಯ ತಂಪಾಯ್ತು 

ರೈತನು ತನ್ನ ಪರಿಕರದೊಡನೆ 
ನಡೆದನು ಹೊಲಕೆ ಆನಂದದಲಿ 
ನೇಗಿಲ ನೊಗವನು ಹಿಡಿದ ಹೊಲದಲಿ 
ಸಂಸಾರದ ನೊಗವು ಬಗಲಲ್ಲಿ 

ತುಂತುರು ಮಳೆಯ ಇಂಪಿನ ಗಾನಕೆ 
ಮಂಪರು ಕವಿಯಿತು ಮುಂಜಾವಿನಲಿ 
ತಂಪಿನ ಧಾರೆಗೆ ತನುವಿಗು ಸೊಂಪಿದು 
ಕಂಗಳು ಹರುಷದ ಕಡಲಲ್ಲಿ 

ಗುಡುಗಿನ ಸದ್ದಿಗೆ ಬೆಡಗಿನ ನವಿಲದು 
ಗರಿಗಳ ಕೆದರಿ ತಾಳದಲಿ 
ಹೆಜ್ಜೆಯ ತನನ ಸಜ್ಜೆಯ ಮಿಲನ 
ಕಾದಿಹ ನಲ್ಲೆಯ ಜೊತೆಯಲ್ಲಿ 

ಇಳೆಯಲಿ ಕೊಳೆತಿಹ ಕೊಳೆಯನು ತೊಳೆಯುತ 
ಹೊಳೆಯದು ಸಾಗಿ ಸಾಗರದೆಡೆಗೆ 
ಮಳೆಯ ನಿರಂತರ ಹನಿಹನಿ ನೀರಿಗೆ 
ಕಳೆ ತಲೆ ಎತ್ತಿತು ಬಾನೆಡೆಗೆ 


Creative Writings