Karada Vishwa

Article · July 9, 2026

ಹಿತವೆಂತು ಜಗಕೆಂದು ಕೇಳುವವರಾರು??

--ಶಾರದಾ ಕಜೆಗದ್ದೆ, ಬಾಯಾರು

ಗತಿಯೇನು ಎನಗೆನುತ ಕೇಳ್ವವರೇ ಎಲ್ಲರುಂ

ಹಿತವೆಂತು ಜಗಕೆಂದು ಕೇಳುವವರಾರು?

ಮತಿಯ ವಿಶ್ವದಿ ಬೆರಸಿ ಜೀವಿತವ ವಿಸ್ತರಿಸೆ

ಪಥಮುಕ್ತಿಗಾಗಲೇ - ಮಂಕುತಿಮ್ಮ

ಇವು ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗದ ಅತ್ಯಂತ ಅರ್ಥಪೂರ್ಣ ಸಾಲುಗಳು. ಪ್ರಸ್ತುತ ಪ್ರಕೃತಿಯ ಸ್ಥಿತಿಗತಿಯನ್ನು ಅರ್ಥೈಸಿ ಎಲ್ಲರೂ ತಂತಮ್ಮನ್ನು ಪ್ರಶ್ನಿಸಬೇಕಾದ ರೀತಿಯನ್ನು ಎತ್ತಿ ತೋರಿಸುತ್ತವೆ.

ಇತ್ತೀಚಿನ ವರುಷಗಳಲ್ಲಿ ಮಳೆಪ್ರಮಾಣದಲ್ಲಿ ಎದ್ದುಕಾಣುವ ವ್ಯತ್ಯಯವಾಗುತ್ತಿದೆ. Red alert yellow alert ಗಳು, ರಣ ಮಳೆ, ಗಾಳಿಯ ವೇಗ, ಬೇಕಿದ್ದಲ್ಲಿ ಮಳೆಯ ಹನಿಗಳ ಗಾತ್ರ, ಸಂಖ್ಯೆ ಹೀಗೆ ಎಲ್ಲಾ ಲೆಕ್ಕಾಚಾರಗಳನ್ನು ಮುಂಚಿತವಾಗಿ ಕೊಡುವಷ್ಟರ ಮಟ್ಟಿಗೆ ವಿಜ್ಞಾನ ತಂತ್ರಜ್ಞಾನ ಮುಂದುವರಿದಿದೆ. ಆದರೆ ಮಾಹಿತಿಯ ನಿಖರತೆ ಶಾಲೆಗೆ ರಜೆ ಘೋಷಿಸಿದಂದು ತಿಳಿಯುತ್ತದೆ. ಮಳೆಯ ವ್ಯತ್ಯಯದಿಂದ ನೇರ ಪರಿಣಾಮ ಬೆಳೆಸಿದ ಬೆಳೆಗಳು ಕೈಗೆ ಸಿಗುವ ಮೊದಲೇ ನೆಲಕಚ್ಚಿದಾಗ. ಮಾಡಿದ ಖರ್ಚು, ಪಟ್ಟ ಕಷ್ಟಕ್ಕೆ ತಕ್ಕ ಫಲ ದೊರೆಯದೆ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವುದೇ ದಾರಿ. ಕೃಷಿಕನ ಪಾಡು ಇಂತಾದರೆ ಕೊಳ್ಳುವವನ ಕಥೆ ಹೆಚ್ಚಿನ ಬೆಲೆ ತೆತ್ತಾಗ ತಿಳಿಯುತ್ತದೆ. ಇನ್ನು ಶಾಲೆಗೆ, ಉದ್ಯೋಗಕ್ಕೆ, ಅಥವಾ ಇನ್ಯಾವುದೋ ಉದ್ದೇಶಕ್ಕೆಂದು ಮನೆಯಿಂದ ಹೊರಟಾಗ ಮಳೆ ಬಂದರೆ ಆಗಲೂ ಎಲ್ಲರೂ ಹಿಡಿಶಾಪ ಹಾಕುವವರೇ. ಮಳೆ ಧಾರಾಕಾರವಾಗಿ ಸುರಿದು ಊರುಕೇರಿ ಮುಳುಗಿದರೆ, ಗುಡ್ಡಬೆಟ್ಟ ಕುಸಿದರೆ ಆಗಲೂ ಮಳೆಯನ್ನೂ ಶಪಿಸುವವರೇ.

ಇನ್ನು ಬೇಸಗೆ ಕಾಲ ಬಂತೆಂದರೆ ಮನೆಯಿಂದ ಹೊರಗಡೆ ಹೋಗಲು ವಿಪರೀತ ಬಿಸಿಲತಾಪ ಎಂದು ಕೋಪ. ಮನೆಯೊಳಗೆ ಇರಲು ಸೆಖೆ ಎಂದು ಸಿಟ್ಟು. ಸಂಜೆಯ ಹೊತ್ತಿಗೆ ಬಿಸಿಲ ಝಳಕ್ಕೆ ಬೆವರಿ ತಲೆನೋವೆಂಬ ಕಾರಣಕ್ಕೆ ಮುನಿಸು. ಎಷ್ಟು ಸಲ ಸ್ನಾನ ಮಾಡಿದರೂ ಮೈಯೆಲ್ಲ ಅಂಟoಟು ಎಂಬ ಅಸಮಾಧಾನದಲ್ಲಿ ರಾತ್ರಿಯೂ ಸರಿಯಾಗಿ ನಿದ್ದೆ ಮಾಡಲಾಗುತ್ತಿಲ್ಲ ಎಂಬ ಸಂಕಟ. ಹೀಗೆ ಬೇಸಗೆ ಎಂದರೆ ಬೇಸರ. ಬೇಸಗೆಯ ಬೇಗೆಯಲ್ಲಿ ಬೆಂದು ನೊಂದು ಕಾದು ಕುಳಿತರೆ ಎಲ್ಲರ ನೆಚ್ಚಿನ ಚಳಿಗಾಲ ಇತ್ತೀಚೆಗೆ ಇನ್ನಿಲ್ಲವಾಗಿದೆ. ಅದಕ್ಕೂ ಬೇಜಾರು.

ಇಷ್ಟೆಲ್ಲ ಏರುಪೇರುಗಳಾದರೂ ಯಾಕೆ ಹೀಗಾಗುತ್ತಿದೆ ಎಂದು ಚಿಂತನಮಂಥನ ಮಾಡುವವರಿಲ್ಲ. ಹೀಗೆ ಮುಂದುವರಿದರೆ ಮುಂದೇನು ಎಂದು ಯೋಚಿಸುವವರಿಲ್ಲ. ನಾವೇ ಇಷ್ಟು ತೊಂದರೆ ಅನುಭವಿಸುತ್ತಿದ್ದೇವೆಂದರೆ ಇನ್ನು ಈ ಭೂಮಿಯಲ್ಲಿರುವ ಕೋಟ್ಯಂತರ ಚರಾಚರ ಜೀವಜಂತುಗಳಿಗೆ ಇನ್ನೆಷ್ಟು ತೊಂದರೆ ಆಗಿದ್ದಿರಲಿಕ್ಕಿಲ್ಲ? ನಮ್ಮನ್ನೆಲ್ಲ ಸಾಕಿ ಸಲಹುತ್ತಿರುವ ಈ ಪ್ರಕೃತಿಗೆ ಎಷ್ಟೊಂದು ಸಂಕಷ್ಟವಾಗಿರದು?

ನಿಯಮಾನುಸಾರ ಬದಲಾಗುತ್ತಿರುವ ಮಳೆಚಳಿ ಬೇಸಗೆ ಕಾಲಗಳನ್ನೇ ಏರುಪೇರು ಮಾಡಿರುವಂಥ ನಮಗೇ ಏನಾಗುತ್ತಿದೆ,ಯಾಕಾಗುತ್ತಿದೆ ಎಂದು ಗೊತ್ತಾಗದಿರುವಾಗ ಈ ಹವಾಮಾನ, ಪ್ರಕೃತಿ, ಭೂಮಿತಾಯಿ ಇನ್ನೇನು ತಾನೇ ಮಾಡಲು ಸಾಧ್ಯ?

ನಾವೊಬ್ಬರೇ ಈ ಭೂಮಿಯಲ್ಲಿರುವ ಜೀವಿಗಳು ಅನ್ನುವ ಆಲೋಚನೆ ಅಲ್ಲವೇ ನಮ್ಮೆಲ್ಲರಲ್ಲೂ. ಆದರೆ ಅದೆಷ್ಟೋ ಕೋಟ್ಯಂತರ ಚರಾಚರ ಜೀವಜಂತುಗಳಿಗೆ ಈ ಭೂಮಿ ಆಧಾರವಾಗಿದೆ. ಮಾನವನೊಬ್ಬನದೇ ತಪ್ಪಿನ ದುಷ್ಪರಿಣಾಮವನ್ನು ಎಲ್ಲಾ ಕೋಟ್ಯಂತರ ಜೀವರಾಶಿಗಳಲ್ಲದೇ ಪ್ರಕೃತಿಯನ್ನೊಳಗೊಂಡು ಇಡೀ ಭೂಲೋಕವೇ ಅನುಭವಿಸುತ್ತಿವೆ. ಈ ಭೂಮಿಯು ಪಂಚಭೂತಗಳಿಂದ ಸಂರಚನೆಯಾಗಿದೆ. ಆಕಾಶ, ಸೂರ್ಯಚಂದ್ರರು, ಹಗಲಿರುಳು, ಮಳೆ, ಚಳಿ,ಬೇಸಗೆ ಕಾಲಗಳು , ವಾತಾವರಣ, ಹವಾಮಾನ, ಪ್ರಕೃತಿ, ಪರಿಸರ, ಹೀಗೆ ಪ್ರತಿಯೊಂದು ಆಧಾರಸ್ತಂಭವೂ ಈ ಅಕಾಲಿಕತೆಯ ಪರಿಣಾಮವನ್ನು ಅನುಭವಿಸುತ್ತಿದೆ.

ಹೌದು ಇದಕ್ಕೆಲ್ಲ ಏನು ಕಾರಣ,ಯಾರು ಕಾರಣ? ನಾವೇ ಮತ್ತು ಕೇವಲ ನಾವೇ. ನಮ್ಮ ಮನೆ ಸುಧೃಢ,ಸುಂದರವಾಗಿರಬೇಕು. ಮನೆಯಂಗಳ ಮಣ್ಣುಧೂಳು ಮುಕ್ತವಾಗಿರಬೇಕು. ಕೆರೆಬಾವಿಗಳು ಅನವಶ್ಯಕ ಸ್ಥಳವನ್ನು ನುಂಗುತ್ತವೆ. ಐಷಾರಾಮಿ ವಾಹನದಲ್ಲಿ ದುಬಾರಿ ಉಡುಗೆತೊಡುಗೆಗಳಿಂದ ಅಲಂಕೃತಗೊಂಡು ಸರ್ವಸಜ್ಜಿತ ಡಾಮರೀಕೃತ ರಸ್ತೆಗಳಲ್ಲಿ ಸಂಚಾರ. ಶಾಲೆ, ಕಛೇರಿ,ಹೋಟೆಲ್,ಮಾಲ್, ಅಂಗಡಿ ಮುಂಗಟ್ಟುಗಳು,ಮದುವೆ ಮುಂಜಿ ಹಾಲ್, ಹೀಗೆ ಎಲ್ಲವೂ ಅತ್ಯಾಧುನಿಕತೆಯಿಂದ ಸರ್ವಾಲಂಕೃತ. ಎಲ್ಲೂ ಒಂದು ಚೂರು ಶುದ್ಧ ಧೂಳು, ಮಣ್ಣು, ನೀರು,ಗಾಳಿ,ಸೂರ್ಯನ ಬೆಳಕು ಕಾಣಸಿಗದು. ಎಲ್ಲವೂ ಯಾಂತ್ರೀಕೃತ, ಕೃತಕ.

ನಮ್ಮ ಈ ಅತಿರೇಕದ ಯಾಂತ್ರಿಕ, ಕೃತಕ ಜೀವನ ಶೈಲಿ ಇಂದಿನ ಈ ಮಳೆಬಿಸಿಲುಚಳಿಗಳ ಅನಿಶ್ಚಿತ ಅಕಾಲಿಕತೆಗೆ ನೇರಕಾರಣ. ಭೂಮಿಯ ಮೇಲಿನ ಕಾಡುಗಳ, ಬೆಟ್ಟಗುಡ್ಡಗಳ, ಕಲ್ಲುಬಂಡೆಗಳ ಸರ್ವನಾಶ ಮತ್ತು ತದ್ವಿರುದ್ಧವಾಗಿ ಕಾರ್ಖಾನೆಗಳಲ್ಲಿನ ಅನವಶ್ಯಕ ಉತ್ಪಾದನೆ, ಕಾಂಕ್ರಿಟೀಕರಣ ಹಾಗೂ ಡಾಮರೀಕರಣ ಇವೇ ಈ ಸಂಪೂರ್ಣ ಅಸಮತೋಲನಕ್ಕೆ ಕಾರಣ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಾಯಿತಲ್ಲ...

Creative Writings